kudala sangama | What did CM Siddaramaiah say about Prime Minister Modi's Mann Ki Baat program? kudala sangama | ಪ್ರಧಾನಿ ಮೋದಿ ಮನ್‌ ಕಿ ಬಾತ್ ಕಾರ್ಯಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

kudala sangama | ಪ್ರಧಾನಿ ಮೋದಿ ಮನ್‌ ಕಿ ಬಾತ್ ಕಾರ್ಯಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಕೂಡಲ ಸಂಗಮ (kudala sangama) ಏ 29 : ಮನ್‌ ಕಿ ಬಾತ್ ನಲ್ಲಿ ಚರ್ಚೆ ಇಲ್ಲ. ಏಕಮುಖವಾಗಿ ಹೇಳಿದ್ದನ್ನು ಕೇಳಬೇಕು ಎನ್ನುವ ಧೋರಣೆ ಇದೆ. ಇದು ಸರ್ವಾಧಿಕಾರಿ ಲಕ್ಷಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ “ಶರಣರ ವೈಭವ-2025” ನ್ನು ಉದ್ಘಾಟಿಸಿ, ಬಸವ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಚರ್ಚೆ ಇರುತ್ತದೆ. ಸರ್ವಾಧಿಕಾರದಲ್ಲಿ ಚರ್ಚೆಗೆ ಅವಕಾಶ ಇಲ್ಲ. ಏಕಮುಖವಾಗಿ “ನಾನು ಹೇಳಿದ್ದನ್ನು ನೀವು ಕೇಳಿ” ಎನ್ನುವುದಷ್ಟೆ. “ಮನ್ ಕಿ ಬಾತ್” ರೀತಿ ನಾನು ಹೇಳ್ತೀನಿ, ನೀವು ಕೇಳಿ ಅನ್ನೋದು ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಿದರು.

ವಚನ ಎಂದರೆ ಮಾತು. ಶರಣರ ವಚನ ಜನರ ಭಾಷೆಯಲ್ಲಿವೆ. ಆದ್ದರಿಂದ ವಚನ ಸಾಹಿತ್ಯ, ಜನರ ಸಾಹಿತ್ಯ ಆಗಿದೆ. ಹಿಂದೆ ಸಂಸ್ಕೃತ ಕಲಿತರೆ ಕಲಿಯುವ ಶೂದ್ರರ ಕಿವಿಗೆ ಕಾದ ಸೀಸ ಉಯ್ಯುವ ಶಿಕ್ಷೆ ಇತ್ತು. ಇದರಿಂದಲೇ ಭಾರತೀಯ ಶೂದ್ರ ಸಮುದಾಯ ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಶಿಕ್ಷ ಣ ಇಲ್ಲದ ಕಾರಣಕ್ಕೆ ಅಸಮಾನತೆ ಬೆಳೆಯಿತು ಎಂದರು.

“ನಮ್ಮ‌ ಸಂವಿಧಾನ  ವೈರುದ್ಯತೆ ಇರುವ ಸಮಾಜದಲ್ಲಿ ಜಾರಿ ಆಗುತ್ತಿದೆ. ಪ್ರಜಾಪ್ರಭುತ್ವದ ಕಾರಣದಿಂದ ರಾಷ್ಟ್ರಪತಿಯಿಂದ ಪೌರ ಕಾರ್ಮಿಕರವರೆಗೂ ಎಲ್ಲರಿಗೂ ಒಂದೇ ಮತ ಎನ್ನುವ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಇದು ಸಿಗದೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಇಲ್ಲ ಎನ್ನುವ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದರು.

ಇವನಾರವ ಇವನಾರವ ಎಂದು ವಚನ ಹೇಳೋದು, ಈ ಕಡೆ ಬಂದು ಅವನು ಯಾವ ಜಾತಿ ಎಂದು ಕೇಳೋದು ನಡೆಯುತ್ತಿದೆ. ಹೀಗಾದರೆ ಬಸವಣ್ಣನವರ ಆಶಯದಂತೆ ಜಾತಿ ನಿರ್ಮೂಲನೆ ಆಗಲ್ಲ. ಜಾತಿಗೆ ಚಲನೆಯಿಲ್ಲ. ವರ್ಗಕ್ಕೆ ಚಲನೆ ಇದೆ. ಎಲ್ಲಾ ಜಾತಿಗಳಿಗೂ ಆರ್ಥಿಕ ಚಲನೆ ಸಿಕ್ಕಾಗ ಮಾತ್ರ ಜಾತಿ ನಿರ್ಮೂಲನೆ ಸಾಧ್ಯ ಎಂದರು.

ಇವನಾರವ ಇವನಾರವ ಎಂದು ವಚನ ಹೇಳುತ್ತಲೇ ಜಾತಿ ಮಾಡುವವರು ಇದ್ದಾರೆ. ಬಸವಣ್ಣನವರು ಮತ್ತು ಶರಣರು ಕರ್ಮಸಿದ್ಧಾಂತದ ವಿರುದ್ಧ ಹೋರಾಟ ನಡೆಸಿದರು. ಆದರೆ ಈಗ ಶಿಕ್ಷಣ ಪಡೆದವರೇ ಜನ್ಮ ಜನ್ಮಗಳಲ್ಲಿ ನಂಬಿಕೆ ಇಟ್ಟು ಕರ್ಮಸಿದ್ಧಾಂತ ಆಚರಿಸುತ್ತಿದ್ದಾರೆ. ಒಂದು ಕಡೆ ಬಸವ ಜಯಂತಿ ಆಚರಿಸೋದು ಮತ್ತೊಂದು ಕಡೆ ಕರ್ಮಸಿದ್ಧಾಂತ ಆಚರಿಸೋದು ಮಾಡಿದರೆ ಬಸವ ಜಯಂತಿಗೆ ಅರ್ಥ ಇಲ್ಲ ಎಂದರು.

ಬಸವಣ್ಣ ಅರ್ಥ ಆಗ್ಬೇಕು ಅಂದ್ರೆ ಮೊದಲು ಕರ್ಮಸಿದ್ಧಾಂತ ಮತ್ತು ಹಣೆಬರಹ ಎನ್ನುವ ಮೌಡ್ಯವನ್ನು ಬಿಡುವ ಶಪಥ ಮಾಡಬೇಕು ಎಂದು ಕರೆ ನೀಡಿದರು.

ಆಚಾರವೇ ಸ್ವರ್ಗ-ಅನಾಚಾರವೇ ನರಕ ಎನ್ನುವ ಬಸವಣ್ಣನವರ ಮೌಲ್ಯ ಪಾಲಿಸುವ ಶಪಥ ಮಾಡಿ ನೋಡೋಣ. ಧರ್ಮ ಎಂದರೆ ಭಯಾನಕವಾಗಿ ರಾಶಿ ರಾಶಿ ಏನೇನೋ ಹೇಳ್ತಾರೆ. ಇದ್ಯಾವುದೂ ಧರ್ಮ ಅಲ್ಲ. ಬಸವಣ್ಣನವರು ಬಹಳ ಸರಳವಾಗಿ “ದಯೆಯೇ ಧರ್ಮದ ಮೂಲವಯ್ಯ” ಎಂದಿದ್ದಾರೆ. ಇಷ್ಟು ಸರಳ ಮತ್ತು ಸುಂದರವಾದ ಮೌಲ್ಯವೇ ಧರ್ಮ ಎಂದರು.

ಬಸವಣ್ಣನವರ ಆಶಯಗಳು, ಬಸವಣ್ಣನವರ ಮೌಲ್ಯಗಳು, ಅಂಬೇಡ್ಕರ್ ಅವರ ಸಂವಿಧಾನದ ಆಶಯ ಮತ್ತು ಮೌಲ್ಯಗಳು ಒಂದೇ ಆಗಿವೆ. ಇದನ್ನು ಅರ್ಥ ಮಾಡಿಕೊಂಡು, ಪಾಲಿಸದೇ ಹೋದರೆ ಕೇವಲ ಬಸವಣ್ಣನವರ ಬಗ್ಗೆ ಭಾಷಣ ಮಾಡುವುದರಿಂದ ಸಮಾಜಕ್ಕೆ ಎನೂ ಒಳ್ಳೆಯದು ಮಾಡಲು ಸಾಧ್ಯವಿಲ್ಲ ಎಂದರು. 

ಗೋರುಚ ಅವರ ಸಮಿತಿ ವರದಿಯಂತೆ ಅನುಭಾವಿಗಳ ಅನುಭವ ಮಂಟಪ ಮಾಡುವ ಕೆಲಸ ಆಗಿದ್ದು ನಮ್ಮಿಂದ. ಇದನ್ನು ಈ ವರ್ಷವೇ ಪೂರ್ಣಗೊಳಿಸುತ್ತೇವೆ. ಬಸವಣ್ಣರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ನಾವೇ. ಅಕ್ಕಮಹಾದೇವಿ ವಿಶ್ವ ವಿದ್ಯಾಲಯ ನಾಮಕಾರಣ ಮಾಡಿದ್ದು ನಾವೇ ಎಂದರು.

ಕನಕದಾಸರು, ಬಸವಣ್ಣ ಇಬ್ಬರೂ ಸಂಸ್ಕೃತದಲ್ಲಿ ಏನೂ ಹೇಳಲಿಲ್ಲ. ಜನರ ಭಾಷೆಯಲ್ಲಿ, ಜನರಿಗೆ ಅರ್ಥ ಆಗುವ ರೀತಿ ಅತ್ಯಂತ ಸರಳವಾಗಿ ಧರ್ಮ ಮತ್ತು ಮೌಲ್ಯವನ್ನು ಸಾರಿದರು. ಯಾವ ಭಾಷೆಯನ್ನಾದರೂ ಕಲಿಯಿರಿ. ಆದರೆ ಜನರಾಡುವ ಭಾಷೆಯಲ್ಲಿ ಮಾತನಾಡಿ, ಮೌಲ್ಯಗಳನ್ನು ವಿವರಿಸಿ ಎಂದರು. ಮಾತೃಭಾಷೆ, ತಾಯಿ ಭಾಷೆ, ನಮ್ಮ ನೆಲದ ಭಾಷೆಯಲ್ಲಿ ಬಸವಾದಿ ಶರಣರು ತಮ್ಮ ಅನುಭಾವಗಳನ್ನು ಜನರಿಗೆ ತಿಳಿಸಿದ್ದನ್ನು ವಿವರಿಸಿದರು.

ಬಸವಾದಿ ಶರಣರ ಆಶಯ ಮತ್ತು ಮೌಲ್ಯಗಳನ್ನು ನಾನು ಜಾರಿಗೆ ತರಲು ಮುಂದಾದರೆ ಅದಕ್ಕೂ ಅಡ್ಡಿ ಪಡಿಸುವವರು, ವಿರೋಧಿಸುವವರು ಇದ್ದಾರೆ. ಆದ್ದರಿಂದ ಸಮ ಸಮಾಜ ಬೇಕೋ, ಜಾತಿ ಸಮಾಜ ಬೇಕೋ ಎನ್ನುವ ನಿರ್ಧಾರವನ್ನು ನಿಮಗೇ ಬಿಡುತ್ತೇನೆ ಎಂದರು.

ದೇವರಿಗೂ ಜನರಿಗೂ ನಡುವೆ ಮಧ್ಯವರ್ತಿಗಳು ಇರಬಾರದು ಎನ್ನುವುದೇ ಬಸವಣ್ಣನವರ ಮಾತಾಗಿತ್ತು. ಅದಕ್ಕೇ ದೇಹವೇ ದೇಗುಲ ಎಂದು ವಚನ ರಚಿಸಿದರು. ಬಸವಾದಿ ಶರಣರ ಆಶಯದಂತೆ ಇಷ್ಟಲಿಂಗ ಪೂಜೆ ಮಾಡುವಾಗಲಾದರೂ ಮಧ್ಯವರ್ತಿಗಳು ಇರಬಾರದು ಎಂದರು.

ಮನುವಾದಿಗಳು ಬಸವತತ್ವದ ವಿರೋಧಿಗಳು. ಮನುಷ್ಯ ತತ್ವಕ್ಕೆ ವಿರುದ್ಧ ಇರುವವರು ಮನುವಾದಿಗಳು. ಮನುಷ್ಯತ್ವ ಪಾಲಿಸುವವರು ಬಸವವಾದಿಗಳು. ಆಯ್ಕೆ ನಿಮ್ಮದು. ಮನುವಾದಿಗಳು ಬೇಕೋ, ಬಸವವಾದಿಗಳು ಬೇಕೋ ನೀವೇ ನಿರ್ಧರಿಸಿ ಎಂದರು.

ಪ್ರಜಾಪ್ರಭುತ್ವ ಹುಟ್ಟಿದ್ದು ಇಂಗ್ಲೆಂಡ್ ನಲ್ಲಿ ಅಲ್ಲ. 900 ವರ್ಷಗಳ ಹಿಂದೆ ಸ್ಥಾಪಿತವಾದ ಅನುಭವ ಮಂಟಪವೇ ಮೊದಲ ಪ್ರಜಾಪ್ರಭುತ್ವ ಕೇಂದ್ರ ಎಂದರು.

ಆರ್ಥಿಕ ಅಸಮಾನತೆ ಗುಲಾಮಗಿರಿ ಬೆಳೆಸುತ್ತದೆ. ಸ್ವಾಭಿಮಾನ ಅಳಿಸುತ್ತದೆ. ಕಾಯಕ ಮತ್ತು ದಾಸೋಹ ಬಸವಾದಿ ಶರಣರು ನಮಗೆ ಕೊಟ್ಟಿರುವ ಆರ್ಥಿಕ‌ ಸಿದ್ಧಾಂತ. ಇದನ್ನು ಪಾಲಿಸಿದರೆ ಮಾತ್ರ ಬಸವ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದರು.

ಕಲ್ಯಾಣಮ್ಮ‌ ಜನಸ್ಥಳವನ್ನು ಅಭಿವೃದ್ಧಿ ಪಡಿಸಲಾಗಿವುದು, ಬಸವಣ್ಣ ನೀಲಾಂಬಿಕೆಯ ವಿಗ್ರಹವನ್ನೂ ಮಾಡಿಸೋಣ. ಇವೆಲ್ಲವನ್ನೂ ನಾವು ಮಾಡ್ತೀವಿ. ಆದರೆ ನೀವೂ ಸ್ವಲ್ಪ ಬದಲಾಗಿ, ಎಲ್ಲರನ್ನೂ “ಇವ ನಮ್ಮವ” ಎನ್ನಿ ಎಂದು ಕರೆ ನೀಡಿದರು. ಸಚಿವರಾದ ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ, ಶಿವರಾಜ್ ತಂಗಡಗಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Kudala Sangama (kudala sangama) April 29: There is no discussion in Mann Ki Baat. There is an attitude that one should listen to what is said one-sidedly. Chief Minister Siddaramaiah criticized this as a dictatorial trait. He inaugurated “Sharanara Vaibhav-2025” organized by the Department of Kannada and Culture on the occasion of Basava Jayanti and presented the Basava Shri Award.

There is debate in a democracy. There is no room for debate in a dictatorship. It is just a one-sided “listen to what I have said”. He criticized the dictatorial attitude of saying “I will speak, you listen” like in “Mann Ki Baat”.

shimoga | Shivamogga: Giant python conservation! shimoga | ಶಿವಮೊಗ್ಗ : ಬೃಹದಾಕಾರದ ಹೆಬ್ಬಾವು ಸಂರಕ್ಷಣೆ! Previous post shimoga | ಶಿವಮೊಗ್ಗ : ಬೃಹದಾಕಾರದ ಹೆಬ್ಬಾವು ಸಂರಕ್ಷಣೆ!
shimoga APMC vegetable prices | Details of vegetable prices for November 09 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್ 12 ರ ತರಕಾರಿ ಬೆಲೆಗಳ ವಿವರ Next post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 1 ರ ತರಕಾರಿ ಬೆಲೆಗಳ ವಿವರ