
hosanagara | ripponpet | ಹೊಸನಗರ – ಸಣ್ಣ ನಿರ್ಲಕ್ಷ್ಯಕ್ಕೆ ಬಲಿಯಾಯ್ತು ಮಹಿಳೆಯ ಜೀವ..!
ಹೊಸನಗರ (hosanagara), ಸೆ. 1: ನೆರೆ ಮನೆಯವರ ಸಣ್ಣ ನಿರ್ಲಕ್ಷ್ಯಕ್ಕೆ, ವಿದ್ಯುತ್ ಶಾಕ್ ನಿಂದ ಮಹಿಳೆಯೋರ್ವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ, ಹೊಸನಗರ ತಾಲೂಕು ರಿಪ್ಪನ್ ಪೇಟೆ (ripponpet) ಸಮೀಪದ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಪಾರ್ವತಮ್ಮ (67) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ರಿಪ್ಪನ್’ಪೇಟೆ ಪೊಲೀಸ್ ಠಾಣೆ (ripponpet police station) ಸಬ್ ಇನ್ಸ್’ಪೆಕ್ಟರ್ (sub inspector) ಪ್ರವೀಣ್ ಎಸ್. ಪಿ. ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನೆರೆಮನೆಯ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.
ಏನೀದು ಘಟನೆ? : ಪಾರ್ವತಮ್ಮ ಅವರ ಮನೆ ಪಕ್ಕ ಕಲ್ಲು ಕಂಬದ ಮುಳ್ಳಿನ ತಂತಿ ಬೇಲಿಯಿದೆ. ಸದರಿ ಖಾಲಿ ಜಾಗದ ಪಕ್ಕದಲ್ಲಿನ ನೆರೆಮನೆಯ ವ್ಯಕ್ತಿಯೋರ್ವರು, ತಮ್ಮ ಜಮೀನಿನ ಮೋಟಾರ್ ಪಂಪ್ ಸೆಟ್’ಗೆ ವಿದ್ಯುತ್ ಕಂಬದಿಂದ ಸಂಪರ್ಕ ಪಡೆದಿದ್ದರು. ಇತ್ತೀಚೆಗೆ ಇವರ ಜಮೀನಿನ ಬಳಿಯೇ ವಿದ್ಯುತ್ ಕಂಬ (electric pole) ಹಾದು ಹೋಗಿದ್ದರಿಂದ, ಅಲ್ಲಿಂದ ಹೊಸ ಸಂಪರ್ಕ ಪಡೆದುಕೊಂಡಿದ್ದರು.
ಮೋಟಾರ್ ಪಂಪ್ ಸೆಟ್ ಗೆ ಹಳೇಯ ವಿದ್ಯುತ್ ಲೈನ್ ಸಂಪರ್ಕ ತಪ್ಪಿಸಿದ್ದರು. ಆದರೆ ವಿದ್ಯುತ್ ಕಂಬದಿಂದ ವೈರ್ ನ ಸಂಪರ್ಕ ತಪ್ಪಿಸಿರಲಿಲ್ಲ. ವೈರ್ ನ್ನು ಸುತ್ತಿ ಸಮೀಪದ ಕಲ್ಲು ಕಂಬಕ್ಕೆ ಸಿಲುಕಿಸಿದ್ದರು. ಇತ್ತೀಚೆಗೆ ಬೀಳುತ್ತಿರುವ ನಿರಂತರ ಮಳೆಗೆ ವೈರ್ ನೆನೆದು, ಅದರ ಮೇಲ್ಭಾಗ ಕಿತ್ತು ಹೋಗಿದೆ. ಇದರಿಂದ ಕಲ್ಲು ಕಂಬದ ಮುಳ್ಳಿನ ತಂತಿಗೆ ವಿದ್ಯುತ್ ಪ್ರವಹಿಸಲಾರಂಭಿಸಿತ್ತು.
ಸೆ. 1 ಭಾನುವಾರ ಬೆಳಿಗ್ಗೆ ಎಂದಿನಂತೆ ಪಾರ್ವತಮ್ಮ ಅವರು, ತಂತಿ ಬೇಲಿಯ ಸಮೀಪ ಹೋಗಿದ್ದಾರೆ. ಈ ವೇಳೆ ಅವರು ವಿದ್ಯುತ್ ಶಾಕ್ ಗೆ ತುತ್ತಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಒಟ್ಟಾರೆ ಸಣ್ಣ ನಿರ್ಲಕ್ಷ್ಯವೊಂದರಿಂದ ಮಹಿಳೆಯೋರ್ವರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಜೊತೆಗೆ ನೆರೆಮನೆಯವರು ಕಾನೂನು ಸಂಕಷ್ಟಕ್ಕೆ ಸಿಲುಕುವಂತಾಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.