
shimoga accident news | ಶಿವಮೊಗ್ಗ : ಭೀಕರ ಅಪಘಾತ – ಇಬ್ಬರು ವಿದ್ಯಾರ್ಥಿಗಳ ದುರ್ಮರಣ!
ಶಿವಮೊಗ್ಗ (shivamogga), ನ. 8: ಭೀಕರ ಅಪಘಾತದಲ್ಲಿ ಬೈಕ್ ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ, ನ. 8 ರ ಶುಕ್ರವಾರ ಬೆಳಿಗ್ಗೆ ಶಿವಮೊಗ್ಗದ ಹೊರವಲಯ ತೀರ್ಥಹಳ್ಳಿ ರಸ್ತೆಯ ಕಾನೇಹಳ್ಳ ಕ್ರಾಸ್ ಬಳಿ ನಡೆದಿದೆ.
ಆರ್.ಎಂ.ಎಲ್ ನಗರದ ನಿವಾಸಿ ನಿಸ್ಸಾರ್ ಅಹಮದ್ (18) ಹಾಗೂ ಮಂಜುನಾಥ ಬಡಾವಣೆ ನಿವಾಸಿ ಯಶವಂತ್ (20) ಮೃತಪಟ್ಟ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ.
ಇವರಿಬ್ಬರು ತಾಲೂಕಿನ ಗಾಜನೂರು ಗ್ರಾಮದಲ್ಲಿರು ಐಟಿಐ ಕಾಲೇಜ್ ವಿದ್ಯಾರ್ಥಿಗಳಾಗಿದ್ದಾರೆ. ಇದರಲ್ಲಿ ನಿಸ್ಸಾರ್ ಅಹಮದ್ ಮೊದಲ ವರ್ಷದಲ್ಲಿ ಓದುತ್ತಿದ್ದು, ಯಶವಂತ್ ನ ಕೋರ್ಸ್ ಪೂರ್ಣಗೊಂಡಿದ್ದು ಮಾರ್ಕ್ಸ್ ಕಾರ್ಡ್ ಪಡೆಯುವ ಉದ್ದೇಶದಿಂದ ಕಾಲೇಜ್ ಗೆ ಹೊರಟಿದ್ದ.
ಬೆಳಿಗ್ಗೆ ಕೆಟಿಎಂ ಬೈಕ್ ನಲ್ಲಿ ಇಬ್ಬರು ತೆರಳುತ್ತಿದ್ದಾಗ, ಚಾಲನೆಯ ನಿಯಂತ್ರಣ ಕಳೆದುಕೊಂಡ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆ ಬದಿಯ ಜಾಹೀರಾತು ಫಲಕದ ಕಂಬಕ್ಕೆ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಅವಘಡದಲ್ಲಿ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shimoga: In a horrific accident, two students on a bike died on the spot on Friday morning, November 8, near Kanehalla Cross on the outskirts of Shimoga, Thirthahalli Road.