shimoga news | ಶಿವಮೊಗ್ಗ : ಅಪಾಯಕಾರಿ ರಸ್ತೆಗಳತ್ತ ಹರಿಯುವುದೆ ಪಿಡಬ್ಲ್ಯೂಡಿ ಚಿತ್ತ?

ಶಿವಮೊಗ್ಗ ನಗರದ ಹೊರವಲಯ ರಾಮಕೃಷ್ಣ ಆಶ್ರಮ ಸಂಪರ್ಕಿಸುವ ಜಿಲ್ಲಾ ಹೆದ್ದಾರಿಯ ಹಲವೆಡೆ, ತಡೆಗೋಡೆಯಿಲ್ಲದೆ ಅಪಾಯಕಾರಿ ಸ್ಥಿತಿಯಿದೆ. ಗುಂಡಿಗಳಿಗೆ ವಾಹನಗಳು ಬಿದ್ದು ಅಪಾಯ ಸಂಭವಿಸುವ ಮುನ್ನ, ಪಿಡಬ್ಲ್ಯೂಡಿ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸ್ಥಳೀಯ ನಾಗರೀಕರು ಆಗ್ರಹಿಸಿದ್ದಾರೆ.

ಗೆಜ್ಜೇನಹಳ್ಳಿ ರಾಜ್ಯ ಹೆದ್ದಾರಿಯಿಂದ ಮೋಜಪ್ಪನ ಹೊಸೂರು ಗ್ರಾಮದ ಮೂಲಕ, ಸದರಿ ಜಿಲ್ಲಾ ಹೆದ್ದಾರಿ ಹಾದು ಹೋಗಿದೆ. ಅಬ್ಬಲಗೆರೆ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುತ್ತದೆ. ಸದರ ರಸ್ತೆಯಲ್ಲಿ ಲಾರಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ  ವಾಹನಗಳು ಸಂಚರಿಸುತ್ತವೆ.

ಆದರೆ ಮೋಜಪ್ಪನ ಹೊಸೂರು ಸಮೀಪ ಹಲವೆಡೆ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕುಸಿತವಾಗಿದೆ. ಹಾಗೆಯೇ ನೀರು ಹರಿದು ಹೋಗುವ ನಾಲೆಗಳಿವೆ. ಈ ಸ್ಥಳಗಳಲ್ಲಿ ಕಡ್ಡಾಯವಾಗಿರಬೇಕಾದ ತಡೆಗೋಡೆ ಸೇರಿದಂತೆ ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆ ಮಾಡಿಲ್ಲವಾಗಿದೆ ಎಂದು ವಾಹನ ಸವಾರರು ದೂರುತ್ತಾರೆ.

ರಸ್ತೆ ಕಿರಿದಾಗಿದ್ದು, ಕೊಂಚ ಹೆಚ್ಚು ಕಮ್ಮಿಯಾಗಿ ವಾಹನಗಳು ರಸ್ತೆಯಂಚಿಗೆ ಬಂದರೆ ಪಲ್ಟಿಯಾಗಿ ಬೀಳುವ ಸಾಧ್ಯತೆಯಿದೆ. ಜೊತೆಗೆ ಅಪಾಯಕಾರಿ ಸ್ಥಳ ಗುರುತಿಸುವ ಸೂಚನಾ ಫಲಕಗಳ ಅಳವಡಿಕೆಯೂ ಮಾಡಿಲ್ಲ. ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂದು ವಾಹನ ಸವಾರರು ಆರೋಪಿಸುತ್ತಾರೆ.

ತಕ್ಷಣವೇ ಸದರಿ ರಸ್ತೆಯಲ್ಲಿ ಅಗತ್ಯವಿರುವೆಡೆ ತಡೆಗೋಡೆಗಳ ನಿರ್ಮಾಣ ಮಾಡಬೇಕು. ಸೂಕ್ತ ಸುರಕ್ಷತಾ ಕ್ರಮಗಳ ಪಾಲನೆ ಮಾಡಬೇಕು. ಜೊತೆಗೆ ಸೂಚನಾ ಫಲಕಗಳ ಅಳವಡಿಸಬೇಕು ಎಂದು ವಾಹನ ಸವಾರರು ಆಗ್ರಹಿಸುತ್ತಾರೆ.

*** ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಸೋಮಿನಕೊಪ್ಪದಿಂದ ಕೆಹೆಚ್’ಬಿ ಪ್ರೆಸ್ ಕಾಲೋನಿ ನಡುವಿನ ಸುಮಾರು 1 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಅಗಲೀಕರಣ ಮಾಡಬೇಕೆಂಬ ಬೇಡಿಕೆ ದಶಕದ್ದಾಗಿದ್ದು, ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಪಿಡಬ್ಲ್ಯೂಡಿ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ. ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿನ ಬಹುತೇಕ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು, ದ್ವಿಪಥ / ಚತುಷ್ಪಥ ಮಾರ್ಗಗಳಾಗಿ ಅಭಿವೃದ್ದಿಗೊಳಿಸಲಾಗಿದೆ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿರುವ ಸೋಮಿನಕೊಪ್ಪ – ಪ್ರೆಸ್ ಕಾಲೋನಿ ನಡುವಿನ ರಾಜ್ಯ ಹೆದ್ದಾರಿಯು ಇಂದಿಗೂ ಕಿರಿದಾಗಿದೆ. ಸದರಿ ಹೆದ್ದಾರಿಯಲ್ಲಿ ದಿನದಿಂದ ದಿನಕ್ಕೆ ಜನ – ವಾಹನ ಸಂಚಾರ ಹೆಚ್ಚಾಗುತ್ತಿದೆ. ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸುಗಮ ಜನ – ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲು, ಸದರಿ ಹೆದ್ದಾರಿಯನ್ನು ದ್ವಿಪಥ / ಚತುಷ್ಪಥ ಮಾರ್ಗವಾಗಿ ಮೇಲ್ದರ್ಜೆಗೇರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪಿಡಬ್ಲ್ಯೂಡಿ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ನಾಗರೀಕರು ಆಗ್ರಹಿಸುತ್ತಾರೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →