madhu bangarappa news | ಮಧು ಬಂಗಾರಪ್ಪಗೆ ಮತ್ತೆ ಒಲಿದ ಮಂತ್ರಿ ಯೋಗ!

Minister Madhu Bangarappa
ವರದಿ : ಬಿ ರೇಣುಕೇಶ್

ಶಿವಮೊಗ್ಗ (shivamogga), ಆಗಸ್ಟ್ 03: ಸಿಎಂ ಡಿ ಕೆ ಶಿವಕುಮಾರ್ ಸಚಿವ ಸಂಪುಟದಲ್ಲಿಯೂ ಮಂತ್ರಿಯಾಗುವ ಅವಕಾಶ ಪಡೆಯುವ ಮೂಲಕ, ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಪ್ರಕಟಿಸಿರುವ ನೂತನ ಸಚಿವರ ಪಟ್ಟಿಯಲ್ಲಿ, ಶಿವಮೊಗ್ಗ ಜಿಲ್ಲೆಯ ಕೋಟಾದಡಿ ಮಧು ಬಂಗಾರಪ್ಪಗೆ ಅವಕಾಶ ಲಭ್ಯವಾಗಿದೆ. ಅಂತೂ ಇಂತೂ ಕೊನೆಗೂ ಸಚಿವ ಸ್ಥಾನ ಗಳಿಸುವಲ್ಲಿ ಮಧು ಸಫಲರಾಗಿದ್ದಾರೆ.

ಮಂತ್ರಿ ಯೋಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಕೋಟಾದಿ ಮಧು ಬಂಗಾರಪ್ಪ ಮಂತ್ರಿಯಾಗಿದ್ದರು. ಶಿಕ್ಷಣ ಖಾತೆಯ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ್ದರು.

ಈ ನಡುವೆ ಡಿ ಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ, ಮಧು ಬಂಗಾರಪ್ಪಗೆ ಸಚಿವ ಸ್ಥಾನ ಲಭಿಸುವುದು ಅನುಮಾನವೆಂಬ ಮಾತುಗಳು ವ್ಯಕ್ತವಾಗಿದ್ದವು. ಭದ್ರಾವತಿ ಕ್ಷೇತ್ರದ ಶಾಸಕ ಬಿ ಕೆ ಸಂಗಮೇಶ್ವರ ಅಥವಾ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣಗೆ ಅವಕಾಶ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿತ್ತು.

ಅದರಲ್ಲಿಯೂ ಬೇಳೂರು ಗೋಪಾಲಕೃಷ್ಣರವರು ಸಚಿವ ಸ್ಥಾನಕ್ಕೆ ಸಾಕಷ್ಟು ಲಾಬಿ ನಡೆಸಿದ್ದ ಮಾಹಿತಿಗಳಿದ್ದವು. ಮತ್ತೊಂದೆಡೆ, ರಾಜ್ಯ ನಾಯಕರು ಕೂಡ ಶಿವಮೊಗ್ಗ ಕೋಟಾದಡಿ ಮಧುಗೆ ಬದಲಾಗಿ ಸಂಗಮೇಶ್ವರ ಅಥವಾ ಬೇಳೂರಿಗೆ ಅವಕಾಶ ಕಲ್ಪಿಸುವ ಗಂಭೀರ ಚಿಂತನೆ ನಡೆಸಿದ್ದರು.

ಕೈ ಹಿಡಿದ ರಾಷ್ಟ್ರ ನಾಯಕರು : ಈ ನಡುವೆ ಮತ್ತೊಮ್ಮೆ ಸಚಿವ ಸ್ಥಾನದಲ್ಲಿ ಮುಂದುವರಿಯಲು ಮಧು ಬಂಗಾರಪ್ಪ ಅವರು ಸದ್ದುಗದ್ದಲವಿಲ್ಲದೆ ಪಕ್ಷದ ರಾಷ್ಟ್ರ ನಾಯಕರ ಹಂತದಲ್ಲಿ ಲಾಬಿ ನಡೆಸುತ್ತಿದ್ದ ಮಾಹಿತಿಗಳು ಸ್ಥಳೀಯ ಕಾಂಗ್ರೆಸ್ ಪಾಳೇಯದಿಂದ ಕೇಳಿಬಂದಿದ್ದವು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು ಮಧು ಪರವಾಗಿ ದೆಹಲಿ ವರಿಷ್ಠರ ಬಳಿ ಬ್ಯಾಟಿಂಗ್ ನಡೆಸಿದ್ದರು. ರಾಷ್ಟ್ರ ನಾಯಕರ ಕೃಪಾಶೀರ್ವಾದದಿಂದ ಮಧುಗೆ ಡಿ ಕೆ ಶಿವಕುಮಾರ್ ಆಡಳಿತಾವಧಿಯಲ್ಲಿಯೂ ಮಂತ್ರಿಯಾಗುವ ಯೋಗ ಲಭಿಸುವಂತಾಗಿದೆ ಎಂದು ಹೇಳಲಾಗುತ್ತಿದೆ.

ನಿರಾಸೆ : ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆಯೂ ಸಚಿವ ಸ್ಥಾನಕ್ಕೆ ಬೇಳೂರು ಗೋಪಾಲಕೃಷ್ಣ ತೀವ್ರ ತೀವ್ರ ಲಾಬಿ ನಡೆಸಿದ್ದರು. ಆದರೆ ಅವಕಾಶ ಲಭ್ಯವಾಗಿರಲಿಲ್ಲ. ಡಿ ಕೆ ಶಿವಕುಮಾರ್ ಅವಧಿಯಲ್ಲಿ ಶತಾಯಗತಾಯ ಮಂತ್ರಿ ಹುದ್ದೆಗೇರಲು ಕಸರತ್ತು ನಡೆಸಿದ್ದರು. ದೆಹಲಿಗೂ ತೆರಳಿ ಪಕ್ಷದ ನಾಯಕರ ಜೊತೆ ಚರ್ಚಿಸಿದ್ದರು.

ಇಷ್ಟೆಲ್ಲದರ ಹೊರತಾಗಿಯೂ ಬೇಳೂರಿಗೆ ಮಂತ್ರಿ ಗದ್ದುಗೆ ಲಭಿಸಿಲ್ಲ. ಇದು ಅವರ ಬೆಂಬಲಿಗರಲ್ಲಿ ತೀವ್ರ ನಿರಾಸೆ ಉಂಟು ಮಾಡಿದೆ. ಹಾಗೆಯೇ ಬಿ ಕೆ ಸಂಗಮೇಶ್ವರ್ ಅವರಿಗೂ ಕೂಡ ನಿರಾಸೆಯಾಗಿದೆ.

ಪುನಾರಾಯ್ಕೆ ಸಂತೋಷ ತಂದಿದೆ : ಮಧು ಬಂಗಾರಪ್ಪ

*** ಮತ್ತೊಮ್ಮೆ ಮಂತ್ರಿಯಾಗಲು ಅವಕಾಶ ಲಭ್ಯವಾಗಿರುವುದು ತಮಗೆ ಅತೀವ ಸಂತೋಷ ಉಂಟು ಮಾಡಿದೆ ಎಂದು ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಮ್ಮ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿರುವ ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಧನ್ಯವಾದ ಅರ್ಪಿಸುತ್ತೆನೆ. ಅತ್ಯಂತ ಪರಿಣಾಮಕಾರಿಯಾಗಿ ಜವಾಬ್ದಾರಿ ನಿರ್ವಹಣೆ ಮಾಡುತ್ತೆನೆ ಎಂದು ತಿಳಿಸಿದ್ದಾರೆ.

Shimoga, August 03: By securing a ministerial position in Chief Minister D.K. Shivakumar’s cabinet, Sorab MLA Madhu Bangarappa has once again achieved prominence.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *