
shivamogga – bhadravathi urban development authority | ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಸಿದ್ದಪಡಿಸುತ್ತಿದೆ ‘ಮಹಾ ಯೋಜನೆ – 2041’!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅಕ್ಟೋಬರ್ 15: ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರವು, ಭವಿಷ್ಯದ ಸುವ್ಯವಸ್ಥಿತ ನಗರ ಬೆಳವಣಿಗೆ ಹಾಗೂ ಜನಸಂಖ್ಯೆಗೆ ಅನುಗುಣವಾಗಿ, ‘ಮಹಾ ಯೋಜನೆ – 2041’ ಸಿದ್ದಪಡಿಸಲಾರಂಭಿಸಿದೆ. ಸಮರೋಪಾದಿಯಲ್ಲಿ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸುತ್ತಿದೆ!
ಮಹಾ ಯೋಜನೆ ತಯಾರಿಸುವ ಜವಾಬ್ದಾರಿಯನ್ನು, ದೆಹಲಿ ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ ನೀಡಲಾಗಿದೆ. ಸದರಿ ಸಂಸ್ಥೆಯು ಕಳೆದ ಹಲವು ತಿಂಗಳುಗಳಿಂದ ಸಮಗ್ರ ವರದಿ ಸಿದ್ದಪಡಿಸುವ ಕಾರ್ಯ ನಡೆಸಲಾರಂಭಿಸಿದೆ.
ಸದ್ಯ ‘ಮಹಾ ಯೋಜನೆ – 2031’ ಅಸ್ತಿತ್ವದಲ್ಲಿದ್ದು, ಅದರ ಪ್ರಕಾರವೇ ಶಿವಮೊಗ್ಗ – ಭದ್ರಾವತಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬಡಾವಣೆ ಮತ್ತೀತರ ನಿರ್ಮಾಣ ಹಾಗೂ ಅಭಿವೃದ್ದಿ ಚಟುವಟಿಕೆಗಳಿಗೆ ಅನುಮತಿ ನೀಡಲಾಗುತ್ತಿದೆ.
‘ಮಹಾ ಯೋಜನೆ – 2041’ ಕಾರ್ಯಗತಗೊಂಡರೆ, ಹಳೇ ಯೋಜನೆ ಸ್ಥಗಿತಗೊಳ್ಳಲಿದೆ. ಮುಂದಿನ 2041 ರವರೆಗೆ ಹೊಸ ಯೋಜನೆಯಡಿ ಪ್ರಾಧಿಕಾರ ಬಡಾವಣೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಅನುಮತಿ ನೀಡುವ ಕೆಲಸ ಮಾಡಲಿದೆ.
ಏನೀದು ಮಹಾ ಯೋಜನೆ? : ಭವಿಷ್ಯದ ಜನಸಂಖ್ಯೆ, ಸುವ್ಯವಸ್ಥಿತ ನಗರ ನಿರ್ಮಾಣ ಹಾಗೂ ನಾಗರೀಕ ಸೌಲಭ್ಯಕ್ಕಾಗಿ ನಿರ್ದಿಷ್ಟ ಅವಧಿಯವರೆಗೆ ನಗರಾಭಿವೃದ್ದಿ ಪ್ರಾಧಿಕಾರಿಗಳು ಮಹಾ ಯೋಜನೆ ರೂಪಿಸುತ್ತವೆ. ಪ್ರಾಧಿಕಾರ ವ್ಯಾಪ್ತಿಯ ಪ್ರದೇಶಗಳಲ್ಲಿನ ಭೂಮಿಯನ್ನು ಮಹಾ ಯೋಜನೆಯಡಿ ಗುರುತಿಸಲಾದ ಉದ್ದೇಶಕ್ಕೆ ಬಳಕೆ ಮಾಡಬೇಕಾಗುತ್ತದೆ. ವಸತಿ ಬಡಾವಣೆ, ಕೈಗಾರಿಕಾ ವಲಯ, ವಾಣಿಜ್ಯ ವಲಯ, ಉದ್ಯಾನವನ ಮತ್ತೀತರ ಪ್ರದೇಶಗಳನ್ನು ಮಹಾ ಯೋಜನೆಯಡಿ ಗುರುತಿಸಲಾಗುತ್ತದೆ.
ಸದ್ಯ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಕೂಡ 2041 ರವರೆಗಿನ ನಗರದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ಮಹಾ ಯೋಜನೆ ಸಿದ್ದಪಡಿಸುವ ಕಾರ್ಯ ನಡೆಸುತ್ತಿದೆ.
ಹೊಸ ಪ್ರದೇಶವಿಲ್ಲ : ಪ್ರಸ್ತುತ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಒಟ್ಟಾರೆ ವ್ಯಾಪ್ತಿ 424 ಚದುರ ಕಿ.ಮೀ. ಇದೆ. ಮಹಾ ಯೋಜನೆ – 2041 ರಲ್ಲಿಯೂ ಅದೇ ವ್ಯಾಪ್ತಿ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ವ್ಯಾಪ್ತಿ ಪರಿಷ್ಕರಣೆ ಮಾಡುತ್ತಿಲ್ಲ.
ಈಗಿರುವ ವ್ಯಾಪ್ತಿಯ ಪ್ರದೇಶದಲ್ಲಿ ಸುವ್ಯವಸ್ಥಿತ ನಗರ ನಿರ್ಮಾಣದ ರೂಪುರೇಷೆ ಸಿದ್ದಪಡಿಸಲಾಗುತ್ತಿದೆ. ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್, ಆಯುಕ್ತರಾದ ವಿಶ್ವನಾಥ್ ಪಿ ಮುದಜ್ಜಿ, ಟಿಪಿಎಂ ಅಭಿಲಾಷ್ ರವರ ನೇತೃತ್ವದಲ್ಲಿ ಸದರಿ ಕಾರ್ಯ ನಡೆಯುತ್ತಿದೆ.
ಪ್ರಾಧಿಕಾರದ ಮೂಲಗಳ ಪ್ರಕಾರ, ಇನ್ನೂ ಕೆಲ ತಿಂಗಳುಗಳಲ್ಲಿಯೇ ಮಹಾ ಯೋಜನೆಯ ಕರಡು ಸಿದ್ದವಾಗಲಿದೆ. ಇದನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ತದನಂತರ ಅಂತಿಮ ವರದಿ ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಇದಕ್ಕೆ ಸರ್ಕಾರ ಅಂಗೀಕಾರ ನೀಡಿದ ನಂತರ ಮಹಾ ಯೋಜನೆ – 2041 ಕಾರ್ಯಗತಕ್ಕೆ ಬರಲಿದೆ.
ಪ್ರಾಧಿಕಾರದ ಆಯುಕ್ತರು ಹೇಳೋದೇನು?
*** ‘ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಮಹಾ ಯೋಜನೆ – 2041 ಕರಡು ಸಿದ್ದಪಡಿಸುವ ಕಾರ್ಯ ನಡೆಯುತ್ತಿದೆ. ಸದರಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಲಾಗುವುದು. ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗುವುದು. ಸಲಹೆ – ಸೂಚನೆಯ ನಂತರ ಅಂತಿಮ ವರದಿ ಸಿದ್ದಪಡಿಸಿ, ರಾಜ್ಯ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುವುದು’ ಎಂದು ಪ್ರಾಧಿಕಾರದ ಆಯುಕ್ತರಾದ ವಿಶ್ವನಾಥ್ ಪಿ ಮುದಜ್ಜಿ ಅವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.
Shivamogga, October 15: The Shivamogga-Bhadravati Urban Development Authority has started preparing the ‘Maha Yojana – 2041’ in line with the future well-planned urban growth and population. The work of collecting information is being carried out in a hurry!