shimoga news | ಶಿವಮೊಗ್ಗ : ಕೊನೆಗೂ ಬೂದಿಗೆರೆ ಗ್ರಾಮದ ಕೆರೆಗೆ ಹರಿದ ತುಂಗಭದ್ರಾ ನದಿ ನೀರು!

Shivamogga, August 20: Finally, at long last, water from the Tungabhadra River has begun flowing into the lake at Boodigere village in Shivamogga taluk. A long-cherished dream has come true, and the surrounding villagers are overjoyed. This development is expected to bring relief for agriculture, drinking water, and the local environment.

ವರದಿ : ಬಿ. ರೇಣುಕೇಶ್

ಶಿವಮೊಗ್ಗ (shivamogga), ಆಗಸ್ಟ್ 20: ಅಂತೂ ಇಂತೂ ಕೊನೆಗೂ ಶಿವಮೊಗ್ಗ ತಾಲೂಕಿನ ಬೂದಿಗೆರೆ ಗ್ರಾಮದ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಯಲಾರಂಭಿಸಿದೆ. ಕಳೆದ ಹಲವು ವರ್ಷಗಳ ಕನಸು ನನಸಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಸಂತಸಗೊಂಡಿದ್ದಾರೆ.

ಬೂದಿಗೆರೆ ಗ್ರಾಮದ ಕೆರೆಗೆ ನೀರು ಹರಿಸಲು ಸಣ್ಣ ನೀರಾವರಿ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿತ್ತು. ಸಮರೋಪಾದಿ ಕ್ರಮಕೈಗೊಂಡಿತ್ತು. ಆದರೆ ನೀರು ಲಿಫ್ಟ್ ಮಾಡುವ ಜಾಕ್’ವೆಲ್ ಗೆ ಮೆಸ್ಕಾಂ ಸಂಸ್ಥೆಯು, ವಿದ್ಯುತ್ ಸಂಪರ್ಕ ಕಲ್ಪಿಸಿರಲಿಲ್ಲ.ಇದರಿಂದ ಕಳೆದ ಹಲವು ತಿಂಗಳುಗಳಿಂದ ಬೂದಿಗೆರೆ ಗ್ರಾಮದ ಕೆರೆಗೆ ನೀರು ಹರಿಸಲು ಸಾಧ್ಯವಾಗಿರಲಿಲ್ಲ.

ಇದರಿಂದ ಆಕ್ರೋಶಗೊಂಡ ಸ್ಥಳೀಯ ಗ್ರಾಮಸ್ಥರು ಕಳೆದೆರೆಡು ದಿನಗಳ ಹಿಂದೆ ಶಿವಮೊಗ್ಗ ನಗರದ ಮೆಸ್ಕಾಂ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ವಿದ್ಯುತ್ ಸಂಪರ್ಕ ಕಲ್ಪಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದಿದ್ದರು.

ಮತ್ತೊಂದೆಡೆ, ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯನಾಯ್ಕ್ ಅವರು ಕೂಡ ಮೆಸ್ಕಾಂ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ತತ್’ಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ತಾಕೀತು ಮಾಡಿದ್ದರು.

ಇದರಿಂದ ಎಚ್ಚೆತ್ತುಕೊಂಡ ಮೆಸ್ಕಾಂ ಸಂಸ್ಥೆಯು, ವಿದ್ಯುತ್ ಸಂಪರ್ಕ ಕಲ್ಪಿಸಿತ್ತು. ಇದರಿಂದ ಬೂದಿಗೆರೆ ಗ್ರಾಮದ ಕೆರೆಗೆ ತುಂಗಭದ್ರಾ ನದಿ ನೀರು ಹರಿಯಲಾರಂಭಿಸಿದೆ. ಗ್ರಾಮಸ್ಥರ ಹಲವು ವರ್ಷಗಳ ಕನಸು ನನಸಾಗುವಂತಾಗಿದೆ.

ಏನೀದು ಯೋಜನೆ? : ಹೊಳಲೂರು ಸಮೀಪ ಹಾದು ಹೋಗಿರುವ ತುಂಗಭದ್ರಾ ನದಿಯಿಂದ ಹೊಳಲೂರು, ಹರಮಘಟ್ಟ, ಬೂದಿಗೆರೆ ಸುತ್ತಮುತ್ತಲಿನ ಕೆರೆಗಳಿಗೆ ನೀರು ಹರಿಸುವ ಏತ ನೀರಾವರಿ ಯೋಜನೆ ಸಿದ್ದಪಡಿಸಲಾಗಿತ್ತು. ಆದರೆ ಸಮರ್ಪಕವಾಗಿ ಯೋಜನೆ ಅನುಷ್ಠಾನವಾಗಿರಲಿಲ್ಲ. ಸಾಕಷ್ಟು ಲೋಪದೋಷಗಳು ಕಂಡುಬಂದಿದ್ದವು.

ಈ ನಡುವೆ ಯೋಜನೆಯ ಮರು ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿತ್ತು. ಅದರಂತೆ ಮೊದಲ ಹಂತದಲ್ಲಿ ತುಂಗಭದ್ರಾ ನದಿಯಿಂದ ಹರಮಘಟ್ಟ ಕೆರೆಗೆ ನೀರು ಹರಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಬೂದಿಗೆರೆ ಗ್ರಾಮದ ಕೆರೆಗೆ ಹರಿಸಬೇಕಾಗಿತ್ತು.

ಇದಕ್ಕಾಗಿ ಹರಮಘಟ್ಟ ಕೆರೆ ಬಳಿ ಜಾಕ್’ವೆಲ್ ನಿರ್ಮಿಸಲಾಗಿತ್ತು. ಆದರೆ ಇದಕ್ಕೆ ಕೆಲ ತಾಂತ್ರಿಕ ಕಾರಣಗಳ ನೆಪವೊಡ್ಡಿ ಮೆಸ್ಕಾಂ ಸಂಸ್ಥೆಯು ವಿದ್ಯುತ್ ಸಂಪರ್ಕ ಕಲ್ಪಿಸಿರಲಿಲ್ಲ. ಈ ಕಾರಣದಿಂದ ತುಂಗಭದ್ರಾ ನದಿಯಲ್ಲಿ ನೀರು ಹರಿಯುತ್ತಿದ್ದರೂ, ಬೂದಿಗೆರೆ ಕೆರೆಗೆ ನೀರು ಲಭ್ಯವಾಗದಂತಾಗಿತ್ತು.

ಮೆಚ್ಚುಗೆ : ಬೂದಿಗೆರೆ ಗ್ರಾಮದ ಕೆರೆಗೆ ನೀರು ಹರಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪುರುಷೋತ್ತಮ್ ಅವರು ಶ್ರಮಮೀರಿ ಪ್ರಯತ್ನ ನಡೆಸಿದ್ದಾರೆ. ಅವರ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಯೋಜನೆ ಸಫಲವಾಗುವಂತಾಗಿದೆ ಎಂದು ಕೆಲ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಒಟ್ಟಾರೆ ಪ್ರಸ್ತುತ ಮುಂಗಾರ ಮಳೆಯ ಕೊರತೆ ಎದುರಾಗಿದೆ. ಈ ನಡುವೆ ತುಂಗಾ ಹಾಗೂ ತುಂಗಭದ್ರಾ ನದಿಗಳಿಂದ ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳ ಕೆರೆಗಳಿಗೆ ನೀರು ಪೂರೈಕೆಯಾಗುತ್ತಿರುವುದು, ಜನ – ಜಾನುವಾರುಗಳಿಗೆ ಸಾಕಷ್ಟು ಅನುಕೂಲವಾಗುವಂತಾಗಿದೆ.

ಶಾಸಕಿ ಶಾರದ ಪೂರ್ಯನಾಯ್ಕ್ ಹೇಳಿದ್ದೇನು?

Tunga River water for lakes in Shivamogga rural constituency : MLA sharada puryanaik happy ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ತುಂಗಾ ನದಿ ನೀರು : ಶಾಸಕಿ ಶಾರದಾ ಪೂರ್ಯನಾಯ್ಕ್ ಸಂತಸ

*** ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮತ್ತಷ್ಟು ಗ್ರಾಮಗಳ ಕೆರೆಗಳಿಗೆ ತುಂಗಾ ನದಿಯಿಂದ ನೀರು ಹರಿಸುವ ಯೋಜನೆಯಿದ್ದು, ಇದರ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕರಾದ ಶಾರದಾ ಪೂರ್ಯನಾಯ್ಕ್ ಅವರು ತಿಳಿಸಿದ್ದಾರೆ. ಆಗಸ್ಟ್ 20 ರಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸದ್ಯ ತುಂಗಾ ಹಾಗೂ ತುಂಗಭದ್ರಾ ಏತ ನೀರಾವರಿ ಯೋಜನೆಗಳಿಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹಲವು ಕೆರೆಗಳಿಗೆ ನೀರು ಹರಿಯುತ್ತಿದೆ. ಇದೀಗ ಬೂದಿಗೆರೆ ಗ್ರಾಮದ ಕೆರೆಗೆ ತುಂಗಭದ್ರಾ ನದಿ ನೀರು ಹರಿಯಲಾರಂಭಿಸಿದೆ. ಇದು ಸಂತಸದ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ಏತ ನೀರಾವರಿ ಯೋಜನೆಗಳಡಿ ಕೊನೆಯ ಹಂತದ ಗ್ರಾಮಗಳ ಕೆರೆಗಳಿಗೂ ಸಮಪರ್ಕ ನೀರು ಪೂರೈಕೆಯಾಗುವಂತಾಗಬೇಕು. ಇದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟಿದ್ದಾರೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *