ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಆಗಸ್ಟ್ 02: ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಕಳೆದೆರೆಡು ದಿನಗಳಿಂದ ಬೀಳುತ್ತಿರುವ ನಿರಂತರ ಮಳೆಯಿಂದ ಭದ್ರಾ ಹಾಗೂ ತುಂಗಾ ಜಲಾಶಯಗಳ ಒಳಹರಿವಿನಲ್ಲಿ ನಿರಂತರ ಏರಿಕೆ ಕಂಡುಬರಲಾರಂಭಿಸಿದೆ.
ಆಗಸ್ಟ್ 02 ರ ಬೆಳಿಗ್ಗೆ 6 ಗಂಟೆ ಮಾಹಿತಿಯಂತೆ ಭದ್ರಾ ಡ್ಯಾಂ ಒಳಹರಿವು 31,874 ಕ್ಯೂಸೆಕ್ ಗೆ ಏರಿಕೆಯಾಗಿದೆ. 185 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ 160 ಅಡಿ 3 ಇಂಚು (ಗರಿಷ್ಠ ಮಟ್ಟ : 186) ಇದೆ.
ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 180 ಅಡಿ 5 ಇಂಚು ಇತ್ತು. ಮಳೆ ಕೊರತೆಯಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ಸರಿಸುಮಾರು 20 ಅಡಿಯಷ್ಟು ಕಡಿಮೆ ನೀರು ಸಂಗ್ರಹವಾಗಿದೆ.
ಉಳಿದಂತೆ ತುಂಗಾ ಜಲಾಶಯವು ಕಳೆದ ಹಲವು ವಾರಗಳ ಹಿಂದೆಯೇ ಗರಿಷ್ಠ ಮಟ್ಟ ತಲುಪಿದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ, ಡ್ಯಾಂನ ಒಳಹರಿವಿನಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ.
ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ಒಳಹರಿವಿನಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ. ಈ ಕಾರಣದಿಂದ ಪ್ರಸ್ತುತ 82,762 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಡ್ಯಾಂ ವ್ಯಾಪ್ತಿಯ ಮೂಲಗಳು ಮಾಹಿತಿ ನೀಡಿವೆ.
ಪ್ರವಾಹ ಭೀತಿ : ತುಂಗಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರ ಬಿಟ್ಟಿರುವ ಕಾರಣದಿಂದ ತುಂಗಾ ನದಿ ಉಕ್ಕಿ ಹರಿಯಲಾರಂಭಿಸಿದೆ. ನದಿಪಾತ್ರದ ಹಲವು ಪ್ರದೇಶಗಳಲ್ಲಿ ಅಪಾಯದಂಚಿನಲ್ಲಿ ಹರಿಯುತ್ತಿದ್ದು, ಹಲವೆಡೆ ಪ್ರವಾಹ ಭೀತಿ ಸೃಷ್ಟಿಯಾಗುವಂತೆ ಮಾಡಿದೆ.
ಶಿವಮೊಗ್ಗ ನಗರದಲ್ಲಿಯೂ ತುಂಗಾ ನದಿ ಪ್ರವಾಹ ಭೀತಿ ಸೃಷ್ಟಿಸಿದೆ. ಈಗಾಗಲೇ ಡ್ಯಾಂನಿಂದ 80 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹೊರಬಿಡುತ್ತಿರುವ ಕಾರಣದಿಂದ, ಪ್ರವಾಹದ ಮಟ್ಟ ತೋರ್ಪಡಿಸುವ ಕೋರ್ಪಳಯ್ಯನ ಛತ್ರದ ಸಮೀಪದ ನದಿಯಲ್ಲಿರುವ ಮಂಟಪವು ಮುಳುಗಿದೆ. ಅದರ ಮೇಲೆ ಮೂರ್ನಾಲ್ಕು ಅಡಿಯಷ್ಟು ನೀರು ಹರಿಯುತ್ತಿದೆ.
ಮಾಣಿಯಲ್ಲಿ 286 ಮಿ.ಮೀ. ಮಳೆ!
*** ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಆಗಸ್ಟ್ 02 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ 286 ಮಿಲಿ ಮೀಟರ್ (ಮಿ.ಮೀ.), ಯಡೂರು 280 ಮಿ.ಮೀ., ಹುಲಿಕಲ್ 280 ಮಿ.ಮೀ., ಮಾಸ್ತಿಕಟ್ಟೆ 270 ಮಿ.ಮೀ., ಚಕ್ರಾ 320 ಮಿ.ಮೀ., ಸಾವೇಹಕ್ಲು234 ಮಿ.ಮೀ. ಮಳೆಯಾಗಿದೆ.
ಶಿವಮೊಗ್ಗದಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ : ಆಯುಕ್ತ ಮಾಯಣ್ಣಗೌಡ
*** ತುಂಗಾ ಜಲಾಶಯದಿಂದ ಸದ್ಯ 82 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿರುವುದರಿಂದ, ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಆದರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಸದ್ಯಕ್ಕಿಲ್ಲ. ತುಂಗಾ ಡ್ಯಾಂನಿಂದ ಹೊರ ಬಿಡುವ ನೀರಿನ ಪ್ರಮಾಣ 1 ಲಕ್ಷ ಕ್ಯೂಸೆಕ್ ಗಿಂತ ಹೆಚ್ಚಾದರೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ. ಈಗಾಗಲೇ ಪರಿಸ್ಥಿತಿಯ ಅವಲೋಕನ ನಡೆಸಲಾಗುತ್ತಿದೆ. ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ಆಗಸ್ಟ್ 02 ರಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
Shivamogga, August 02: Due to continuous rainfall over the past two days in the catchment area, there has been a steady rise in the inflow of both the Bhadra and Tunga reservoirs.

