
bjp news | ಬಿ ವೈ ವಿಜಯೇಂದ್ರ ವಿರೋಧಿ ಬಣದಲ್ಲಿ ಕುಮಾರ್ ಬಂಗಾರಪ್ಪ : ಸೊರಬದಲ್ಲಿ ಮತ್ತೆ ಕಾವೇರಿದ ಬಿಜೆಪಿ ಪಾಲಿಟಿಕ್ಸ್!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ನ. 29: ರಾಜ್ಯ ಬಿಜೆಪಿಯಲ್ಲಿ ಬಣ ರಾಜಕಾರಣ ಬಿರುಸುಗೊಂಡಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ದ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ, ಕೆಲ ಬಿಜೆಪಿ ನಾಯಕರ ತಂಡ ಬಂಡಾಯದ ಬಾವುಟ ಹಾರಿಸಿದೆ. ಸದರಿ ತಂಡದಲ್ಲಿ, ಶಿವಮೊಗ್ಗ ಜಿಲ್ಲೆ ಸೊರಬ ಕ್ಷೇತ್ರದ ಮಾಜಿ ಶಾಸಕರಾದ ಕುಮಾರ್ ಬಂಗಾರಪ್ಪ ಅವರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ!
ಕುಮಾರ್ ಬಂಗಾರಪ್ಪ ಅವರ ಭಿನ್ನ ನಡೆಯು, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತವರೂರು ಶಿವಮೊಗ್ಗ ಜಿಲ್ಲೆಯ ಬಿಜೆಪಿ ಪಾಳೇಯದಲ್ಲಿ ಬಿಸಿ ಬಿಸಿ ಚರ್ಚೆಗೆಡೆ ಮಾಡಿಕೊಟ್ಟಿದೆ. ಅದರಲ್ಲಿಯೂ ಸೊರಬ ಬಿಜೆಪಿ (soraba bjp) ರಾಜಕಾರಣ ಮತ್ತೆ ಕಾವೇರುವಂತೆ ಮಾಡಿದೆ.
ಇದಕ್ಕೆ ಸಾಕ್ಷಿ ಎಂಬಂತೆ, ಕುಮಾರ್ ಬಂಗಾರಪ್ಪ ಬೆಂಬಲಿಗರಾದ ಸೊರಬ ತಾಲೂಕು ಬಿಜೆಪಿಯ ಐವರು ಮುಖಂಡರನ್ನು ನ. 29 ರಂದು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಪಕ್ಷದ ಜಿಲ್ಲಾಧ್ಯಕ್ಷರು ಉಚ್ಚಾಟಿಸಿದ್ದಾರೆ.
ಕಾವು : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರಿಗೆ ಬಿಜೆಪಿ ಟಿಕೆಟ್ ನೀಡುವುದಕ್ಕೆ, ಸೊರಬ ತಾಲೂಕಿನ ಕೆಲ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರತ್ಯೇಕ ನಮೋ ವೇದಿಕೆ ರಚಿಸಿಕೊಂಡು ಭಿನ್ನಮತದ ಕಹಳೆ ಮೊಳಗಿಸಿದ್ದರು.
ಚುನಾವಣೆಯಲ್ಲಿ ಕುಮಾರ್ ಪರಾಭವಗೊಂಡಿದ್ದರು. ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಅವರ ಸಹೋದರ ಮಧು ಬಂಗಾರಪ್ಪ ಭರ್ಜರಿ ಜಯ ಸಂಪಾದಿಸಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ, ಕುಮಾರ್ ಬಂಗಾರಪ್ಪ ಅವರು ಬಿ ವೈ ವಿಜಯೇಂದ್ರ ವಿರುದ್ಧವೇ ಸೆಡ್ಡು ಹೊಡೆದಿದ್ದಾರೆ!
ಇದಕ್ಕೆ ಕೌಂಟರ್ ಎಂಬಂತೆ, ಕುಮಾರ್ ವಿರುದ್ದ ಈ ಹಿಂದೆ ಬಂಡೆದಿದ್ದ ಸೊರಬ ತಾಲೂಕಿನ ನಾಯಕರಿಗೆ ಬಿಜೆಪಿ ಮತ್ತೆ ಮಣೆ ಹಾಕಲಾರಂಭಿಸಿತ್ತು. ಕುಮಾರ್ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೇ ಮುಂದಿಟ್ಟುಕೊಂಡು, ಕುಮಾರ್ ಬಣದಲ್ಲಿನ ಐವರು ನಾಯಕರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಈ ಮೂಲಕ ಕುಮಾರ್ ಗೆ ಪರೋಕ್ಷ ಸಂದೇಶ ರವಾನಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಎಲ್ಲ ಬೆಳವಣಿಗೆಗಳಿಂದ ಸೊರಬ ಬಿಜೆಪಿ ಪಾಲಿಟಿಕ್ಸ್ ಕುತೂಹಲ ಮೂಡಿಸಿದೆ. ಕುಮಾರ್ ಬಂಗಾರಪ್ಪ ಬಣ ಯಾವ ನಿರ್ಧಾರ ಕೈಗೊಳ್ಳಲಿದೆ? ಎಂಬುವುದನ್ನು ಇನ್ನಷ್ಟೆ ಕಾದ ನೋಡಬೇಕಾಗಿದೆ.
Faction politics is raging in the state BJP. A group of BJP leaders, led by Basanagowda Patil Yatnal, raised the flag of rebellion against party state president BY Vijayendra. In the said team, Kumar Bangarappa, the former MLA of Shimoga district Soraba Constituency, has appeared in the forefront!