shimoga news | ಶಿವಮೊಗ್ಗ : ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ – ಸದ್ದಿಲ್ಲದೆ ಜಾರಿಯಾಗಿದೆಯೇ ಅನಿಯಮಿತ ಲೋಡ್ ಶೆಡ್ಡಿಂಗ್?

#powercut #ವಿದ್ಯುತ್_ವ್ಯತ್ಯಯ #ವಿದ್ಯುತ್ #ಮೆಸ್ಕಾಂ #mescom

ವರದಿ : ಬಿ. ರೇಣುಕೇಶ್

ಶಿವಮೊಗ್ಗ, ಏಪ್ರಿಲ್ 21: ಶಿವಮೊಗ್ಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದೆ. ಬಿರು ಬಿಸಿಲಿಗೆ ನಾಗರಿಕರು ಹೈರಾಣಾಗುತ್ತಿದ್ದಾರೆ. ಈ ನಡುವೆ ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಾರಂಭಿಸಿದೆ. ಸದ್ದಿಲ್ಲದೆ ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ ಎಂಬ ದೂರುಗಳು ಗ್ರಾಮಸ್ಥರಿಂದ ಕೇಳಿಬರಲಾರಂಭಿಸಿದೆ.

ಇತ್ತೀಚೆಗೆ ಹಗಲು ವೇಳೆ ಬೇಕಾಬಿಟ್ಟಿಯಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರಿಂದ ತೋಟ, ಗದ್ದೆಗಳಿಗೆ ಪಂಪ್ ಸೆಟ್ ಮೂಲಕ ನೀರು ಪೂರೈಕೆ ದುಸ್ತರವಾಗಿ ಪರಿಣಮಿಸಿದೆ. ಸಮರ್ಪಕ ನೀರು ಪೂರೈಕೆ ಸಾಧ್ಯವಾಗದೆ, ಬಿಸಿಲಿಗೆ ಬೆಳೆಗಳು ಒಣಗುವಂತಾಗಿದೆ. ರಾತ್ರಿಯಿಡಿ ನಿದ್ರೆಗೆಟ್ಟು ತೋಟ – ಗದ್ದೆಗಳಿಗೆ ನೀರು ಪೂರೈಕೆ ಮಾಡುವಂತಹ ಸ್ಥಿತಿಯಿದೆ ಎಂದು ಕೆಲ ಗ್ರಾಮಸ್ಥರು ಆರೋಪಿಸುತ್ತಾರೆ.  

ಕೃಷಿ ಪಂಪ್ ಸೆಟ್ ಗಳಿಗೆ ಪ್ರತಿದಿನ ನಾಲ್ಕೈದು ಗಂಟೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಯಾವಾಗ ವಿದ್ಯುತ್ ಪೂರೈಕೆಯಾಗುತ್ತದೆ ಎಂಬುವುದರ ಮಾಹಿತಿಯೂ ಇರುವುದಿಲ್ಲ. ವಿದ್ಯುತ್ ಪೂರೈಕೆಯ ವೇಳಾಪಟ್ಟಿ ಪ್ರಕಟಿಸಿದರೆ ಸಾಕಷ್ಟು ಅನುಕೂಲವಾಗಲಿದೆ ಎಂದು ಕೆಲ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದ ಕುಡಿಯುವ ನೀರು ಪೂರೈಕೆ ಸೇರಿದಂತೆ ದೈನಂದಿನ ಕೆಲಸಕಾರ್ಯಗಳ ಮೇಲೆ ಪರಿಣಾಮ ಬೀರುವಂತಾಗಿದೆ. ಒಂದೆಡೆ ಸುಡು ಬಿಸಿಲು, ಮತ್ತೊಂದೆಡೆ ವಿದ್ಯುತ್ ವ್ಯತ್ಯಯದಿಂದ ತೀವ್ರ ತೊಂದೆರೆ ಎದುರಿಸುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿಯೂ ಇತ್ತೀಚೆಗೆ ಆಗಾಗ್ಗೆ ವಿದ್ಯುತ್ ಕಡಿತ ಪ್ರಮಾಣ ಹೆಚ್ಚಾಗುತ್ತಿರುವ ಮಾಹಿತಿಗಳು ನಾಗರಿಕ ವಲಯದಿಂದ ಕೇಳಿಬರುತ್ತಿವೆ. ಆದರೆ ಇಷ್ಟೆಲ್ಲದರ ಹೊರತಾಗಿಯೂ ಮೆಸ್ಕಾಂ ಮೂಲಗಳು ಮಾತ್ರ, ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಕೆಲವೊಮ್ಮೆ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುತ್ತದೆ ಎಂದು ಹೇಳುತ್ತವೆ.

ಹೆಚ್ಚಿದ ಬೇಡಿಕೆ : ಪ್ರಸ್ತುತ ಬೇಸಿಗೆ ವೇಳೆ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಿದೆ. ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆ ಮಾಡುವುದು ಇಂಧನ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಈ ಕಾರಣದಿಂದ  ರಾಜ್ಯದ ಹಲವೆಡೆ ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ ಎಂಬ ಮಾಹಿತಿಗಳು ಕೇಳಿಬರಲಾರಂಭಿಸಿದೆ.

ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲಿನ ಬೇಗೆ ನಿರಂತರವಾಗಿ ಏರಿಕೆಯಾಗುತ್ತಿದೆ. ಈ ನಡುವೆ ಹಲವೆಡೆ ವಿದ್ಯುತ್ ಕಣ್ಣಾಮುಚ್ಚಾಲೆಯೂ ಆರಂಭವಾಗಿರುವುದು ನಾಗರಿಕರನ್ನು ಹೈರಾಣಾಗುವಂತೆ ಮಾಡುತ್ತಿರುವುದಂತೂ ಸತ್ಯವಾಗಿದೆ.

Shivamogga, April 21: The heat is increasing day by day in Shivamogga district. Citizens are suffering from the scorching heat. Meanwhile, electricity supply has started to fluctuate in many villages of Shivamogga taluk. Complaints have started being heard from villagers that irregular electricity load shedding is being done silently.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *