
court judgement news | ಬೆಳಗಾವಿ : 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವನಿಗೆ ಗಲ್ಲು ಶಿಕ್ಷೆ!
ಬೆಳಗಾವಿ (belagavi), ಸೆ. 28: ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ವ್ಯಕ್ತಿಯೋರ್ವನಿಗೆ, ಮರಣ ದಂಡನೆ ಶಿಕ್ಷೆ ವಿಧಿಸಿ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಎಫ್‌ಟಿಎಸ್‌ಸಿ-1) ನ್ಯಾಯಾಲಯ ಸೆ. 27 ರಂದು ತೀರ್ಪು ನೀಡಿದೆ.
ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಗ್ರಾಮವೊಂದರ 39 ವರ್ಷದ ವ್ಯಕ್ತಿಯೇ ಗಲ್ಲು ಶಿಕ್ಷೆಗೆ ಗುರಿಯಾದನು (ಪೋಕ್ಸೋ ಕಾಯ್ದೆಯಡಿ ವ್ಯಕ್ತಿಯ ಯಾವುದೇ ವಿವರ ಬಹಿರಂಗಪಡಿಸುವಂತಿಲ್ಲ).
ಮರಣ ದಂಡನೆ ಶಿಕ್ಷೆಯ ಜೊತೆಗೆ 45 ಸಾವಿರ ರೂ. ದಂಡ ಕೂಡ ವಿಧಿಸಲಾಗಿದೆ. ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಬಾಲಕಿ ಪೋಷಕರಿಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.
ಕೊಲೆ ಮಾಡಿದ್ದ ಕಾಮುಕ : 21/09/2017 ರಂದು ಮನೆಯ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿಯನ್ನು ಅಪಹರಣ ಮಾಡಲಾಗಿತ್ತು. ಬಾಲಕಿಯ ಶವವು ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿತ್ತು.
ಬಾಲಕಿ ಮೇಲೆ ಅತ್ಯಾಚಾರ ಎಸಗಿದ ನಂತರ ಕೊಲೆ ಮಾಡಿ, ಮೈಮೇಲೆ ಮಣ್ಣು ಮುಚ್ಚಿದ್ದು ಕಂಡುಬಂದಿತ್ತು. ಈ ಘಟನೆಯು ಬೆಳಗಾವಿ ಜಿಲ್ಲೆಯನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಸ್ತುತ ಶಿಕ್ಷೆಗೊಳಗಾದ ವ್ಯಕ್ತಿಯನ್ನು ಬಂಧಿಸಿದ್ದರು. ನಂತರ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.
Belagavi : A person who raped and murdered a three-year-old girl was sentenced to death by the Belgaum Additional District and Sessions Court (FTSC-1) Judgment was given on sep – 27th.