
shimoga | ಶಿವಮೊಗ್ಗ : ಮಂಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಂಕಿಗಾಹುತಿ – ಪ್ರಯಾಣಿಕರು ಪಾರು!
ಶಿವಮೊಗ್ಗ (shivamogga), ಡಿ. 20: ಚಲಿಸುತ್ತಿರುವಾಗಲೆ ಖಾಸಗಿ ಪ್ರಯಾಣಿಕ ಬಸ್ ವೊಂದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ, ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಸಮೀಪ ಡಿ. 20 ರ ಶುಕ್ರವಾರ ಮುಂಜಾನೆ 3.50 ರ ಸುಮಾರಿಗೆ ನಡೆದಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ದುರ್ಗಾಂಬ ಸಂಸ್ಥೆಗೆ ಸೇರಿದ ಬಸ್ ಬೆಂಕಿಗಾಹುತಿಯಾಗಿದ್ದೆಂದು ಗುರುತಿಸಲಾಗಿದೆ. ಸದರಿ ಬಸ್ ಮಂಗಳೂರಿನಿಂದ – ದಾವಣಗೆರೆಗೆ ತೆರಳುತ್ತಿತ್ತು. ಸುಮಾರು 19 ಜನ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.
ತೀರ್ಥಹಳ್ಳಿಯಿಂದ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದ ವೇಳೆ, ಸಕ್ರೆಬೈಲು ಆನೆ ಬಿಡಾರದ ಬಳಿ ಬಸ್ ನಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚಾಲಕ ರಸ್ತೆ ಬದಿ ಬಸ್ ನಿಲ್ಲಿಸಿದ್ದಾನೆ. ಪ್ರಯಾಣಿಕರೆಲ್ಲರೂ ಕೆಳಗಿಳಿದಿದ್ದಾರೆ. ಜೊತೆಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಲಾಗಿದೆ.
ಕ್ಷಣಮಾತ್ರದಲ್ಲಿ ಬಸ್ ಧಗಧಗನೆ ಹೊತ್ತಿ ಉರಿಯಲಾರಂಭಿಸಿದೆ. ಸ್ಥಳಕ್ಕಾಗಮಿಸಿದ ಶಿವಮೊಗ್ಗ ಅಗ್ನಿಶಾಮಕ ದಳದ ಠಾಣಾಧಿಕಾರಿ ನರೇಂದ್ರ ನೇತೃತ್ವದ ತಂಡ ಬಸ್ ಗೆ ಹೊತ್ತಿದ್ದ ಬೆಂಕಿ ನಂದಿಸುವಲ್ಲಿ ಸಫಲವಾಗಿದೆ.
ಬಸ್ ಎಂಜಿನ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮದಿಂದ ಬೆಂಕಿ ಹೊತ್ತಿಕೊಳ್ಳಲು ಕಾರಣವೆಂದು ಹೇಳಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತಂತೆ ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.
A private passenger bus caught fire while it was moving, near Sakrebailu in Shimoga taluk on Friday, December 20 at around 3 – 50 am. All the passengers in the bus escaped unharmed.
It has been identified that the bus belonging to Durgamba organization was caught on fire. The bus was going from Mangalore to Davangere. It is known that there were about 19 passengers.