
mysore | ಧರ್ಮಸ್ಥಳಕ್ಕೆ ಬಿಜೆಪಿ ಯಾತ್ರೆ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಮೈಸೂರು (ಸಿದ್ಧರಾಮನಹುಂಡಿ), ಸೆಪ್ಟೆಂಬರ್ 01: ಊರಿನ ಋಣ ಯಾವಾಗಲೂ ನನ್ನ ಮೇಲೆ ಇದ್ದೇ ಇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ವರುಣಾ ವಿಧಾನಸಭಾ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾಧ್ಯಮದವರ ಜೊತೆ ಮಾತನಾಡಿದರು.
ನನ್ನ ಊರಿನ ಶಾಲೆಯಲ್ಲಿ ನಾನು ಐದರಿಂದ ಏಳರವರೆಗೆ ಓದಿದ ಶಾಲೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ದತ್ತು ಪಡೆದಿದೆ. ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನೂತನ ಕಟ್ಟಡವನ್ನು ನಿರ್ಮಿಸ ಲಾಗಿದೆ. ಈ ಕಟ್ಟಡವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ ಎಂದರು
ಪ್ರಾರ್ಥಮಿಕ, ಪ್ರೌಢಶಾಲೆ, ಪಿಯು ಕಾಲೇಜು ಇಲ್ಲಿ ನಡೆಯುತ್ತಿದೆ. ಪದವಿ ಕಾಲೇಜಿಗೆ ವಿದ್ಯಾರ್ಥಿಗಳು ದೊರೆಯುವುದಿಲ್ಲ ಎಂದು ಪದವಿ ಕೋರ್ಸು ತೆರೆದಿಲ್ಲ ಎಂದರು. ಆದರೆ ಊರಿನಲ್ಲಿ ಇತರೆ ಸೌಲಭ್ಯಗಳಾದ ಬಿಸಿಎಂ ವಿದ್ಯಾರ್ಥಿ ನಿಲಯ, ಪಶು ಚಿಕಿತ್ಸಾ ಕೇಂದ್ರ , ಗ್ರಂಥಾಲಯ, ಸಮುದಾಯ ಆರೋಗ್ಯ ಕೇಂದ್ರಗಳು ಇವೆ ಎಂದರು.
ಸರ್ಕಾರದ ಅಭಿವೃದ್ಧಿಯನ್ನು ಕಾಣದಿರುವ ಬಿಜೆಪಿಯವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದರು.
ಧರ್ಮಸ್ಥಳಕ್ಕೆ ಬಿಜೆಪಿ ಯಾತ್ರೆ: ರಾಜಕೀಯ ಲಾಭ ಸಿಗುವುದಿಲ್ಲ : ಬಿಜೆಪಿಯವರು ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಬಿಜೆಪಿ ರಾಜಕೀಯವಾಗಿ ಯಾತ್ರೆ ಕೈಗೊಂಡಿದೆ. ಅವರಿಗೆ ರಾಜಕೀಯ ಲಾಭ ಸಿಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ಅದು ಸಿಗುವುದಿಲ್ಲ. ಏಕೆಂದರೆ ಧರ್ಮಸ್ಥಳದ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಎಸ್ಐಟಿ ರಚಿಸಿದಾಗ ವಿರೋಧ ಮಾಡದೆ ಇದ್ದವರು, ನಂತರದಲ್ಲಿ ಏನೂ ಸಿಗುವುದಿಲ್ಲ ಎಂದು ತಿಳಿದು ವಿರೋಧಿಸುತ್ತಿದ್ದಾರೆ. ಇದು ಢೋಂಗಿತನ ಎಂದರು.
ದಸರಾ ಹಬ್ಬದಲ್ಲೂ ರಾಜಕಾರಣ : ಮೈಸೂರಿಗೂ ಚಾಮುಂಡಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಮಾತನಾಡಿ ಬಿಜೆಪಿಯವರು ಹಿಂದುತ್ವ ಗಟ್ಟಿಯಾಗುತ್ತದೆ, ಹಿಂದೂಗಳೆಲ್ಲ ಒಟ್ಟಾಗುತ್ತಾರೆ ಎಂದು ತಿಳಿದಿದ್ದಾರೆ. ನಾನೂ ಕೂಡ ಹಿಂದೂವೇ. ನಮ್ಮೂರಿನಲ್ಲಿ ನಾವು ರಾಮಮಂದಿರ ಕಟ್ಟಿಲ್ಲವೇ? ಎಂದು ಪ್ರಶ್ನಿಸಿದರು. ಹಿಂದುಗಳೆಂದರೆ ರಾಜಕೀಯ, ಅಪಪ್ರಚಾರ ಮಾಡುವುದಲ್ಲ, ಸುಳ್ಳು ಹೇಳುವುದಲ್ಲ. ಯಾರೇ ಆದರೂ ಮನಷ್ಯತ್ವವಿರಬೇಕು ಎಂದರು. ಬಿಜೆಪಿ ದಸರಾ ಹಬ್ಬದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಸುಳ್ಳು ಹೇಳುವುದು ಬಿಟ್ಟು ಬೇರೇನಾದರೂ ಅವರಿಗೆ ಬರುತ್ತದೆಯೇ ಎಂದರು.
ಉದ್ಘಾಟನೆಗೆ ಆಹ್ವಾನ : ಬಾನು ಮುಷ್ತಾಕ್ ಅವರಿಗೆ ಬುಕರ್ ಪ್ರಶಸ್ತಿ ದೊರಕಿದ್ದು, ಎಷ್ಟು ಜನಕ್ಕೆ ಈ ಪ್ರಶಸ್ತಿ ಲಭಿಸಿದೆ ಎಂದ ಮುಖ್ಯಮಂತ್ರಿಗಳು, ಅವರನ್ನು ಗೌರವಿಸಲು ದಸರಾ ಉದ್ಘಾಟನೆಗೆ ಅವಕಾಶ ನೀಡಲಾಗಿದೆ ಎಂದವರು.
ಪರಿಣಾಮ ಬೀರುವುದಿಲ್ಲ : ದಸರಾ ಹಬ್ಬದ ಮೇಲೆ ಈ ರಾಜಕಾರಣ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಮುಖ್ಯಮಂತ್ರಿಗಳು, ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯೇ ಇರಬಹುದು. ದಸರಾ ಹಬ್ಬ ನಾಡ ಹಬ್ಬವಲ್ಲವೇ? ನಾಡ ಹಬ್ಬ ಎಂದರೆ ಎಲ್ಲರೂ ಸೇರಿ ಮಾಡುವುದು. ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರು, ಬೌದ್ಧರು ಸೇರಿ ಆಚರಿಸುವ ಹಬ್ಬ ಎಂದರು.
ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ವಿಷಯ ಇರುವುದು ಚಾಮುಂಡಿ ಬೆಟ್ಟದ್ದಲ್ಲ, ದಸರಾ ಹಬ್ಬದ್ದು ಎಂದರು.
mysore, september 1 : CM Siddaramaiah spoke to the media after inaugurating the new building of PMShri Karnataka Public School on September 1 at Siddaramanahundi in Varuna assembly constituency of Mysore. BJP’s yatra to Dharmasthala: No political gain: Responding to a reporter’s question about the BJP’s pilgrimage to Dharmasthala, the Chief Minister said that the BJP has undertaken the pilgrimage for political gain. We have immense respect for Dharmasthala. Those who did not oppose when the SIT was formed are opposing it knowing that they will get nothing later. This is hypocrisy, he said.