
shimoga | ಮಲೆನಾಡಿನಲ್ಲಿ ರಣ ಬಿಸಿಲು : ಎಚ್ಚೆತ್ತುಕೊಳ್ಳಬೇಕಾಗಿದೆ ಆಡಳಿತ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಮಾ. 8: ಮಲೆನಾಡಿನಲ್ಲಿ ರಣ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಕ್ಷರಶಃ ಕಾದ ಕಾವಲಿಯಂತಾಗಿ ಪರಿಣಮಿಸಿದೆ. ಮತ್ತೊಂದೆಡೆ, ಪ್ರಸ್ತುತ ಬೇಸಿಗೆಯಲ್ಲಿ ತಾಪಮಾನದ ಪ್ರಮಾಣ ಹೆಚ್ಚಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೇಸಿಗೆ ಆರಂಭದ ವೇಳೆಯೇ, ನೆತ್ತಿ ಸುಡುವ ಬಿಸಿಲಿಗೆ ನಾಗರೀಕರು ಹೈರಾಣಾಗಿದ್ದಾರೆ. ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲಾಗದ ಮಟ್ಟಕ್ಕೆ ಸುಡು ಬಿಸಿಲು ಕಂಡುಬರುತ್ತಿದೆ. ಹಲವೆಡೆ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಪ್ರಮಾಣದ ಉಷ್ಣಾಂಶ ದಾಖಲಾಗುತ್ತಿದೆ.
ಇದೆಲ್ಲದರ ನಡುವೆ ಕಳೆದೆರೆಡು ತಿಂಗಳುಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಕಣ್ಮರೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಬೇಸಿಗೆ ವೇಳೆ, ತಾಪಮಾನದ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿರುವುದು ಕಂಡುಬರುತ್ತಿದೆ.
ಈ ನಡುವೆ ಉತ್ತಮ ಮುಂಗಾರು ಮಳೆಯಾದ ಕಾರಣದಿದ ಜಿಲ್ಲೆಯ ಬಹುತೇಕ ಜಲಾಶಯ, ಕೆರೆಕಟ್ಟೆಗಳು ಭರ್ತಿಯಾಗಿದ್ದವು. ಆದರೆ ರಣ ಬಿಸಿಲು ಹಾಗೂ ಹಲವು ತಿಂಗಳುಗಳಿಂದ ಮಳೆಯಾಗದಿರುವುದರಿಂದ ಡ್ಯಾಂ, ನದಿ, ಕೆರೆಕಟ್ಟೆ ಸೇರಿದಂತೆ ಜಲಮೂಲಗಳ ನೀರಿನ ಸಂಗ್ರಹದಲ್ಲಿ ಗಣನೀಯ ಇಳಿಕೆ ಕಂಡುಬರಲಾರಂಭಿಸಿದೆ. ಹಸಿರು ಹುಲ್ಲು ಒಣಗಲಾರಂಭಿಸಿದೆ.
ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಏಪ್ರಿಲ್ ಮಧ್ಯಂತರದ ನಂತರ ಅಂತರ್ಜಲದ ಮಟ್ಟದಲ್ಲಿ ಮತ್ತಷ್ಟು ಕುಸಿತವಾಗಿ ಕುಡಿಯುವ ನೀರಿಗೆ ಹಾಹಾಕಾರ ತಲೆದೋರುವ ಸ್ಥಿತಿಯಿದ್ದು, ಜನ – ಜಾನುವಾರುಗಳು ಸಂಕಷ್ಟಕ್ಕೆ ಸಿಲುಕುವ ಆತಂಕವಿದೆ.
ಈ ಕಾರಣದಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಆಡಳಿತ ಜನ – ಜಾನುವಾರುಗಳಿಗೆ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಮಾಡಿಕೊಳ್ಳಬೇಕಾಗಿದೆ. ಸಂಭಾವ್ಯ ಪರಿಸ್ಥಿತಿಗಳನ್ನು ಎದುರಿಸಲು ಸ್ಥಳಿಯಾಡಳಿತಗಳಿಗೆ ಸೂಕ್ತ ಸಲಹೆ – ಸೂಚನೆಗಳನ್ನು ಕೊಡಬೇಕಾಗಿದೆ.
ನೀರು, ಮೇವು : ಈಗಾಗಲೇ ಹಲವೆಡೆ ಸುಡು ಬಿಸಿಲಿಗೆ ಹಸಿರು ಹುಲ್ಲು ಒಣಗಲಾರಂಭಿಸಿದೆ. ಇದರಿಂದ ಜಾನುವಾರುಗಳ ಮೇವಿಗೆ ಸಂಕಷ್ಟ ಎದುರಾಗಲಾರಂಭಿಸಿದೆ. ಜಾನುವಾರುಗಳ ಹಸಿವು ಇಂಗಿಸಲು ಅಗತ್ಯ ಮೇವು ದಾಸ್ತಾನು ಮಾಡಿಕೊಳ್ಳಬೇಕಾಗಿದೆ. ಜೊತೆಗೆ ಜಾನುವಾರು ಪಾಲಕರು ಸಕಾಲದಲ್ಲಿ ಮೇವು ದೊರಕಿಸಿಕೊಡುವ ಕಾರ್ಯದತ್ತ ಆಡಳಿತ ಚಿತ್ತ ಹರಿಸಬೇಕಾಗಿದೆ.
ಹಾಗೆಯೇ ಜಾನುವಾರುಗಳ ಕುಡಿಯುವ ನೀರಿಗೆಂದೆ ನಿರ್ಮಿಸಿರುವ ಜಾನುವಾರು ತೊಟ್ಟಿಗಳು, ಹಲವೆಡೆ ಸೂಕ್ತ ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿವೆ. ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಲಭ್ಯವಾಗುತ್ತಿಲ್ಲ. ಸದರಿ ಜಾನುವಾರು ತೊಟ್ಟಿಗಳಿಗೆ ಬೇಸಿಗೆ ವೇಳೆ ಸಮರ್ಪಕ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕಾಗಿದೆ.
ಜೊತೆಗೆ ಅಗತ್ಯವಿರುವೆಡೆ, ಹೆಚ್ಚುವರಿಯಾಗಿ ಜಾನುವಾರು ತೊಟ್ಟಿ ನಿರ್ಮಾಣಕ್ಕೆ ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಬೇಕಾಗಿದೆ. ಈ ಮೂಲಕ ಜಾನುವಾರುಗಳ ಮೇವು, ನೀರಿಗೆ ತೊಂದರೆಯಾಗದಂತೆ ಆಡಳಿತ ಎಚ್ಚರವಹಿಸಬೇಕಾಗಿದೆ.
ಸಾರ್ವಜನಿಕ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಕಾಮಗಾರಿಗಳನ್ನು ತುರ್ತುಗತಿಯಲ್ಲಿ ನಡೆಸಲು ಸ್ಥಳಿಯಾಡಳಿತಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾಗಿದೆ. ನಾನಾ ನೆಪವೊಡ್ಡಿ ವಿಳಂಬಗತಿಯಲ್ಲಿ ಕಾಮಗಾರಿ ನಡೆಸಿ, ನಾಗರೀಕರಿಗೆ ತೊಂದರೆ ಉಂಟು ಮಾಡದಂತೆ ಖಡಕ್ ನಿರ್ದೇಶನ ರವಾನೆಯಾಗಬೇಕಾಗಿದೆ.
ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಪ್ರದೇಶಗಳಿಗೆ, ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಹಾಗೆಯೇ ಬೇಸಿಗೆ ವೇಳೆ ಬೋರ್’ವೆಲ್ ಗಳಲ್ಲಿ ಲವಣಾಂಶಗಳ ಪ್ರಮಾಣ ಹೆಚ್ಚಾಗಿರುವುದರಿಂದ, ಇದೇ ನೀರು ಸೇವಿಸುವ ನಾಗರೀಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಕಾರಣದಿಂದ ಬೋರ್’ವೆಲ್ ನೀರಿಗೆ ಬದಲಾಗಿ ಶುದ್ಧ ಕುಡಿಯುವ ನೀರು ಪೂರೈಕೆಯತ್ತ ಚಿತ್ತ ಹರಿಸಬೇಕು.
ಸ್ಥಳಿಯಾಡಳಿತಗಳ ಕೆಲ ಅಧಿಕಾರಿ, ಸಿಬ್ಬಂದಿಗಳು ನಾಗರೀಕರ ಅಹವಾಲು ಆಲಿಸುವುದನ್ನೇ ಮರೆತ್ತಿದ್ದಾರೆ. ಸರ್ಕಾರಿ ಮೊಬೈಲ್ ಪೋನ್ ಗಳ ಸಂರ್ಪಕಕ್ಕೆ ಲಭ್ಯವಾಗದಿರುವ ದೂರುಗಳಿವೆ. ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿಯಿತ್ತು ಅಹವಾಲು ಆಲಿಸುತ್ತಿಲ್ಲವೆಂಬ ಗಂಭೀರ ದೂರುಗಳಿವೆ.
ಹಾಗೆಯೇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕೆಲಸ ಕಾರ್ಯಗಳು ನಾಗರೀಕರಿಗೆ ತಿಳಿಯದಂತಾಗಿದೆ. ಕೆಲ ಅಧಿಕಾರಿ, ಸಿಬ್ಬಂದಿಗಳು ಕಚೇರಿಗೆ ಸೀಮಿತವಾಗಿರುವ ಆರೋಪಗಳು ಕೇಳಿಬರುತ್ತಿವೆ.
ಒಟ್ಟಾರೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಆಡಳಿತ ಎಚ್ಚೆತ್ತುಕೊಂಡು, ಪ್ರಸ್ತುತ ಬೇಸಿಗೆ ವೇಳೆ ಜನ – ಜಾನುವಾರುಗಳಿಗೆ ತೊಂದರೆಯಾಗದಂತೆ ಅಗತ್ಯವಿರುವ ಎಲ್ಲ ಪರಿಹಾರ ಕ್ರಮಕೈಗೊಳ್ಳಬೇಕು. ಜೊತೆಗೆ ಅದಕ್ಷ ಅಧಿಕಾರಿ – ನೌಕರರಿಗೆ, ಇಲಾಖೆಗಳಿಗೆ ಚುರುಕು ಮುಟ್ಟಿಸುವ ಕಾರ್ಯ ಮಾಡಬೇಕಾಗಿದೆ.
Shivamogga, Mar 8: The scorching heat in Malnad is increasing day by day. It has literally become like a hot guard. On the other hand, the Indian Meteorological Department has predicted that the temperature will increase during the current summer.
At the beginning of summer, citizens are suffering from the scorching sun. The heat is so intense that it is impossible to leave the house during the afternoon. In many places, the maximum temperature is recording more than 35 degrees Celsius.