ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜನವರಿ 16: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಏಳೆಂಟು ಗ್ರಾಮಗಳ 17 ಕ್ಕೂ ಅಧಿಕ ಕೆರೆಗಳಿಗೆ, ತುಂಗಾ ನದಿಯಿಂದ ನೀರು ಪೂರೈಸುವ ಹೊಳೆಹನಸವಾಡಿ ಏತ ನೀರಾವರಿ ಯೋಜನೆ ಕಾಮಗಾರಿ ಈಗಾಗಲೆ ಪೂರ್ಣಗೊಂಡಿದೆ. ಪೈಪ್ ಲೈನ್ ಮೂಲಕ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದೆ.
ಪ್ರಾಯೋಗಿಕವಾಗಿ ನೀರು ಹರಿಸುವ ವೇಳೆ ಕಂಡುಬರುತ್ತಿರುವ ಸಮಸ್ಯೆಗಳನ್ನು, ಸಣ್ಣ ನೀರಾವರಿ ಇಲಾಖೆ ಸಮರೋಪಾದಿಯಲ್ಲಿ ಪರಿಹರಿಸುತ್ತಿದೆ. ಮೊದಲ ಹಂತದ ನೀರು ಹರಿಸುವ ಪ್ರಕ್ರಿಯೆ ಬಹುತೇಕ ಯಶಸ್ವಿಯಾಗಿದೆ.
ಯೋಜನೆಯ ಉದ್ದೇಶದಂತೆ ಅಬ್ಬಲಗೆರೆ, ಹುಣಸೋಡು, ಕಲ್ಲುಗಂಗೂರು, ಕೊಮ್ಮನಾಳು, ಕುಂಚೇನಹಳ್ಳಿ, ಬಸವನಗಂಗೂರು, ತ್ಯಾಜವಳ್ಳಿ ಗ್ರಾಮದ ಸುಮಾರು 17 ಕ್ಕೂ ಅಧಿಕ ಕೆರೆಗಳಿಗೆ ಪೈಪ್ ಮೂಲಕ ಸರಾಗವಾಗಿ ನೀರು ಪೂರೈಕೆಯಾಗುತ್ತಿದೆ.
ಪ್ರಸ್ತುತ ಬೇಸಿಗೆ ಪ್ರಾರಂಭವಾಗಿರುವುದರಿಂದ ಕೆರೆಗಳಲ್ಲಿ ನೀರಿನ ಸಂಗ್ರಹದ ಪ್ರಮಾಣವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ಸಂದರ್ಭದಲ್ಲಿ ತುಂಗಾ ನದಿಯಿಂದ ನೀರು ಹರಿಸುತ್ತಿರುವುದು ವಿವಿಧ ಗ್ರಾಮಗಳ ಜನ-ಜಾನುವಾರು, ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿದೆ.
ಆದರೆ ಕೆಲ ಗ್ರಾಮಗಳ ಕೆರೆಗಳಲ್ಲಿ ನೀರಿಕ್ಷಿತ ಪ್ರಮಾಣದ ನೀರು ಸಂಗ್ರಹವಾಗಿಲ್ಲ. ತುಂಗಾ ನದಿಯಿಂದ ನೀರು ಪೂರೈಕೆಗೆ ವಿದ್ಯುತ್ ವ್ಯತ್ಯಯ ಅಡೆತಡೆಯಾಗಿ ಪರಿಣಮಿಸಿದೆ ಎಂಬ ಮಾಹಿತಿಗಳು ಕೇಳಿಬಂದಿವೆ. ಹೊಳೆ ಹನಸವಾಡಿ ತುಂಗಾ ನದಿ ತೀರದ ಬಳಿಯಿರುವ ನೀರು ಎತ್ತುವ ಕೇಂದ್ರಕ್ಕೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದಿರುವುದರಿಂದ, ಸುಗಮ ನೀರು ಪೂರೈಕೆ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ಹೇಳಲಾಗುತ್ತಿದೆ.
ಸದರಿ ಕೇಂದ್ರಕ್ಕೆ ಪ್ರತ್ಯೇಕ ಫೀಡರ್ ವ್ಯವಸ್ಥೆ ಮಾಡಲಾಗಿದೆ. ಕೆರೆಗಳಿಗೆ ನೀರು ಪೂರೈಕೆ ಅವಧಿಯ ವೇಳೆ, ದಿನದ 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯ ವ್ಯವಸ್ಥೆಯಾಗಬೇಕು. ಆದರೆ ಅನಿರ್ಬಂಧಿತ ವಿದ್ಯುತ್ ಪೂರೈಕೆಯಿಂದ ಕೆರೆಗಳಿಗೆ ನೀರು ಪೂರೈಕೆಗೆ ಅಡೆತಡೆಯಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಮೆಸ್ಕಾಂ ಸಂಸ್ಥೆ ಗಮನಹರಿಸಬೇಕಾಗಿದೆ. ಪ್ರಸ್ತುತ ಬೇಸಿಗೆ ವೇಳೆ ಕೆರೆಗಳಲ್ಲಿ ನೀರಿನ ಸಂಗ್ರಹ ಅಗತ್ಯವಾಗಿದ್ದು, ಹೊಳೆಹನಸವಾಡಿ ನೀರು ಲಿಫ್ಟ್ ಮಾಡುವ ಕೇಂದ್ರಕ್ಕೆ ಸಮರ್ಪಕ ವಿದ್ಯುತ ಪೂರೈಕೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಗಮನಹರಿಸಿ, ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಾಗಿದೆ.
ನೀರು ಹರಿಸಲು ಕ್ರಮ : ಬಸವನಗಂಗೂರು ಕೆರೆಗೆ ಕಳೆದ ಹಲವು ದಿನಗಳಿಂದ ತುಂಗಾ ನದಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಇದರಿಂದ ಕೆರೆಯಲ್ಲಿ ನೀರಿನ ಸಂಗ್ರಹದ ಪ್ರಮಾಣ ಸಂಪೂರ್ಣ ಇಳಿಕೆಯಾಗುವಂತಾಗಿತ್ತು. ಈ ಕುರಿತಂತೆ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಪುರುಷೋತ್ತಮ್ ಅವರಿಗೆ ಸ್ಥಳೀಯ ಗ್ರಾಮಸ್ಥರು ಅಹವಾಲು ತೋಡಿಕೊಂಡಿದ್ದರು.
ಇದಕ್ಕೆ ಸ್ಪಂದಿಸಿದ ಪುರುಷೋತ್ತಮ್ ಅವರು, ಜನವರಿ 16 ರಂದು ಇಲಾಖೆ ಎಂಜಿನಿಯರ್ ಶಿವಲಿಂಗಯ್ಯ ಹಾಗೂ ಗುತ್ತಿಗೆದಾರರ ಪ್ರತಿನಿಧಿ ಮೂರ್ತಿ ಅವರನ್ನು ಬಸವನಗಂಗೂರು ಕೆರೆಗೆ ಕಳುಹಿಸಿ, ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ಶುಕ್ರವಾರದಿಂದ ಬಸವನಗಂಗೂರು ಕೆರೆಗೆ ಉತ್ತಮ ನೀರು ಪೂರೈಕೆಯಾಗುತ್ತಿದೆ.
ನೀರು ಪೂರೈಕೆ ಅವಧಿ ಹೆಚ್ಚಳಕ್ಕೆ ಮನವಿ
** ಪ್ರಸ್ತುತ ಬೇಸಿಗೆ ಪ್ರಾರಂಭದ ಸಮಯವಾಗಿರುವುದರಿಂದ, ಕೆರೆಗಳಿಗೆ ನೀರು ಪೂರೈಕೆ ಮಾಡುತ್ತಿರುವ ಅವಧಿ ಹೆಚ್ಚಳ ಮಾಡಬೇಕೆಂದು ಸಣ್ಣ ನೀರಾವರಿ ಇಲಾಖೆ ಎಇಇ ಪುರುಷೋತ್ತಮ್, ಎಂಜಿನಿಯರ್ ಶಿವಲಿಂಗಯ್ಯ ಹಾಗೂ ಗುತ್ತಿಗೆದಾರ ಪ್ರತಿನಿಧಿ ಮೂರ್ತಿ ಅವರಿಗೆ ಪತ್ರಕರ್ತ ಬಿ ರೇಣುಕೇಶ್ ನೇತೃತ್ವದ ನಿಯೋಗ ಮನವಿ ಮಾಡಿದೆ. ದಿನದ 24 ಗಂಟೆಯ ಕಾಲ ಕೆರೆಗಳಿಗೆ ನೀರು ಪೂರೈಕೆ ಮಾಡಿ, ಬೇಸಿಗೆ ವೇಳೆ ಕೆರೆಗಳಲ್ಲಿ ಜಲ ಸಂಗ್ರಹವಿರುವ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಆದ್ಯ ಗಮನಹರಿಸುವಂತೆ ನಿಯೋಗ ಸಲಹೆ ನೀಡಿದೆ. ಇದಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಕಾರಾತ್ಮಕ ಸ್ಪಂದನೆ ವ್ಯಕ್ತಪಡಿಸಿದ್ದಾರೆ.
Power cuts hinder Tunga river water supply to lakes in rural Shivamogga! | Report by B. Renukesh | Shivamogga, January 16: The Holenhanasavadi lift irrigation project, which supplies water from the Tunga river to more than 17 lakes across seven to eight villages in the Shivamogga Rural Assembly constituency, has already been completed. Water is being experimentally released through pipelines. During these trial runs, certain problems have been observed, but the Minor Irrigation Department is actively working to resolve them. The first phase of water release has been largely successful.

