Justice BA Patil President of Karnataka Land Grab Prohibition Special Court said that the protection of government property is the first duty of all of us and it is necessary to create awareness about it. ಸರ್ಕಾರಿ ಭೂ - ಕಬಳಿಕೆ ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ದವೂ ಪ್ರಕರಣ : ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ನ್ಯಾಯಮೂರ್ತಿಗಳ ಎಚ್ಚರಿಕೆ

shimoga | ಭೂ-ಕಬಳಿಕೆ ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ದವೂ ಪ್ರಕರಣ : ನ್ಯಾಯಮೂರ್ತಿಗಳ ಎಚ್ಚರಿಕೆ

ಶಿವಮೊಗ್ಗ (shivamogga), ಅ. 6: ಸರ್ಕಾರದ ಸ್ವತ್ತಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಈ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ತಿಳಿಸಿದರು.

ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳು, ಬೆಂಗಳೂರು, ಕಂದಾಯ ಇಲಾಖೆ, ಜಿಲ್ಲಾ ಕಾನುನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಶಿವಮೊಗ್ಗ ಇವರ ಸಹಯೋಗದೊಂದಿಗೆ ಶನಿವಾರ ಜಿಲ್ಲಾ ಪಂಚಾಯತ್ ಸಭಾಂಣದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗೆಗಿನ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಭೂಮಿ ರಕ್ಷಣೆ ಕೇವಲ ಕಂದಾಯ, ಅರಣ್ಯ, ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಮಾತ್ರವಲ್ಲ. ಬದಲಾಗಿ ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ಥಿರಾಸ್ತಿಗಳ ಬೆಲೆ ಗಗನಕ್ಕೇರಿದಂತೆ ಭೂ ಕಬಳಿಕೆ ಸಹ ಹೆಚ್ಚಾಗಿದೆ. ಇದನ್ನು ತಡೆಯಲು ಎಷ್ಟೋ ಕಾನೂನು ಇದ್ದರೂ ಸಹ ಪರಿಣಾಮಕಾರಿಯಾಗಿ ಅನುಷ್ಟಾನವಾಗದ ಕಾರಣ ಈ ಅಧಿನಿಯಮವನ್ನು ಜಾರಿಗೆ ತರಲಾಗಿದ್ದು, ಈ ಅಧಿನಿಯಮದ ಕುರಿತು ಅರಿವು ಹೆಚ್ಚಿಸಬೇಕಿದೆ ಎಂದು ಹೇಳಿದರು.

ಕೆರೆ, ಕಟ್ಟೆ, ಹಳ್ಳ, ಜಮೀನು, ಇತರೆ ಸರ್ಕಾರದ ಸ್ವತ್ತನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡುತ್ತಿರುವುದು ಗಮನಕ್ಕೆ ಬಂದ ತಕ್ಷಣ ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಸಮರ್ಪಕ ವರದಿ ತಯಾರಿಸಿ, ಸರ್ವೇ ಮಾಡಬೇಕು. ಈ ಅಧಿನಿಯಮದ ಪ್ರಕಾರ (ಸ್ಯು ಮೊಟೊ) ಸ್ವಯಂ ಪ್ರಕರಣ ದಾಖಲಿಸಬಹುದು ಎಂದು ತಿಳಿಸಿದ್ದಾರೆ.

ಒತ್ತುವರಿ ಆಗಿರುವುದು ಗಮನಕ್ಕೆ ಬಂದರೂ ಕ್ರಮ ಕೈಗೊಳ್ಳದೇ ಸುಮ್ಮನಿರುವುದು ಅಪರಾಧವಾಗುತ್ತದೆ. ಆದ್ದರಿಂದ ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು ಎಲ್ಲರೂ ಈ ಕಾನೂನಿನ ಉದ್ದೇಶ, ವ್ಯಾಪ್ತಿಯನ್ನು ಅರಿತಲ್ಲಿ ಸರ್ಕಾರಿ ಭೂಮಿ ಸಂರಕ್ಷಣೆ ಸಾಧ್ಯವಾಗುತ್ತದೆ.

ಕೆರೆ ಸಂರಕ್ಷಣೆ ಅತ್ಯಂತ ಮಹತ್ವದ್ದು. ಕೆರೆ ಕಟ್ಟೆ, ಬಾವಿ, ಜಮೀನು ಇತರೆ ಸರ್ಕಾರಿ ಸ್ವತ್ತನ್ನು ಬಾಂದಗಲ್ಲು ಇತರೆ ಕ್ರಮಗಳಿಂದ ಗುರುತು ಹಾಕಿ ರಕ್ಷಿಸಬೇಕು. ಈ ನಿಟ್ಟಿನಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಶ್ಲಾಘಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಮಾತನಾಡಿ, ವಿಶೇಷ ನ್ಯಾಯಾಲಯದಲ್ಲಿ ಶಿವಮೊಗ್ಗ ಜಿಲ್ಲೆಯ ಒಟ್ಟು ಪ್ರಕರಣಗಳು 2ನೇ ಸ್ಥಾನದಲ್ಲಿದ್ದು ಅಧಿಕಾರಿಗಳ ಜವಾಬ್ದಾರಿ ಹೆಚ್ಚಿಸಿದೆ. ಭೂ ಕಬಳಿಕೆ ನಿಷೇಧ ಅಧಿನಿಯಮ ಜಾರಿಗೆ ಬರುವ ಮೊದಲು ಇದಕ್ಕೆ ಸಂಬAಧಿಸಿದ ಪ್ರಕರಣಗಳು ಸಿವಿಲ್ ನ್ಯಾಯಾಲಯದಲ್ಲಿ ಇತ್ಯರ್ಥವಾಗುತ್ತಿದ್ದವು.

ಈ ಅಧಿನಿಯಮ ಭೂ ಕಬಳಿಕೆಯನ್ನು ತಡೆಯಲು ಒಂದು ದೊಡ್ಡ ಅಸ್ತçವಾಗಿದ್ದು ಈ ಕುರಿತು ತಿಳಿದುಕೊಂಡು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಹಾಗೂ ಈ ವಿಶೇಷ ನ್ಯಾಯಾಲಯ ವ್ಯಾಪ್ತಿಗೊಳಪಡುವ ಪ್ರಕರಣಗಳು ಸಿವಿಲ್ ನ್ಯಾಯಾಲಯದಲ್ಲಿದ್ದು ಸರ್ಕಾರಿ ವಕೀಲರ ಮೂಲಕ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿಕೊಳ್ಳಲು ಸಹಕರಿಸಬೇಕೆಂದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಸರ್ಕಾರಿ ಭೂಮಿ ಅತ್ಯಂತ ಮೌಲ್ಯಯುತವಾದ ಆಸ್ತಿ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಆದರೆ ಜಿಲ್ಲೆಯಲ್ಲಿ ಹೊಸ ಹಾಸ್ಟೆಲ್, ಆಸ್ಪತ್ರೆ, ಇಂದಿರಾ ಕ್ಯಾಂಟೀನ್, ಸರ್ಕಾರಿ ಕಟ್ಟಡಗಳನ್ನು ಕಟ್ಟಲಿಕ್ಕೆ ಜಾಗ ಸಿಗುತ್ತಿಲ್ಲ. ಸರ್ಕಾರದ ಅನುದಾನ ಇದೆ. ಆದರೆ ಜಾಗದ ಕೊರತೆ ಇದೆ. ಸರ್ಕಾರಿ ಜಮೀನನ್ನು ಸಂರಕ್ಷಿಸುವಲ್ಲಿ ಈ ಅಧಿನಿಯಮ ತುಂಬಾ ಮಹತ್ವದ್ದಾಗಿದೆ.

ಖುದ್ದು ವಿಶೇಷ ನ್ಯಾಯಾಲಯದ ಅಧ್ಯಕ್ಷರೇ ಕಾರ್ಯಾಗಾರ ಕೈಗೊಳ್ಳುತ್ತಿರುವುದು ಪ್ರಶಂಸನೀಯವಾಗಿದ್ದು ಕಂದಾಯ, ಅರಣ್ಯ, ಪಾಲಿಕೆ ಹಾಗೂ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಈ ಅಧಿನಿಯಮದಡಿ ಪ್ರಕರಣ ದಾಖಲು, ಇತರೆ ಪ್ರಕ್ರಿಯೆಗಳ ಬಗ್ಗೆ ತಿಳಿದು ಕೊಂಡು ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದ ಅವರು ಈ ಅಧಿನಿಯಮದಡಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಾಕ್ಷö್ಯ ನೀಡುವುದು, ಇ-ಆಫೀಸ್ ಮೂಲಕ ದಾಖಲೆ ತೆಗೆದುಕೊಂಡರೆ ಅನುಕೂಲವಾಗುತ್ತದೆ. ಜೊತೆಗೆ ಅಧಿನಿಯಮ ಅನುಷ್ಟಾನದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದರು.

ಪ್ರಥಮ ಅಧಿವೇಶನದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಕರ್ನಟಕ ಭೂ ಕಬಳಿಕೆ ನಿಷೇಧ ಅಧಿನಿಯಮ 2011 ಮತ್ತು ತಿದ್ದುಪಡಿ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.

ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕಿ ಯಾಸ್ಮೀನ್ ಬಾನು ಸರ್ಕಾರಿ ಜಮೀನು ಒತ್ತುವರಿಯನ್ನು ಕಂಡುಹಿಡಿಯುವ ಸರ್ವೇ ವಿಧಾನ ಮತ್ತು ನಿಯಮಗಳ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯರಾದ ಕೆ.ಹೆಚ್.ಅಶ್ವಥ್ ನಾರಾಯಣ ಗೌಡ ಅಧ್ಯಕ್ಷತೆ ವಹಿಸಿದ್ದರು.

ದ್ವಿತೀಯ ಅಧಿವೇಶನದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯ ಎಸ್.ಪಾಲಯ್ಯ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಉಪನ್ಯಾಸ ನೀಡಿದರು.

ತೃತೀಯ ಅಧಿವೇಶನದಲ್ಲಿ ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ.ಅಣ್ಣಯ್ಯ, ಕ.ಭೂ ಕ ನಿ ವಿಶೇಷ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ವಿಲೇಖನಾಧಿಕಾರಿ ಹೆಚ್.ಕೆ.ನವೀನ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಎನ್.ಹೇಮಂತ್, ಡಿಸಿಎಫ್ ಗಳಾದ ಶಿವಶಂಕರ್, ಪ್ರಸನ್ನ ಕೃಷ್ಣ ಪಟಗಾರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಕಂದಾಯ, ಅರಣ್ಯ, ಪಾಲಿಕೆ ಇತರೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Justice BA Patil, President of Karnataka Land Grab Prohibition Special Court, said that the protection of government property is the first duty of all of us and it is necessary to create awareness about it.

Hosanagara | SSLC student dies after drowning in water! hosanagara | ನೀರಿನಲ್ಲಿ ಮುಳುಗಿ ಎಸ್ಎಸ್ಎಲ್’ಸಿ ವಿದ್ಯಾರ್ಥಿ ಸಾವು! Previous post soraba | ಸೊರಬ : ಕೆರೆಯಲ್ಲಿ ಎತ್ತಿಗೆ ಮೈ ತೊಳೆಯಲು ಹೋದ ಯುವಕ ನೀರುಪಾಲು!
Bengaluru : VS Ugrappa is the voice of the voiceless – CM Siddaramaiah ಬೆಂಗಳೂರು : ವಿ.ಎಸ್.ಉಗ್ರಪ್ಪ ಧ್ವನಿ ಇಲ್ಲದವರ ದನಿ – ಸಿಎಂ ಸಿದ್ದರಾಮಯ್ಯ Next post bengaluru | ಬೆಂಗಳೂರು : ವಿ.ಎಸ್.ಉಗ್ರಪ್ಪ ಧ್ವನಿ ಇಲ್ಲದವರ ದನಿ – ಸಿಎಂ ಸಿದ್ದರಾಮಯ್ಯ