
shimoga | ಶಿವಮೊಗ್ಗ : ಗ್ಯಾರೇಜ್ ನಲ್ಲಿ ಬೆಂಕಿ ಅವಘಡ – ಸುಟ್ಟು ಭಸ್ಮವಾದ ಕಾರುಗಳು!
ಶಿವಮೊಗ್ಗ (shivamogga), ಆಗಸ್ಟ್ 10: ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಆಟೋ ಕಾಂಪ್ಲೆಕ್ಸ್ ಸಂಕೀರ್ಣದ ಗ್ಯಾರೇಜ್ ವೊಂದರಲ್ಲಿ ಆಗಸ್ಟ್ 10 ರಂದು ಬೆಂಕಿ ಅವಘಢ ಸಂಭವಿಸಿದೆ.
ಮನು ಶಕ್ತಿ ಆಟೋ ವರ್ಕ್ಸ್ ನಲ್ಲಿ ಅವಘಡ ಸಂಭವಿಸಿದೆ. ಭಾನುವಾರ ಗ್ಯಾರೇಜ್ ಗೆ ರಜೆಯಿತ್ತು. ಸಂಜೆ 4. 30 ರ ಸಮಯದಲ್ಲಿ ಗ್ಯಾರೇಜ್ ಒಳಭಾಗದಿಂದ ದಟ್ಟ ಹೊಗೆ ಹೊರಬರಲಾರಂಭಿಸಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ತಂಡ, ಸುಮಾರು 1 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಸಫಲವಾಗಿದೆ.
ಘಟನೆಯಲ್ಲಿ ಇಕೋ ಸ್ಪೋರ್ಟ್ಸ್, ಇಂಡಿಗೋ, ಟಾಟಾ ಸುಮೋ, ಹೊಂಡಾ ಸಿಟಿ, ಡಸ್ಟರ್ ಕಾರು ಬೆಂಕಿಗಾಹುತಿಯಾಗಿವೆ. ಪ್ರಾಥಮಿಕ ಹಂತದ ಮಾಹಿತಿ ಅನುಸಾರ, ಸರಿಸುಮಾರು 47 ಲಕ್ಷ ರೂ. ಮೌಲ್ಯದ ಕಾರುಗಳು ಹಾಗೂ ಇತರೆ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಅಗ್ನಿ ಅವಘಡಕ್ಕೆ ಕಾರಣವೇನು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದ ಎ.ಎಫ್.ಎಸ್.ಟಿ.ಓ ಗಳಾದ ಮಕ್ದುಂ ಹುಸೇನ್, ಎಂ. ನೂರುಲ್ಲಾ, ಚಾಲಕ ಮಂಜುನಾಥ್, ಫೈರ್ ಮ್ಯಾನ್ ಗಳಾದ ರಾಜೀವ್, ಸಾಗರ್, ಸಂತೋಷ್, ಶಶಿಧರ್ ಅವರು ಭಾಗಿಯಾಗಿದ್ದರು.
Shimoga, August 10: On August 10, a fire broke out in a garage of the Auto Complex complex on Sagar Road in Shimoga city.