tunnel road at agumbe ghat | ಆಗುಂಬೆ ಘಾಟ್ ನಲ್ಲಿ ಸುರಂಗ ಮಾರ್ಗ ನಿರ್ಮಾಣ : ಬಿ.ವೈ.ರಾಘವೇಂದ್ರ ಹೇಳಿದ್ದೇನು?
ಶಿವಮೊಗ್ಗ (shivamogga), ಸೆ. 28: ಮಲ್ಪೆ – ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ-169 ಎ ಚತುಷ್ಪಥ ಯೋಜನೆಯಲ್ಲಿ, ಆಗುಂಬೆ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣದ ಕಾರ್ಯ ಸಾಧ್ಯತೆಯ ಕುರಿತಂತೆ ವರದಿ ಸಲ್ಲಿಸಲು, ಕೇಂದ್ರ ಭೂ ಸಾರಿಗೆ ಸಚಿವಾಲಯದ ಡೈರೆಕ್ಟರ್ ಜನರಲ್ ಧರ್ಮೇಂದ್ರ ಸಾರಂಗಿ ಅವರು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ (mp b y raghavendra) ತಿಳಿಸಿದ್ದಾರೆ.
ಈ ಕುರಿತಂತೆ ಅವರು ಸೆ. 28 ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಧರ್ಮೇಂದ್ರ ಸಾರಂಗಿ ಅವರು, ಸೆ. 27 ರಂದು ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ (shimoga district national highways) ಪರಿಶೀಲನೆಗೆ ಆಗಮಿಸಿದ್ದರು. ಈ ವೇಳೆ ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಅವರನ್ನು ಭೇಟಿಯಾಗಿ ಚರ್ಚಿಸಲಾಯಿತು’ ಎಂದು ಸಂಸದರು ತಿಳಿಸಿದ್ದಾರೆ.
ಆಗುಂಬೆ ಘಾಟ್ ರಸ್ತೆಗೆ ಪರ್ಯಾಯವಾಗಿ, ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 4 ಪಥದ ಸುರಂಗ ಮಾರ್ಗದ ರಸ್ತೆ ನಿರ್ಮಾಣ ಮಾಡಲು ಡಿಪಿಆರ್ ಸಿದ್ದಪಡಿಸಲು ಅನುಮತಿ ನೀಡಲಾಗಿದೆ. ಈ ಸಂಬಂಧ ಯೋಜನೆ ಅನುಷ್ಠಾನದ ಸಾಧ್ಯಾಸಾಧ್ಯತೆಗಳ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಸಂಸದರು ಹೇಳಿದ್ದಾರೆ.
ಚರ್ಚೆ : ಸಿಗಂದೂರು ಸೇತುವೆ (sigandur bridge), ಶಿವಮೊಗ್ಗ – ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ (shimoga – chitradurga highway), ಸಾಗರ ನಗರದಲ್ಲಿ ಚತುಷ್ಪಥ ರಸ್ತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಕುರಿತಂತೆ ಚರ್ಚೆ ನಡೆಸಲಾಯಿತು.
ಹಾಗೆಯೇ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ, ಶಿವಮೊಗ್ಗ – ಆನಂದಪುರ ನಡುವೆ ನಾಲ್ಕು ಪಥದ ರಸ್ತೆ ನಿರ್ಮಾಣ, ನೆಲ್ಲಿಸರದಿಂದ ತೀರ್ಥಹಳ್ಳಿವರೆಗಿನ ಚತುಷ್ಪಥ ಮಾರ್ಗ, ಬೈಂದೂರು – ನಾಗೋಡಿವರೆಗಿನ ದ್ವಿಪಥ ಮಾರ್ಗ, ಹೊಸೂರು ಹಾಗೂ ತಾಳಗುಪ್ಪ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳ ಬಗ್ಗೆ ಭೂ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು ಎಂದು ಸಂಸದರು ತಿಳಿಸಿದ್ಧಾರೆ.
ಹಾಗೆಯೇ 2024 – 25 ನೇ ಸಾಲಿಗೆ ಮಂಜೂರಾದ ಆಗುಂಬೆ ರಸ್ತೆ, ಆನಂದಪುರದಿಂದ ತಾಳಗುಪ್ಪದವರೆಗಿನ ರಸ್ತೆ, ಸಾಗರದಿಂದ ಮರಕುಟುಕದವರೆಗಿನ ರಸ್ತೆ ಹಾಗೂ ಬೈಂದೂರಿನಿಂದ ರಾಣೆಬೆನ್ನೂರು ನಡುವೆ ಬಾಕಿ ಉಳಿದಿರುವ ರಸ್ತೆ ಕಾಮಗಾರಿಗೆ ಕಾಲಮಿತಿಯೊಳಗೆ ಡಿಪಿಆರ್ ಗಳಿಗೆ ಮಂಜೂರಾತಿ ಪಡೆಯುವಂತೆ ಭೂ ಸಾರಿಗೆ ಅಧಿಕಾರಿಯು ಹೆದ್ಧಾರಿ ಇಲಾಖೆ ಆಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.
ಈ ವೇಳೆ ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಕೇಂದ್ರ ಭೂ ಸಾರಿಗೆ ಸಚಿವಾಲಯದ ಪ್ರಾದೇಶಿಕ ಅಧಿಕಾರಿ ನರೇಂದ್ರ ಶರ್ಮಾ, ರಾಷ್ಟ್ರೀಯ ಹೆದ್ದಾರಿ ಅಧೀಕ್ಷಕ ಎಂಜಿನಿಯರ್ ರಾಜೇಶ್, ಕಾರ್ಯಪಾಲಕ ಎಂಜಿನಿಯರ್ ದಿವಾಕರ್ ಸೇರಿದಂತೆ ಮೊದಲಾಧವರಿದ್ದರು.
