ಶಿವಮೊಗ್ಗ, ಎ. 24: ಶಿವಮೊಗ್ಗ ನಗರದ ಹೊರವಲಯ ಕೇಂದ್ರ ಕಾರಾಗೃಹಕ್ಕೆ ಸೋಮವಾರ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದ ಪೊಲೀಸ್ ತಂಡವು, ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ ಘಟನೆ ನಡೆಯಿತು.
ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್, ಇನ್ಸ್’ಪೆಕ್ಟರ್ ಗಳಾದ ಮಂಜುನಾಥ್, ಅಂಜನ್ ಕುಮಾರ್, ಗಜೇಂದ್ರಪ್ಪ, ಜಯಶ್ರೀ ಮಾನೆ, ಸಂಜೀವ್ ಮಹಾಜನ್ ಹಾಗೂ 5 ಜನ ಸಬ್ ಇನ್ಸ್’ಪೆಕ್ಟರ್ ಸೇರಿದಂತೆ ಒಟ್ಟಾರೆ 50 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ತಪಾಸಣೆಯಲ್ಲಿ ಭಾಗಿಯಾಗಿದ್ದರು.
ಪೊಲೀಸರು ಪ್ರತಿಯೊಂದು ಬ್ಯಾರಕ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಪಾಸಣೆ ವೇಳೆ ಲಭ್ಯವಾದ ವಸ್ತುಗಳ ಬಗ್ಗೆ ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.
ಆರೋಪ: ಸೆಂಟ್ರಲ್ ಜೈಲ್ ನಲ್ಲಿದ್ದ ವಿಚಾರಣಾಧೀನ ಕೈದಿಯೋರ್ವರು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇವರ ಸಾವಿಗೆ ಕಾರಾಗೃಹದಲ್ಲಿನ ಕೆಲ ಕೈದಿಗಳು ನಡೆಸಿದ್ದ ಹಲ್ಲೆ ಕಾರಣವಾಗಿದೆ ಎಂದು ಮೃತನ ಕುಟುಂಬದವರು ಆರೋಪಿಸಿದ್ದರು.
ಕೇಂದ್ರ ಕಾರಾಗೃಹದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಆರೋಪಗಳು ಕೂಡ ಕೇಳಿಬಂದಿದ್ದವು. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿ ಶಾಕ್ ಮೂಡಿಸುವ ಕಾರ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

