
shikaripura | ಶಿಕಾರಿಪುರ : ಇ – ಖಾತಾ ಕುರಿತಂತೆ ಬಿ ವೈ ವಿಜಯೇಂದ್ರ ಹೇಳಿದ್ದೇನು?
ಶಿಕಾರಿಪುರ (shikaripur), ಮಾ. 2: ಹಲವು ವರ್ಷಗಳಿಂದ ಬಾಕಿ ಇರುವ ಇ – ಖಾತಾ ಸಮಸ್ಯೆಗೆ, ಸರ್ಕಾರ ನೀಡಿರುವ ಮಾರ್ಗದರ್ಶಿ ಸೂತ್ರ ಅನ್ವಯ ಜನರಿಗೆ ತೊಂದರೆ ಆಗದಂತೆ ಎ ಮತ್ತು ಬಿ ಖಾತೆಗಳನ್ನು ನೀಡಬೇಕು ಎಂದು ಶಿಕಾರಿಪುರ ಕ್ಷೇತ್ರ ಶಾಸಕ ಬಿ ವೈ ವಿಜಯೇಂದ್ರ ಅವರು ಪುರಸಭೆ ಆಡಳಿತಕ್ಕೆ ಸೂಚಿಸಿದ್ದಾರೆ.
ಮಾ. 2 ರಂದು ಶಿಕಾರಿಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುರಸಭಾ ಸದಸ್ಯರುಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು.
ದಶಕಗಳಿಂದ ಇರುವ ಸಮಸ್ಯೆಗೆ ಒಂದು ದಾರಿ ದೊರೆತಿದೆ. ಜನರನ್ನು ಕಚೇರಿಗೆ ಅಲೆದಾಡಿಸಬೇಡಿ. ಅನಗತ್ಯ ದಾಖಲೆಗಳನ್ನು ಕೇಳಿ ಸಾರ್ವಜನಿಕಗೆ ತೊಂದರೆ ಕೊಡಬೇಡಿ. ಪುರಸಭೆಯಲ್ಲಿ 8 ರಿಂದ 10 ಕೌಂಟರ್ ಗಳನ್ನು ತೆರೆದು ನಾಗರೀಕರಿಗೆ ಕಾಲಮಿತಿಯೊಳಗೆ ಸೇವೆ ನೀಡುವ ಕಾರ್ಯ ನಡೆಸಬೇಕು ಎಂದು ಹೇಳಿದರು.
ಅವಶ್ಯವಿದ್ದಲ್ಲಿ ಹೆಚ್ಚುವರಿ ಡಾಟಾ ಆಪರೇಟರ್ ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜನೆ ಮಾಡಿಕೊಳ್ಳಿ. ಕಚೇರಿ ಹೊರ ಭಾಗದಲ್ಲಿ ಶಾಮಿಯಾನ ಹಾಕಿ ಜನ ಕೂರಲು ವ್ಯವಸ್ಥೆ ಮಾಡಿ. ಕುಳಿತುಕೊಳ್ಳಲು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ. ಶೀಘ್ರವಾಗಿ ಇ – ಖಾತಾ ತಲುಪಿಸುವ ಕೆಲಸವನ್ನು ಸಮರೋಪಾದಿಯಲ್ಲಿ ಮಾಡಬೇಕು ಎಂದರು.
ಬಿ – ಖಾತ ನೀಡಲು ಮೇ 10 ಕೊನೆಯ ದಿನಾಂಕವಾಗಿದ್ದು ಅಲ್ಲಿಯವರೆಗೂ ಕಾಯದೆ ಏಪ್ರಿಲ್ ಅಂತ್ಯದ ಒಳಗಾಗಿ ಇ – ಖಾತಾ ಕೊಡುವ ವ್ಯವಸ್ಥೆ ಮಾಡುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರತಿಯೊಬ್ಬ ಪುರಸಭಾ ಸದಸ್ಯರು ತಮ್ಮ ವಾರ್ಡ್ ಗಳಲ್ಲಿ ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಬೇಕು. ಪುರಸಭಾ ವಾಹನಗಳಲ್ಲಿರುವ ಮೈಕ್ ಗಳನ್ನು ಉಪಯೋಗಿಸಿಕೊಂಡು ಪ್ರಚಾರ ನಡೆಸಬೇಕು ಎಂದು ತಿಳಿಸಿದರು.
ಭೂ ಪರಿವರ್ತನೆಗೊಂಡು , ಪುರಸಭಾ ಮುಖ್ಯಾಧಿಕಾರಿ ಅನುಮೋದಿಸಿದ ನಕ್ಷೆ ಹೊಂದಿ, ಅಭಿವೃದ್ಧಿ ಶುಲ್ಕ ಪಾವತಿಸಿ ಕೊಂಡು ಖಾತೆ ದಾಖಲು ಮಾಡಿರುವ ನಿವೇಶನಗಳಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಇ – ಖಾತಾ ನೀಡಿದ್ದು, ಅಂತಹ ಪ್ರಕರಣಗಳಿಗೆ ಈಗ A ಖಾತಾ ನೀಡಬೇಕೆಂದು ಪುರಸಭಾ ಸದಸ್ಯ ರೇಣುಕಾ ಸ್ವಾಮಿ ಸಭೆಗೆ ಮನವಿ ಮಾಡಿದರು.
ಈ ಕುರಿತು ಉತ್ತರಿಸಿದ ಮುಖ್ಯಾಧಿಕಾರಿ ಭರತ್ ಅವರು, ಈ ಕುರಿತಂತೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸಲಹೆ ಪಡೆಯುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷರು ಹಾಗೂ ಜಿಲ್ಲಾ ದಿಶಾ ಸಮಿತಿಯ ಸದಸ್ಯರಾದ ಕೆ ಎಸ್ ಗುರುಮೂರ್ತಿ, ಪುರಸಭಾ ಉಪಾಧ್ಯಕ್ಷೆ ರೂಪ ಪಾರಿವಾಳ ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ್ (ಗುಂಡ ), ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ ಹಾಲಪ್ಪ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಸಂಕ್ಲಾಪುರ ಹನುಮಂತಪ್ಪ ಸೇರಿದಂತೆ ಪುರಸಭಾ ಸದಸ್ಯರು ಹಾಜರಿದ್ದರು.
Shikaripura, March 2: Shikaripura Constituency MLA B Y Vijayendra has suggested to the municipal administration that according to the guidelines given by the government, A and B accounts should be given to the people so that the people do not face any problem. On March 2, he held a meeting with the municipal councilors and concerned officials at the tourist temple of Shikaripura town.