
shikaripura | ಶಿಕಾರಿಪುರ | ದೇವಾಲಯಕ್ಕೆ ಹೊರಟವರು ಮಸಣಕ್ಕೆ..! : ವಿವಾಹ ನಿಶ್ಚಯವಾಗಿದ್ದ ಯುವಕ – ಯುವತಿಯ ದಾರುಣ ಅಂತ್ಯ!!
ಶಿಕಾರಿಪುರ (shikaripura), ಸೆಪ್ಟೆಂಬರ್ 11: ‘ಬದುಕು ಜಟಕಾಬಂಡಿ ; ವಿಧಿಯದರ ಸಾಹೇಬ | ಕುದುರೆ ನೀನ್ ; ಅವನು ಪೇಳ್ದಂತೆ ಪಯಣಿಗರು | ಮದುವೆಗೋ, ಮಸಣಕೋ ಹೋಗೆಂದ ಕಡೆಗೋಡು | ಪದ ಕುಸಿಯೆ ನೆಲವಿಹುದು ಮಂಕುತಿಮ್ಮ..’
ಸದರಿ ಕವಿವಾಣಿಯು, ವಿವಾಹ ನಿಶ್ಚಯವಾಗಿದ್ದ ಯುವಕ ಹಾಗೂ ಯುವತಿಯ ಬಾಳಲ್ಲಿ ನಿಜವಾಗಿದೆ..! ದೇವಸ್ಥಾನಕ್ಕೆಂದು ಬೈಕ್ ನಲ್ಲಿ ಹೊರಟಿದ್ದ ನವ ಜೋಡಿಯೊಂದು, ರಸ್ತೆ ಅಪಘಾತದಲ್ಲಿ ಇಹಲೋಕ ತ್ಯಜಿಸಿದ ದಾರುಣ ಘಟನೆ, ಶಿಕಾರಿಪುರ ತಾಲೂಕಿನಲ್ಲಿ ಸೆಪ್ಟೆಂಬರ್ 10 ರಂದು ನಡೆದಿದೆ.
ಅಂಬಾರಗೊಪ್ಪ ಸಮೀಪದ ಕುಟ್ರಳ್ಳಿ ಕ್ರಾಸ್ ನ ಶಿರಾಳಕೊಪ್ಪ ರಸ್ತೆಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಬಳಿ, ಈ ಅಪಘಾತ ನಡೆದಿದೆ. ನವಜೋಡಿಯಿದ್ದ ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಶಿಕಾರಿಪುರ ತಾಲೂಕಿನ ಮಟ್ಟಿಕೋಟೆ ಗ್ರಾಮದ ನಿವಾಸಿ ರೇಖಾ (22) ಹಾಗೂ ತೋಗರ್ಸಿ ಸಮೀಪದ ಗಂಗೊಳ್ಳಿ ಗ್ರಾಮದ ನಿವಾಸಿಯಾದ ಬಸವನಗೌಡ (24) ಮೃತಪಟ್ಟವರೆಂದು ಗುರುತಿಸಲಾಗಿದೆ.
ದುರಂತ ಅಂತ್ಯ : ಕಳೆದ ಶ್ರಾವಣ ಮಾಸದಲ್ಲಿ ಇವರಿಬ್ಬರ ವಿವಾಹ ನಿಶ್ಚಿತಾರ್ಥ ನೆರವೇರಿತ್ತು. ಮುಂದಿನ ತಿಂಗಳು ಮದುವೆ ನಿಗದಿಯಾಗಿತ್ತು. ಇದಕ್ಕಾಗಿ ಎರಡೂ ಕುಟುಂಬಗಳು ಪೂರ್ವಭಾವಿ ತಯಾರಿ ನಡೆಸಲಾರಂಭಿಸಿದ್ದವು.
ಬುಧವಾರ ಭಾವಿ ಪತ್ನಿಯ ಮನೆಗೆ ಆಗಮಿಸಿದ್ದ ಬಸವನಗೌಡ, ಬೈಕ್ ನಲ್ಲಿ ಯುವತಿಯೊಂದಿಗೆ ದೇವಾಲಯಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮಾರುತಿ ಇಕೋ ಕಾರು ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಬೈಕ್ ಪಕ್ಕದ ನಾಲೆಗೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ನವ ಜೋಡಿಯು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A tragic incident took place on September 11 in Shikaripura taluk when a newlywed couple, who were on their way to a temple on a bike, passed away in a road accident. The tragedy occurred on September 11 near Kittur Rani Channamma Residential School on Shiralakoppa Road, Kutralli Cross.