shimoga news | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ – ವಾರ್ಡ್ ಮೀಸಲಾತಿ ನಿಗದಿ ವಿಳಂಬ : ಸರ್ಕಾರಕ್ಕೆ ಶಾಸಕ ಚನ್ನಬಸಪ್ಪ ಆಗ್ರಹವೇನು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಡಿಸೆಂಬರ್ 18: ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತದಲ್ಲಿ ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಎರಡೂ ವರ್ಷವಾಗುತ್ತಾ ಬಂದಿದೆ. ಒಂದೆಡೆ, ವಾರ್ಡ್ ಗಳ ಚುನಾವಣೆಯೂ ನಡೆಯುತ್ತಿಲ್ಲ. ಮತ್ತೊಂದೆಡೆ, ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿರುವ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯೂ ಪೂರ್ಣಗೊಳ್ಳುತ್ತಿಲ್ಲ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ನೆನೆಗುದಿಗೆ ಬೀಳುವಂತಾಗಿದೆ!
ಈ ನಡುವೆ ಸದರಿ ವಿಷಯವು ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪವಾಗಿದೆ. ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚನ್ನಬಸಪ್ಪ ಅವರು ಕೇಳಿದ ಪ್ರಶ್ನೆಗೆ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ಅವರು ಉತ್ತರ ನೀಡಿದ್ದಾರೆ. ಈ ಕುರಿತಂತೆ ಶಾಸಕರ ಕಚೇರಿಯು ಡಿಸೆಂಬರ್ 17 ರಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ವಿವರ ಮುಂದಿನಂತಿದೆ.
ಶಾಸಕರ ಆಗ್ರಹವೇನು? : ‘ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾಯಿತ ಸದ್ಯರ ಅವಧಿಯು 27/11/2023 ರಂದು ಮುಕ್ತಾಯಗೊಂಡಿದೆ. ಈ ಕುರಿತಂತೆ ಚುನಾವಣೆ ನಡೆಸುವ ಬಗ್ಗೆ 7-2-2024 ರಂದು ಸರ್ಕಾರಕ್ಕೆ ಅದಿಕೃತ ಪ್ರಸ್ತಾವನೆ ಸಲ್ಲಿಸಲಾಗಿದೆ.
ಆದರೆ ಪಾಲಿಕೆ ವ್ಯಾಪ್ತಿಗೆ ಹೊಸ ಪ್ರದೇಶಗಳ ಸೇರ್ಪಡೆ ಹಾಗೂ ವಾರ್ಡ್ ಗಳ ಮೀಸಲಾತಿ ಪ್ರಕ್ರಿಯೆಗಳು ಇನ್ನೂ ಅಂತಿಮ ಹಂತ ತಲುಪದಿರುವುದು ಚುನಾವಣೆ ವಿಳಂಬಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವರು ಕಾನೂನಾತ್ಮಕ ಅಡೆತಡೆಗಳನ್ನು ನಿವಾರಿಸಿ, ಶಿವಮೊಗ್ಗ ಪಾಲಿಕೆ ಚುನಾವಣೆಯನ್ನು ಕೂಡಲೇ ನಡೆಸಬೇಕು. ಪ್ರಜಾಪ್ರಭುತ್ವದ ಆಶಯದಂತೆ ಸ್ಥಳೀಯ ಆಡಳಿತಕ್ಕೆ ಚಾಲನೆ ನೀಡಬೇಕೆಂದು’ ಶಾಸಕರು ಆಗ್ರಹಿಸಿದ್ದಾರೆ.
ಸಚಿವರು ಹೇಳಿದ್ದೇನು? : ಶಾಸಕ ಚನ್ನಬಸಪ್ಪರ ಪ್ರಶ್ನೆಗೆ ಸಚಿವ ಬಿ ಎಸ್ ಸುರೇಶ್ ಅವರು ಉತ್ತರಿಸಿದ್ದಾರೆ. ‘ಶಿವಮೊಗ್ಗ ಪಾಲಿಕೆ ವ್ಯಾಪ್ತಿಗೆ ಕೆಲವು ಪ್ರದೇಶಗಳನ್ನು ಸೇರ್ಪಡೆಗೊಳಿಸಿ, ವ್ಯಾಪ್ತಿ ಹೆಚ್ಚಿಸಲು ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಶಿವಮೊಗ್ಗ ಪಾಲಿಕೆ ಆಯುಕ್ತರಿಗೆ 7/2/2024 ರಂದು ಪತ್ರ ಬರೆದು ಕೋರಿ, ಪ್ರಸ್ತಾವನೆ ನಿರೀಕ್ಷಿಸಲಾಗಿತ್ತು.
ಪಾಲಿಕೆಯಲ್ಲಿ 27/11/2023 ರಂದು ಚುನಾಯಿತ ಆಡಳಿತ ಮಂಡಳಿ ಅವಧಿಯು ಮುಕ್ತಾಯವಾಗಿರುತ್ತದೆ. ಆದರೆ ವ್ಯಾಪ್ತಿ ವಿಸ್ತರಣೆಯ ಪ್ರಸ್ತಾವನೆ ಕುರಿತು ಕ್ರಮವಾಗದೆ ಇರುವುದರಿಂದ, ಪ್ರಸ್ತುತ ವಾರ್ಡ್ ವಾರು ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ಸದರಿ ಪಾಲಿಕೆಯಲ್ಲಿ ಸುಗಮ ಆಡಳಿತ ನಿರ್ವಹಣೆಗಾಗಿ 28/11/2023 ರಿಂದಲೇ ಅನ್ವಯವಾಗುವಂತೆ ಬೆಂಗಳೂರಿನ ಪ್ರಾದೇಶಿಕ ಆಯುಕ್ತರನ್ನು ಆಡಳಿತಾಧಿಕಾರಿಯಾಗಿ ನಿಯೋಜಿಸಲಾಗಿದೆ’ ಎಂದು ನಗರಾಭಿವೃದ್ದಿ ಸಚಿವರು ಉತ್ತರಿಸಿದ್ದಾರೆ.
ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ನೆನೆಗುದಿಗೆ : ಮುಂದುವರಿದ ಆಡಳಿತದ ನಿರ್ಲಕ್ಷ್ಯ!
*** ಸರಿಸುಮಾರು 30 ವರ್ಷಗಳ ನಂತರ, ಶಿವಮೊಗ್ಗ ನಗರಾಡಳಿತದ ವ್ಯಾಪ್ತಿ ಪರಿಷ್ಕರಣೆ ಆರಂಭಿಸಲಾಗಿದೆ. ಸದರಿ ಪ್ರಕ್ರಿಯೆ ಆರಂಭಗೊಂಡು ಒಂದೂವರೆ ವರ್ಷವಾಗುತ್ತಾ ಬಂದರೂ, ಇಲ್ಲಿಯವರೆಗೂ ಶಿವಮೊಗ್ಗ ಜಿಲ್ಲಾಡಳಿತದಿಂದ ರಾಜ್ಯ ಪೌರಾಡಳಿತ ನಿರ್ದೇಶನಾಲಯಕ್ಕೆ ಅಂತಿಮ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ.
ಈಗಾಗಲೇ ನಗರದಂಚಿನ ಗ್ರಾಮ ಪಂಚಾಯ್ತಿ ಅಧೀನದಲ್ಲಿರುವ ಯಾವ್ಯಾವ ಪ್ರದೇಶಗಳನ್ನು ಪಾಲಿಕೆಗೆ ಸೇರ್ಪಡೆ ಮಾಡಿಕೊಳ್ಳಬೇಕೆಂಬ ವರದಿಯನ್ನು ಸಿದ್ದಪಡಿಸಲಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದಾರೆ. ಈ ನಡುವೆ ಸದರಿ ವರದಿಯಲ್ಲಿ ಕೈಬಿಡಲಾಗಿದ್ದ ವಿವಿಧ ಬಡಾವಣೆಗಳ ನಿವಾಸಿಗಳು, ತಮ್ಮ ಪ್ರದೇಶಗಳನ್ನು ಕೂಡ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿದ್ದರು.
ಈ ಕುರಿತಂತೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಪಾಲಿಕೆ ಆಡಳಿತಕ್ಕೆ ಸೂಚಿಸಿದ್ದರು. ಆದರೆ ಹಲವು ತಿಂಗಳುಗಳೇ ಉರುಳಿದರೂ ಇಲ್ಲಿಯವರೆಗೂ ಪಾಲಿಕೆ ಆಡಳಿತವು, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆ ಮಾಡಿಲ್ಲ. ಇದು ನಾಗರೀಕರ ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಸದರಿ ಪರಿಷ್ಕರಣೆ ವಿಷಯ ಮುಂದಿಟ್ಟುಕೊಂಡೇ ವಾರ್ಡ್ ವಾರು ಚುನಾವಣೆಯು ವಿಳಂಬವಾಗುತ್ತಿರುವ ಮಾಹಿತಿಗಳು ಕೇಳಿಬರಲಾರಂಭಿಸಿದೆ.
ಪಾಲಿಕೆಗೆ ಹೊಸ ಪ್ರದೇಶಗಳ ಸೇರ್ಪಡೆ ವಿಳಂಬ : ಶಾಸಕ ಚನ್ನಬಸಪ್ಪ ಹೇಳಿದ್ದೇನು?
‘ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾಯಿತ ಸದ್ಯರ ಅವಧಿಯು 27/11/2023 ರಂದು ಮುಕ್ತಾಯಗೊಂಡಿದೆ. ಈ ಕುರಿತಂತೆ ಚುನಾವಣೆ ನಡೆಸುವ ಬಗ್ಗೆ 7-2-2024 ರಂದು ಸರ್ಕಾರಕ್ಕೆ ಅದಿಕೃತ ಪ್ರಸ್ತಾವನೆ ಸಲ್ಲಿಸಲಾಗಿದೆ.
ಆದರೆ ಪಾಲಿಕೆ ವ್ಯಾಪ್ತಿಗೆ ಹೊಸ ಪ್ರದೇಶಗಳ ಸೇರ್ಪಡೆ ಹಾಗೂ ವಾರ್ಡ್ ಗಳ ಮೀಸಲಾತಿ ಪ್ರಕ್ರಿಯೆಗಳು ಇನ್ನೂ ಅಂತಿಮ ಹಂತ ತಲುಪದಿರುವುದು ಚುನಾವಣೆ ವಿಳಂಬಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವರು ಕಾನೂನಾತ್ಮಕ ಅಡೆತಡೆಗಳನ್ನು ನಿವಾರಿಸಿ, ಶಿವಮೊಗ್ಗ ಪಾಲಿಕೆ ಚುನಾವಣೆಯನ್ನು ಕೂಡಲೇ ನಡೆಸಬೇಕು. ಪ್ರಜಾಪ್ರಭುತ್ವದ ಆಶಯದಂತೆ ಸ್ಥಳೀಯ ಆಡಳಿತಕ್ಕೆ ಚಾಲನೆ ನೀಡಬೇಕೆಂದು’ ಶಾಸಕ ಚನ್ನಬಸಪ್ಪ ಅವರು ಬೆಳಗಾವಿ ವಿಧಾನಸಭೆ ಅಧಿವೇಶನದ ವೇಳೆ ಆಗ್ರಹಿಸಿದ್ದಾರೆ.
