
ತುಂಗಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರಕ್ಕೆ!
ಶಿವಮೊಗ್ಗ (shivamogga), ಜು. 27: ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ (heavy rainfall), ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯದ (tunga dam) ಒಳಹರಿವಿನಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದ್ದು, ಭಾರೀ ಪ್ರಮಾಣದ ನೀರು ಹರಿದುಬರಲಾರಂಭಿಸಿದೆ.
ಶನಿವಾರ ಬೆಳಿಗ್ಗೆಯ ಮಾಹಿತಿಯಂತೆ, ತುಂಗಾ ಜಲಾಶಯದ ಒಳಹರಿವು (inflow) 75,177 ಕ್ಯೂಸೆಕ್ ಇದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ (maximum level) ತಲುಪಿರುವುದರಿಂದ 70,444 ಕ್ಯೂಸೆಕ್ ನೀರನ್ನು ಹೊಸಪೇಟೆ ತುಂಗಭದ್ರಾ ಜಲಾಶಯಕ್ಕೆ (tungabhadra dam) ಹೊರ ಬಿಡಲಾಗುತ್ತಿದೆ.
ಕಳೆದ ತಿಂಗಳೇ ತುಂಗಾ ಜಲಾಶಯ ಗರಿಷ್ಠ ಮಟ್ಟವಾದ 588. 24 ಅಡಿ ತಲುಪಿದೆ. ಕಳೆದ ಕೆಲ ದಿನಗಳ ಹಿಂದೆ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ, ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿತ್ತು.
ಇದೀಗ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ (heavy rainfall) ಡ್ಯಾಂಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಡ್ಯಾಂನಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರಿಂದ, ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು (tunga river) ಮತ್ತೆ ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದೆ.
ಪ್ರವಾಹದ (flood) ಮಟ್ಟ ತೋರ್ಪಡಿಸುವ ನಗರದ ಕೋರ್ಪಳಯ್ಯನ ಛತ್ರದ ಬಳಿಯ ತುಂಗಾ ನದಿಯಲ್ಲಿರುವ ಮಂಟಪದ ಮೇಲೆ ನೀರು ಹರಿಯಲಾರಂಭಿಸಿದೆ. ಡ್ಯಾಂನಿಂದ ಹೊರಬಿಡುವ ನೀರಿನ ಪ್ರಮಾಣ 80 ಸಾವಿರ ಕ್ಯೂಸೆಕ್ ದಾಟಿದರೆ, ಶಿವಮೊಗ್ಗ ನಗರದ ನದಿಪಾತ್ರದ ತಗ್ಗು ಪ್ರದೇಶಗಳು ಜಲಾವೃತವಾಗುವ ಭೀತಿ ಎದುರಾಗಿದೆ.