
ಶಿವಮೊಗ್ಗ : ರಾಜ್ಯದ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲೊಂದಾದ ಮೆಗ್ಗಾನ್ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಕ್ರಮಕೈಗೊಳ್ಳುವುದೆ ರಾಜ್ಯ ಸರ್ಕಾರ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಡಿ. 23: ಅತ್ಯಂತ ಕಡಿಮೆ ದರದಲ್ಲಿ ಬಡವರು, ಅಶಕ್ತರು, ಹಸಿದವರಿಗೆ ತಿಂಡಿ – ಊಟ ದೊರಕಬೇಕೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಸ್ಥಾಪನೆ ಮಾಡಿರುವ ಇಂದಿರಾ ಕ್ಯಾಂಟೀನ್ ಗಳು, ಜನಮಾನಸದಲ್ಲಿ ತನ್ನದೆ ಆದ ಮಹತ್ವ ಪಡೆದುಕೊಂಡಿವೆ. ಹಸಿದವರ ಪಾಲಿಗೆ ಅಕ್ಷಯಪಾತ್ರೆಯಂತಾಗಿವೆ. ಆದರೆ ಅಗತ್ಯವಿರುವೆಡೆ ಕ್ಯಾಂಟೀನ್ ಗಳು ಸ್ಥಾಪನೆಯಾಗಿಲ್ಲವೆಂಬ ದೂರುಗಳು ನಾಗರೀಕರದ್ದಾಗಿದೆ.
ಇದಕ್ಕೆ ತಾಜಾ ನಿದರ್ಶನವೆಂಬಂತೆ, ರಾಜ್ಯದ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲೊಂದಾದ ಹಾಗೂ ಪ್ರತಿನಿತ್ಯ ನೂರಾರು ಜನ ಆಗಮಿಸುವ, ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಿಲ್ಲ. ಇದರಿಂದ ಆಸ್ಪತ್ರೆಗೆ ಆಗಮಿಸುವ ಬಡವರಿಗೆ ಸಾಕಷ್ಟು ಅನಾನುಕೂಲವಾಗುವಂತಾಗಿದೆ.
ಮೆಗ್ಗಾನ್ ಆಸ್ಪತ್ರೆಗೆ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಆಗಮಿಸುತ್ತಾರೆ. ಕೆಲವೊಮ್ಮೆ ಆಸ್ಪತ್ರೆಯಲ್ಲಿ ದಾಖಲಾಗುವ ತಮ್ಮವರ ಆರೈಕೆಗಾಗಿ ಆಸ್ಪತ್ರೆ ಆವರಣದಲ್ಲಿಯೇ ಹಗಲಿರುಳು ತಂಗುತ್ತಾರೆ. ಇಂತಹ ನಾಗರೀಕರು ಊಟೋಪಚಾರಕ್ಕೆಂದೆ ದುಬಾರಿ ಹಣ ವ್ಯಯಿಸುವಂತಾಗಿದೆ.
ಇದು ಬಡ ಹಾಗೂ ಅಶಕ್ತ ವರ್ಗದವರಿಗೆ ಹೊರೆಯಾಗಿ ಪರಿಣಮಿಸಿದೆ. 5 ರೂ.ಗೆ ಉಪಹಾರ ಹಾಗೂ 10 ರೂ.ಗೆ ಊಟ ದೊರಕುವ ಇಂದಿರಾ ಕ್ಯಾಂಟೀನ್ ಆರಂಭವಾದರೆ, ಆಸ್ಪತ್ರೆಗೆ ಆಗಮಿಸುವ ನೂರಾರು ಬಡ – ಅಶಕ್ತ ವರ್ಗದವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಆಸ್ಪತ್ರೆಗೆ ಆಗಮಿಸುವವರು ಅಭಿಪ್ರಾಯಪಡುತ್ತಾರೆ.
ಸರ್ಕಾರ ಗಮನಿಸಲಿ : ಶಿವಮೊಗ್ಗ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗೂಂಡುರಾವ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಆದ್ಯ ಗಮನಹರಿಸಬೇಕಾಗಿದೆ.
ಈಗಾಗಲೇ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಹೋಟೆಲ್ ಸೇರಿದಂತೆ ಇತರೆ ವ್ಯವಹಾರ ನಡೆಸಲು ಮೆಗ್ಗಾನ್ ಆಡಳಿತ ಅವಕಾಶ ಕಲ್ಪಿಸಿದೆ. ಅದೇ ರೀತಿಯಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆಗೂ ಅಗತ್ಯ ಸ್ಥಳವಾಕಾಶವನ್ನು ಆಸ್ಪತ್ರೆ ಆಡಳಿತ ಮಂಡಳಿ ಕಲ್ಪಿಸಬೇಕು. ಇಂದಿರಾ ಕ್ಯಾಂಟೀನ್ ಸ್ಥಾಪಿಸುವಂತೆ, ರಾಜ್ಯ ಸರ್ಕಾರಕ್ಕೆ ಅಗತ್ಯ ಕೋರಿಕೆಯ ಪ್ರಸ್ತಾವನೆ ಕಳುಹಿಸಿಕೊಡಬೇಕು ಎಂದು ಕೆಲ ನಾಗರೀಕರು ಆಗ್ರಹಿಸುತ್ತಾರೆ.
ನಗರದ ವಿವಿಧೆಡೆ ಹೊಸದಾಗಿ ಇಂದಿರಾ ಕ್ಯಾಂಟೀನ್ ಸ್ಥಾಪನೆಯ ಪ್ರಸ್ತಾವನೆಯಿದೆ ಎಂಬ ಮಾಹಿತಿಳಿವೆ. ಈ ವೇಳೆ ಆದ್ಯತೆಯ ಮೇಲೆ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಕ್ಯಾಂಟೀನ್ ಸ್ಥಾಪನೆ ಮಾಡುವ ಸಂಬಂಧ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕಾಗಿದೆ ಎಂದು ನಾಗರೀಕರು ಒತ್ತಾಯಿಸುತ್ತಾರೆ.
Indira Canteens, established by the state government with the good intention of providing snacks and meals to the poor, weak and hungry at a very low price, have gained importance in the public mind. They are like a bowl of food for the hungry. But there are complaints from citizens that canteens have not been established where required.
As a fresh example of this, Indira Canteen has not been established in Shimoga Government Megan Hospital premises, which is one of the biggest government hospitals in the state and where hundreds of people arrive every day. This makes it very uncomfortable for the poor who come to the hospital.