ಸಾಗರ (sagar), ಸೆ. 26: ವಿವಿಧೆಡೆ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ, ಇಬ್ಬರು ಆರೋಪಿಗಳನ್ನು ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ ಘಟನೆ ಸೆ. 26 ರಂದು ನಡೆದಿದೆ.
ಸಾಗರ ಪಟ್ಟಣದ ನೆಹರು ನಗರದ ನಿವಾಸಿ ನಾಗರಾಜ ಯಾನೆ ಕರಡಿ (24) ಹಾಗೂ ಎಸ್. ಎನ್. ನಗರದ ನಿವಾಸಿ ರಾಘವೇಂದ್ರ ಯಾನೆ ರೊಡ್ಡಿ (22) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳ ಬಂಧನದಿಂದ ಸಾಗರ ಗ್ರಾಮಾಂತರ ಠಾಣೆಯ 1 ಹಾಗೂ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2 ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಆರೋಪಿಗಳು ಕಳವು ಮಾಡಿದ್ದ 18 ಸಾವಿರ ರೂ. ಮೌಲ್ಯದ ಮರ ಕತ್ತರಿಸುವ ಯಂತ್ರ, 1. 5 ಲಕ್ಷ ರೂ. ಮೌಲ್ಯದ ಚಾಲಿ ಅಡಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋ ಮತ್ತು ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್, ಇನ್ಸ್’ಪೆಕ್ಟರ್ ಮಹಾಬಲೇಶ್ವರ ನಾಯ್ಕ್, ಸಬ್ ಇನ್ಸ್’ಪೆಕ್ಟರ್ ಸಿದ್ದರಾಮಪ್ಪ, ಸಿಬ್ಬಂದಿಗಳಾದ ಶೇಖ್ ಫೈರೋಜ್ ಅಹ್ಮದ್, ನಂದೀಶ್, ರವಿಕುಮಾರ್, ಪ್ರವೀಣ್ ಕುಮಾರ್,
ವಾಹನ ಚಾಲಕರಾದ ಗಿರೀಶ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ್, ಇಂದ್ರೇಶ್ ಮತ್ತು ವಿಜಯ್ ಅವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.

