
shimoga | ಶಿವಮೊಗ್ಗ ಪಾಲಿಕೆ : ಚುನಾವಣೆಯೂ ನಡೆಯುತ್ತಿಲ್ಲ… ವ್ಯಾಪ್ತಿ ಪರಿಷ್ಕರಣೆಯೂ ಆಗುತ್ತಿಲ್ಲ..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಡಿ. 17: ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ, ಜನಪ್ರತಿನಿಧಿಗಳ ಆಡಳಿತವಿಲ್ಲದೆ ವರ್ಷ ಪೂರ್ಣಗೊಂಡಿದೆ. ಸದ್ಯಕ್ಕೆ ವಾರ್ಡ್ ಚುನಾವಣೆ ನಡೆಯುವ ಲಕ್ಷಣಗಳು ಗೋಚರವಾಗುತ್ತಿಲ್ಲವಾಗಿದ್ದು, ಚುನಾವಣೆಗಾಗಿ ಸ್ಪರ್ಧಾಕಾಂಕ್ಷಿಗಳು ಜಾತಕ ಪಕ್ಷಿಗಳಂತೆ ಕಾದು ಕುಳಿತುಕೊಳ್ಳುವಂತಾಗಿದೆ..!
ಮತ್ತೊಂದೆಡೆ, ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಮಾಹಿತಿ ಸಂಗ್ರಹಿಸುವ ಕಾರ್ಯ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದೆ. ಈಗಾಗಲೇ ಪ್ರಾಥಮಿಕ ಹಂತದ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು, ಪಾಲಿಕೆ ಅಧಿಕಾರಿಗಳ ತಂಡಗಳು ನಡೆಸಿವೆ. ಆದರೆ ಸದ್ಯಕ್ಕೆ ಆ ಪ್ರಕ್ರಿಯೆ ಕೂಡ ಪೂರ್ಣಗೊಳ್ಳುವ ಲಕ್ಷಣಗಳಿಲ್ಲವಾಗಿದೆ.
ಪಾಲಿಕೆಯ ಉನ್ನತ ಮೂಲಗಳು ನೀಡುವ ಮಾಹಿತಿ ಅನುಸಾರ, ಇಲ್ಲಿಯವರೆಗೂ ಪೂರ್ಣ ಪ್ರಮಾಣದಲ್ಲಿ ಮಾಹಿತಿ ಸಂಗ್ರಹಣೆ ಕಾರ್ಯ ನಡೆದಿಲ್ಲ. ಹಾಗೆಯೇ ಸಕಲ ಮಾಹಿತಿಗಳೊಂದಿಗೆ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಕಾರ್ಯವೂ ಆಗಿಲ್ಲ. ಇನ್ನಷ್ಟೆ ಈ ಪ್ರಕ್ರಿಯೆ ನಡೆಯಬೇಕಾಗಿದೆ ಎಂದು ಹೇಳುತ್ತವೆ.
ವಿಳಂಬ : ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯ್ತಿ ಅಧೀನದ 23 ಪ್ರದೇಶಗಳನ್ನು, ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಅಧಿಕಾರಿಗಳ ತಂಡ ಪ್ರಾಥಮಿಕ ಹಂತದ ಸಮೀಕ್ಷಾ ಮಾಹಿತಿ ಸಂಗ್ರಹಿಸಿದೆ. ಈ ಕುರಿತಂತೆ ಪ್ರದೇಶಗಳ ನಕ್ಷೆ ಮತ್ತೀತರ ಪ್ರಮಖ ಮಾಹಿತಿಗಳ ಸಂಗ್ರಹ ಕಾರ್ಯ ಇನ್ನಷ್ಟೆ ಆಗಬೇಕಾಗಿದೆ.
ಈ ಎಲ್ಲ ಪ್ರಕ್ರಿಯೆ ನಡೆದು, ಪಾಲಿಕೆ ಆಡಳಿತಾಧಿಕಾರಿಗಳ ಅನುಮತಿಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ಸರ್ಕಾರವು ಪ್ರಸ್ತಾವನೆ ಪರಿಶೀಲಿಸಿ ಅನುಮತಿ ನೀಡಿದ ನಂತರವಷ್ಟೆ, ಪಾಲಿಕೆ ವ್ಯಾಪ್ತಿಯ ಪರಿಷ್ಕರಣೆಯ ಅಧಿಕೃತ ಪ್ರಕ್ರಿಯೆಗಳು ಆರಂಭವಾಗುತ್ತವೆ.
ಗ್ರಾಮ ಪಂಚಾಯ್ತಿಗಳಿಂದ ಅನುಮತಿ ಪಡೆದುಕೊಳ್ಳಬೇಕು. ಅನುಮತಿ ದೊರಕಿದ ನಂತರ, ಗ್ರಾಪಂ ಅಧೀನದ ಪ್ರದೇಶಗಳು ಪಾಲಿಕೆ ವ್ಯಾಪ್ತಿಯ ಅಧೀನಕ್ಕೆ ಬರಲಿವೆ. ತದನಂತರ ವಾರ್ಡ್ ಗಳ ರಚನೆಯಾಗಬೇಕು. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ ಎಂದು ಪಾಲಿಕೆಯ ಉನ್ನತ ಮೂಲಗಳು ತಿಳಿಸುತ್ತವೆ.
ಚುನಾವಣೆ ಯಾವಾಗ? : ಸದ್ಯ ಬೆಂಗಳೂರು, ಶಿವಮೊಗ್ಗ, ಮೈಸೂರು, ತುಮಕೂರು ಪಾಲಿಕೆಗಳಿಗೆ ಚುನಾವಣೆ ನಡೆಯಬೇಕಾಗಿದೆ. ಆದರೆ ಯಾವಾಗ ಚುನಾವಣೆ ನಡೆಯಲಿದೆ ಎಂಬುವುದು ಯಕ್ಷಪ್ರಶ್ನೆಯಾಗಿ ಪರಿಣಮಿಸಿದೆ. ಮತ್ತೊಂದೆಡೆ, ಸರ್ಕಾರವು ಚುನಾವಣೆ ನಡೆಸಲು ಉತ್ಸುಕತೆ ತೋರುತ್ತಿಲ್ಲ.
ಈ ನಡುವೆ ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ಚಾಲನೆಯಲ್ಲಿದೆ. ಒಂದು ವೇಳೆ ಸರ್ಕಾರವೇನಾದರೂ ಪರಿಷ್ಕರಣೆಗೆ ಒಲವು ತೋರಿದರೆ, ಪಾಲಿಕೆ ಚುನಾವಣೆ ಮತ್ತಷ್ಟು ವಿಳಂಬವಾಗಲಿದೆಯಾ? ಎಂಬ ಚರ್ಚೆಗಳು ಸ್ಥಳೀಯ ರಾಜಕೀಯ ವಲಯದಲ್ಲಿ ನಡೆಯುತ್ತಿವೆ.
ಒಟ್ಟಾರೆ ಶಿವಮೊಗ್ಗ ಪಾಲಿಕೆ ಚುನಾವಣೆ ಹಾಗೂ ವ್ಯಾಪ್ತಿ ಪರಿಷ್ಕರಣೆಯ ವಿಷಯವು, ದಿನದಿಂದ ದಿನಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಚುನಾವಣೆಯೂ ನಡೆಯುತ್ತಿಲ್ಲ… ವ್ಯಾಪ್ತಿ ಪರಿಷ್ಕರಣೆಯೂ ಆಗುತ್ತಿಲ್ಲ… ಎಂದು ನಾಗರೀಕರು ಬೇಸರ ವ್ಯಕ್ತಪಡಿಸಲಾರಂಭಿಸಿದ್ದಾರೆ. ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುವುದನ್ನು ಇನಷ್ಟೆ ಕಾದು ನೋಡಬೇಕಾಗಿದೆ.
In the Shimoga Municipal Corporation, the year has been completed without the administration of the People’s Representatives. As of now, the signs of ward elections are not visible and the contestants are waiting for the elections..! On the other hand, the work of gathering information for revising the corporation’s scope has been going on for the past several months. Teams of corporation officials have already done the preliminary data collection work.