
shimoga | ಮಹಿಳೆಯ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಮೂವರಿಗೆ ಜೀವಾವಧಿ ಶಿಕ್ಷೆ!
ಶಿವಮೊಗ್ಗ (shivamogga), ಫೆ. 24: ಮಹಿಳೆಯ ಕುತ್ತಿಗೆ ಕೊಯ್ದು ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರಿಗೆ, ಶಿವಮೊಗ್ಗದ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಫೆ. 24 ರಂದು ತೀರ್ಪು ನೀಡಿದೆ.
ಸಾಗರ ಪಟ್ಟಣದ ನಿವಾಸಿಗಳಾದ ಅರುಣ ಯಾನೆ ಗೆಂಡೆ ಅರುಣ್ (27), ಅಭಿಜಿತ್ (28) ಹಾಗೂ ಇರ್ಫಾನ್ (20) ಜೀವಾವಧಿ ಶಿಕ್ಷೆಗೊಳಗಾದವರು ಎಂದು ಗುರುತಿಸಲಾಗಿದೆ. ಮೂವರಿಗೆ ತಲಾ 10,000 ರೂ. ದಂಡ ವಿಧಿಸಲಾಗಿದೆ.
ನ್ಯಾಯಾಧೀಶರಾದ ಪ್ರಭಾವತಿ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಅಣ್ಣಪ್ಪ ನಾಯಕ್ ಜಿ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : 12-08-2020 ರಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ, ಸಿರವಂತೆ ಗ್ರಾಮದ ನಿವಾಸಿಯಾದ 44 ವರ್ಷದ ಮಹಿಳೆಯೋರ್ವರನ್ನು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿತ್ತು. ಅವರ ಬಳಿಯಿದ್ದ ಬಂಗಾರದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.
ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 276/2020 ಐಪಿಸಿ ಕಲಂ 302 ರೀತ್ಯಾ ಪ್ರಕರಣ ದಾಖಲಾಗಿತ್ತು. ಅಂದಿನ ಸರ್ಕಲ್ ಇನ್ಸ್ ಪೆಕ್ಟರ್’ಸುನೀಲ್ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ಮೂವರನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.
ನ್ಯಾಯಾಲಯದ ತೀರ್ಪಿನ ಕುರಿತಂತೆ ಫೆ. 24 ರಂದು ಜಿಲ್ಲಾ ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
Shimoga, Feb 24: The 5 th Additional District and Sessions Court of Shimoga gave life imprisonment and fine on 24 th February to the three who killed a woman by slitting her throat and fled after stealing gold jewellery.
Background of the case: On 12-08-2020, a 44 year old woman, a resident of Siravante village under Sagar Rural Police Station, was murdered by slitting her neck with a knife. They stole the gold ornaments from her and fled.