shimoga news | ಶಿವಮೊಗ್ಗ ನಗರದಲ್ಲಿರುವ ಅತೀ ದೊಡ್ಡ ಕೆರೆ ಮರೆತ ಜಿಲ್ಲಾಡಳಿತ..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜನವರಿ 03: ಕೇಂದ್ರ ಸರ್ಕಾರದ ಅಮೃತ್ – 2.0 ಯೋಜನೆಯ ಜಲಮೂಲಗಳ ಪುನಶ್ಚೇತನ ಕಾರ್ಯಕ್ರಮದಡಿ, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ 4 ಕೆರೆಗಳನ್ನು 20.50 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತ ಕೈಗೆತ್ತಿಕೊಂಡಿದೆ. ಕಾಮಗಾರಿ ಅನುಷ್ಠಾನಕ್ಕೆ ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಆದರೆ ಪಾಲಿಕೆ 1 ನೇ ವಾರ್ಡ್ ವ್ಯಾಪ್ತಿಯ ಸೋಮಿನಕೊಪ್ಪದಲ್ಲಿರುವ, ಶಿವಮೊಗ್ಗ ತಾಲೂಕಿನಲ್ಲಿಯೇ ಅತೀ ದೊಡ್ಡ ಕೆರೆಯ ಪುನಶ್ಚೇತನ – ಅಭಿವೃದ್ದಿಯನ್ನೇ ಜಿಲ್ಲಾಡಳಿತದ ಮರೆತಂತೆ ಕಾಣುತ್ತಿದೆ…!
ಹೌದು. ಸೋಮಿನಕೊಪ್ಪ ಕೆರೆಯು ಸರಿಸುಮಾರು 95 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿದೆ. ಪ್ರಸ್ತುತ ವರ್ಷ ಕೂಡ ಕೆರೆಯ ನೀರಿನ ಸಂಗ್ರಹದ ಪ್ರಮಾಣ ಗರಿಷ್ಠ ಮಟ್ಟ ತಲುಪಿದೆ. ಆದರೆ ಸದರಿ ವಿಶಾಲವಾದ ಕೆರೆಯನ್ನು ಅಭಿವೃದ್ದಿಗೊಳಿಸಿ, ಪ್ರವಾಸಿ ತಾಣವಾಗಿ ಅಭಿವೃದ್ದಿಗೊಳಿಸುವ ಯೋಜನೆಗಳು ಸಂಪೂರ್ಣ ಮೂಲೆಗುಂಪಾಗಿದೆ. ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ.
ಸದ್ಯ ಕೆರೆಯ ಸುತ್ತಮುತ್ತಲು ಅವ್ಯವಸ್ಥೆ ಆವರಿಸಿದ್ದು, ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಕೆರೆಯ ಸಮೀಪ ಖಾಸಗಿ ಲೇಔಟ್ ನಿರ್ಮಾಣವಾಗುತ್ತಿವೆ. ಕೆಲವರು ಕೆರೆಗೆ ಘನತ್ಯಾಜ್ಯಗಳನ್ನು ತಂದು ಹಾಕುತ್ತಿದ್ದಾರೆ. ಕೆರೆ ಏರಿಯ ಮೇಲೆ ಗಿಡಗಂಟೆ ಬೆಳೆದುಕೊಂಡು ಅವ್ಯವಸ್ಥೆಯ ಆಗರವಾಗಿದೆ. ಲೇಔಟ್ ಗಳ ಚರಂಡಿ, ಕೊಳಚೆ ನೀರನ್ನು ನೇರವಾಗಿ ಕೆರೆಗೆ ಬಿಡಲಾಗುತ್ತಿದೆ ಎಂದು ಸ್ಥಳೀಯ ನಾಗರೀಕರು ದೂರುತ್ತಾರೆ.
ಅನುಷ್ಠಾನವಾಗದ ಯೋಜನೆ : ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿರುವ ಸೋಮಿನಕೊಪ್ಪ ಕೆರೆಯನ್ನು, ಈ ಹಿಂದೆ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಆಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ತನ್ನ ಬಳಿಯಿರುವ ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ, ಕೆರೆಯನ್ನು ಸರ್ವಾಂಗೀಣ ಅಭಿವೃದ್ದಿಗೊಳಿಸಿ ನಗರದ ಪ್ರವಾಸಿ ತಾಣವಾಗಿ ರೂಪಿಸುವುದಾಗಿ ಹೇಳಿಕೊಂಡಿತ್ತು.
ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ, ಏರಿಯ ಮೇಲೆ ವಾಕಿಂಗ್ ಪಾಥ್ ನಿರ್ಮಾಣ, ವಿದ್ಯುತ್ ದೀಪಗಳ ಅಳವಡಿಕೆ, ಕೆರೆ ಮಧ್ಯೆ ವ್ಯೂ ಪಾಯಿಂಟ್ ನಿರ್ಮಾಣ, ಮಕ್ಕಳ ಆಟದ ಸಾಮಗ್ರಿಗಳ ಅಳವಡಿಕೆ, ಆಸನಗಳ ವ್ಯವಸ್ಥೆ, ಕೆರೆ ಸುತ್ತಲೂ ಫೆನ್ಸಿಂಗ್ ಅಳವಡಿಕೆ ಸೇರಿದಂತೆ ಕೆರೆ ಸಂರಕ್ಷಣೆ ಹಾಗೂ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳುವುದಾಗಿ ಹೇಳಿತ್ತು.
ಈ ಸಂಬಂಧ ಸರಿಸುಮಾರು 10 ಕೋಟಿ ರೂ. ವೆಚ್ಚದಲ್ಲಿ ವಿಸ್ತೃತ ಯೋಜನೆ ಸಿದ್ದಪಡಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರದಿಂದಲೂ ಅನುಮತಿ ಪಡೆದುಕೊಂಡಿತ್ತು. ಆದರೆ ತದನಂತರ ಉಲ್ಟಾ ಹೊಡೆದಿದ್ದ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ, ಕೆರೆ ಅಭಿವೃದ್ದಿಗೊಳಿಸುವ ಯೋಜನೆಯಿಂದ ಹಿಂದೆ ಸರಿದಿತ್ತು. ಕೆಲ ಕೋಟಿ ರೂ. ವೆಚ್ಚದಲ್ಲಿ ಕೆಲ ಕಾಮಗಾರಿಗಳನ್ನು ನಡೆಸಿ ಕೈತೊಳೆದುಕೊಂಡಿತ್ತು. ಪ್ರಾಧಿಕಾರ ನಡೆಸಿದ ಕಾಮಗಾರಿಯೂ ಕಳಪೆಯಾಗಿದ್ದ ಆರೋಪಗಳು ಕೇಳಿಬಂದಿದ್ದವು.
ಇನ್ನಾದರೂ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವು, ಶಿವಮೊಗ್ಗ ತಾಲೂಕಿನಲ್ಲಿಯೇ ಅತೀ ದೊಡ್ಡ ಸೋಮಿನಕೊಪ್ಪ ಕೆರೆಯನ್ನು ಸರ್ವಾಂಗೀಣ ಅಭಿವೃದ್ದಿಗೊಳಿಸಬೇಕು. ಪ್ರವಾಸಿ ತಾಣವಾಗಿ ರೂಪಿಸಿ, ಸಂರಕ್ಷಣೆಗೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಗಮನಹರಿಸಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.
ನೀರು ಪಾಲಾದ ನಗರಾಭಿವೃದ್ದಿ ಪ್ರಾಧಿಕಾರದ ಕೆಲಸಗಳು..!
*** ಈ ಹಿಂದೆ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರವು ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಸೋಮಿನಕೊಪ್ಪ ಕೆರೆಯನ್ನು ಸರ್ವಾಂಗೀಣ ಅಭಿವೃದ್ದಿಗೊಳಿಸುವುದಾಗಿ ಹೇಳಿತ್ತು. ಈ ಕಾರಣದಿಂದ ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿದ್ದ ಕೆರೆಯನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ, ಏರಿಯ ಮೇಲೆ ವಾಕಿಂಗ್ ಪಾಥ್ ನಿರ್ಮಾಣ, ವಿದ್ಯುತ್ ದೀಪಗಳ ಅಳವಡಿಕೆ, ಕೆರೆ ಮಧ್ಯೆ ವ್ಯೂ ಪಾಯಿಂಟ್ ನಿರ್ಮಾಣ, ಮಕ್ಕಳ ಆಟದ ಸಾಮಗ್ರಿಗಳ ಅಳವಡಿಕೆ, ಆಸನಗಳ ವ್ಯವಸ್ಥೆ, ಕೆರೆ ಸುತ್ತಲೂ ಫೆನ್ಸಿಂಗ್ ಅಳವಡಿಕೆ ಸೇರಿದಂತೆ ಕೆರೆ ಸಂರಕ್ಷಣೆ ಹಾಗೂ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳುವುದಾಗಿ ಹೇಳಿತ್ತು. ನಂತರ 10 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ದಿ ಯೋಜನೆ ನಿರ್ಧಾರದಿಂದ ಪ್ರಾಧಿಕಾರ ಹಿಂದೆ ಸರಿದಿತ್ತು. ಕೆಲ ಕೋಟಿ ರೂ. ವೆಚ್ಚದಲ್ಲಿ ಸೋಮಿನಕೊಪ್ಪ ಕೆರೆಯ ಬಳಿ ಕೆಲ ಅಭಿವೃದ್ದಿ ಕಾಮಗಾರಿ ನಡೆಸಿ ಕೈ ತೊಳೆದುಕೊಂಡಿತ್ತು. ಸದ್ಯ ಪ್ರಾಧಿಕಾರ ನಡೆಸಿದ ಹಲವು ಕಾಮಗಾರಿಗಳು ಹೇಳ ಹೆಸರಿಲ್ಲದಂತೆ ನೀರು ಪಾಲಾಗಿವೆ ಎಂದು ಸ್ಥಳೀಯ ನಾಗರೀಕರು ಆರೋಪಿಸುತ್ತಾರೆ.
Under the Central Government’s AMRUT – 2.0 water resources revitalization program, the district administration has taken over 4 lakes under the jurisdiction of the Shivamogga Municipal Corporation at a cost of Rs. 20.50 crore. Preliminary preparations are being made for the implementation of the work. But the district administration seems to have forgotten the revival and development of the biggest lake in Shimoga taluk in Sominakoppa under the 1st ward of the corporation…!

One thought on “shimoga news | ಶಿವಮೊಗ್ಗ ನಗರದಲ್ಲಿರುವ ಅತೀ ದೊಡ್ಡ ಕೆರೆ ಮರೆತ ಜಿಲ್ಲಾಡಳಿತ..!”
Comments are closed.