
40 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಸೊರಬ ಪುರಸಭೆ ಕಂದಾಯ ನಿರೀಕ್ಷಕ!
ಸೊರಬ, ಮಾ. 6: ಮಹಿಳೆಯೋರ್ವರಿಂದ 40 ಸಾವಿರ ರೂ. ಲಂಚ ಪಡೆಯುವ ವೇಳೆಯೇ ಸೊರಬ ಪುರಸಭೆ ಕಂದಾಯ ನಿರೀಕ್ಷಕರೋರ್ವರು, ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬುಧವಾರ ನಡೆದಿದೆ.
ವಿನಾಯಕ ಲೋಕಾಯುಕ್ತ ಬಲೆಗೆ ಬಿದ್ದ ಪುರಸಭೆ ಕಂದಾಯ ನಿರೀಕ್ಷಕರೆಂದು ಗುರುತಿಸಲಾಗಿದೆ. ಇವರ ವಿರುದ್ದ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಂಚಕ್ಕೆ ಡಿಮ್ಯಾಂಡ್ : ದೂರುದಾರರಾದ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಪ್ರತಿಭಾ ಎಂ ನಾಯ್ಕ್ ಎಂಬುವರಿಗೆ ಸೊರಬ ತಾಲೂಕು ಕಸಬಾ ಹೋಬಳಿ ಹಳೇ ಸೊರಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಖಾಲಿ ಜಾಗವಿತ್ತು.
ಸದರಿ ಪ್ರದೇಶವು ಪುರಸಭೆಗೆ ಸೇರ್ಪಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪುರಸಭೆ ಖಾತೆ, ಇ-ಸ್ವತ್ತು ಮಾಡಿಸಿಕೊಂಡಿದ್ದರು. ಆದರೆ ಇ-ಸ್ವತ್ತಿನಲ್ಲಿ ಜಾಗದ ವಿಸ್ತೀರ್ಣದ ವಿವರ ಕಡಿಮೆ ನಮೂದಾಗಿತ್ತು. ಮೂಲ ವಿಸ್ತೀರ್ಣಕ್ಕೆ ಅನುಗುಣವಾಗಿ ಇ-ಸ್ವತ್ತು ಮಾಡಿಕೊಡುವಂತೆ ಕೋರಿ ಪುರಸಭೆಗೆ ಮತ್ತೆ ಅರ್ಜಿ ಸಲ್ಲಿಸಿದ್ದರು.
14-2-2024 ರಂದು ದೂರುದಾರರು ತಮ್ಮ ತಂದೆಯ ಜೊತೆ ಪುರಸಭೆಗೆ ತೆರಳಿ, ಕಂದಾಯ ನಿರೀಕ್ಷಕ ವಿನಾಯಕರನ್ನು ಭೇಟಿಯಾಗಿ ಅರ್ಜಿ ಕುರಿತಂತೆ ವಿಚಾರಿಸಿದ್ದರು. ಈ ವೇಳೆ ವಿನಾಯಕ ಅವರು 50 ಸಾವಿರ ರೂ. ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು. ಅಂತಿಮವಾಗಿ 40 ಸಾವಿರ ರೂ. ನೀಡಿದರೆ ಕೆಲಸ ಮಾಡಿಕೊಡುವುದಾಗಿ ಹೇಳಿದ್ದರು.
ಆದರೆ ಲಂಚ ಕೊಡಲು ಇಷ್ಟವಿರದ ದೂರುದಾರರು, ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಾ. 6 ರಂದು ದೂರುದಾರರು 40 ಸಾವಿರ ರೂ.ಗಳನ್ನು ವಿನಾಯಕಗೆ ನೀಡುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಲಂಚದ ಹಣದ ಸಮೇತ ಅಧಿಕಾರಿಯನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ವಾಸುದೇವರಾಮ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.