shimoga news | ವಿಶ್ವವಿದ್ಯಾಲಯ ನೌಕರರಿಗೆ ಹಳೆಯ ಪಿಂಚಣಿ ನಿರಾಕರಣೆ : ಕುವೆಂಪು ವಿವಿ ಅಧ್ಯಾಪಕರ ಸಂಘ ಆಕ್ರೋಶ!
ಶಿವಮೊಗ್ಗ (ಶಂಕರಘಟ್ಟ), ಡಿಸೆಂಬರ್ 31: ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯಗಳು ಬೋಧಕ ಹಾಗೂ ಬೋಧಕೇತರ ನೌಕರರಿಗೆ ಹಳೇಯ ಪಿಂಚಣಿ ವ್ಯವಸ್ಥೆ ನಿರಾಕರಿಸಿರುವುದು ಅತ್ಯಂತ ತಾರತಮ್ಯಪೂರ್ಣ, ಅನ್ಯಾಯಕರ ಹಾಗೂ ಕಾನೂನುಬಾಹಿರ ಕ್ರಮ ಎಂದು ಕುವೆಂಪು ವಿಶ್ವವಿದ್ಯಾಲಯ ಅಧ್ಯಾಪಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರವು ದಿನಾಂಕ: 24-01-2024 ರಂದು ಹೊರಡಿಸಿರುವ ಸರ್ಕಾರಿ ಆದೇಶ ಮೂಲಕ, 1.4.2006 ಒಳಗೆ ಅರ್ಜಿ ಸಲ್ಲಿಸಿ ನಂತರದ ದಿನಗಳಲ್ಲಿ ನೇಮಕಗೊಂಡ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಸರ್ಕಾರಿ ಪದವಿ ಕಾಲೇಜುಗಳ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಹಳೆಯ ಪಿಂಚಣಿ ಯೋಜನೆ (PS) ವಿಸ್ತರಿಸಿ ನೀಡಿರುವುದನ್ನು ಹಾಗೂ ಈಗ ಎಲ್ಲಾ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರ ಕ್ರಮ ಜರುಗಿಸುತ್ತಿರುವುದನ್ನು ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘವು ಸ್ವಾಗತಿಸುತ್ತದೆ.
ಆದರೆ, ಇದೇ ಸೌಲಭ್ಯವನ್ನು ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯಗಳು ಬೋಧಕ ಹಾಗೂ ಬೋಧಕೇತರ ನೌಕರರಿಗೆ ಕಲ್ಪಿಸಿಲ್ಲ. ಸಾರ್ವಜನಿಕ ವಿಶ್ವವಿದ್ಯಾಲಯಗಳು ಶೈಕ್ಷಣಿಕವಾಗಿ ಸ್ವಾಯತ್ತ ಸಂಸ್ಥೆಗಳಾದ್ದರೂ ಆರ್ಥಿಕ ಸ್ವಾಯತ್ತತೆಯನ್ನು ಹೊಂದಿಲ್ಲ. ವಿಶ್ವವಿದ್ಯಾಲಯಗಳ ಎಲ್ಲಾ ಆರ್ಥಿಕ ಚಟುವಟಿಕೆಗಳು ರಾಜ್ಯ ಸರ್ಕಾರದ ಹಣಕಾಸು ಇಲಾಖೆಯ ನಿಯಮಗಳ ಪ್ರಕಾರವೇ ನಡೆಯುತ್ತಿವೆ. ರಾಜ್ಯ ಸರ್ಕಾರದಿಂದ ಸಂಬಳ ಪಡೆಯುತ್ತಿದ್ದಾರೆ ಮತ್ತು ಅವರ ಸೇವಾ ನಿಯಮಗಳು ಕರ್ನಾಟಕ ರಾಜ್ಯ ಸಿವಿಲ್ ಸರ್ವಿಸ್ ರೂಲ್ಸ್ ಅಡಿಯಲ್ಲಿ ನಿಯಂತ್ರಿತವಾಗಿದೆ.
31.03.2006ರ ಸರ್ಕಾರ ಆದೇಶದ ಮೂಲಕ ಹೊಸ ಪಿಂಚಣಿ ಯೋಜನೆ (0PS) ಜಾರಿಗೊಳಿಸುವಾಗ, “ಸರ್ಕಾರಿ ನೌಕರರು” ಎಂದು ಮಾತ್ರ ಉಲ್ಲೇಖಿಸಿದ್ದರೂ ಸಹ, ಅದನ್ನು ಈ ಹಿಂದೆ ಹಳೆ ಪಿಂಚಣಿ ಸೌಲಭ್ಯ (0PS) ಪಡೆಯುತ್ತಿರುವ ವಿಶ್ವವಿದ್ಯಾಲಯಗಳ ನೌಕಕರಿಗೂ ಅನ್ವಯಿಸಲಾಗಿದೆ. ಇದು ಸರ್ಕಾರವೇ ವಿಶ್ವವಿದ್ಯಾಲಯದ ನೌಕರರನ್ನು ರಾಜ್ಯ ಸರ್ಕಾರಿ ನೌಕರರಿಗೆ ಸಮಾನರೆಂದು ಪರಿಗಣಿಸಿದ್ದನ್ನು ಸ್ಪಷ್ಟಪಡಿಸುತ್ತದೆ. ಇಂತಹ ಸಂದರ್ಭದಲ್ಲಿ, ಈಗ OPS ನೀಡುವಾಗ ಮಾತ್ರ ವಿಶ್ವವಿದ್ಯಾಲಯ ನೌಕರರನ್ನು ಹೊರಗಿಟ್ಟು ತಾರತಮ್ಯ ಮಾಡುವುದು ನ್ಯಾಯಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರದ ತಾರತಮ್ಯ ಧೋರಣೆಯನ್ನು ತಕ್ಷಣ ಸರಿಪಡಿಸದಿದ್ದಲ್ಲಿ ಕುವೆಂಪು ವಿಶ್ವವಿದ್ಯಾಲಯ ನೌಕರರು ಅನಿವಾರ್ಯವಾಗಿ ಉಗ್ರ ಹೋರಾಟ ಹಾಗೂ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಸಂಘ ಎಚ್ಚರಿಕೆ ನೀಡಿದೆ.
