Shimoga | Shivamogga: Four check posts vigilance team to prevent areca nut tax fraud! shimoga | ಶಿವಮೊಗ್ಗ : ಅಡಿಕೆ ತೆರಿಗೆ ವಂಚನೆ ತಡೆಗೆ ನಾಲ್ಕು ಚೆಕ್ ಪೋಸ್ಟ್, ವಿಚಕ್ಷಣಾ ದಳ!

shimoga | ಶಿವಮೊಗ್ಗ : ಅಡಿಕೆ ತೆರಿಗೆ ವಂಚನೆ ತಡೆಗೆ ನಾಲ್ಕು ಚೆಕ್ ಪೋಸ್ಟ್, ವಿಚಕ್ಷಣಾ ದಳ!

ಶಿವಮೊಗ್ಗ (shivamogga), ಮಾ. 19: ಎಪಿಎಂಸಿಗಳಲ್ಲಿ ಅಡಕೆ ನೇರ ಖರೀದಿಗೆ ಕಡಿವಾಣ ಹಾಕಲಿದ್ದು, ಖಾಸಗಿಯವರಿಗೆ ಲೈಸೆನ್ಸ್ ನೀಡುವುದಿಲ್ಲ. ಕ್ಯಾಂಪ್ಕೋಸ್, ಮ್ಯಾಮ್ಕೋಸ್ನಂತಹ ಸಹಕಾರಿ ಸಂಘಗಳಿಗೆ ಉತ್ತೇಜನ ನೀಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ನಡೆದ ಶಿವಮೊಗ್ಗ ಜಿಲ್ಲೆಯ ಅಡಕೆ ಬೆಳೆಗಾರರಿಗೆ ಹಾಗೂ ಅಡಕೆ ಮಾರಾಟ ಸಹಕಾರ ಸಂಘಗಳಿಗೆ ಸಂಬಂಧಿಸಿದ ವಿಷಯ ಕುರಿತು ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ಸಹಕಾರ ಸಂಘಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಸಚಿವರು, ಅಡಕೆ ಅಕ್ರಮ ವಹಿವಾಟಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಿವಮೊಗ್ಗ ಎಪಿಎಂಸಿಯಲ್ಲಿ ನೇರ ಖರೀದಿ ಮೂಲಕ ಸಂಗ್ರಹವಾಗಿರುವ ಸೆಸ್ ಹಾಗೂ ಸಹಕಾರ ಸಂಘಗಳ ಮೂಲಕ ನಡೆದ ವಹಿವಾಟಿನಿಂದ ಸಂಗ್ರಹವಾಗಿರುವ ಸೆಸ್ ಪ್ರಮಾಣದ ಬಗ್ಗೆ ವಾರದಲ್ಲಿ ವರದಿ ಕೊಡಿ ಎಂದು ಕೃಷಿ ಮಾರುಕಟ್ಟೆ ನಿರ್ದೇಶಕ ಶಿವಾನಂದ ಕಾಪ್ಸೆ ಅವರಿಗೆ ನಿರ್ದೇಶನ ನೀಡಿದರು.

ಖಾಸಗಿ ವರ್ತಕರಲ್ಲಿ ಕೆಲವರು ತೆರಿಗೆ ವಂಚನೆ ಮಾಡುವುದನ್ನು ನಿಯಂತ್ರಿಸಲು ವಿಚಕ್ಷಣ ದಳ ರಚನೆ ಮಾಡಲಾಗಿದ್ದು, ನಾಲ್ಕು ಚೆಕ್ ಪೋಸ್ಟ್ ಗಳನ್ನು ರಚನೆ ಮಾಡಲಾಗುವುದು ಎಂದು ಹೇಳಿದರು.

ಸಹಕಾರ ಸಂಘಗಳಿಗೆ ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದ್ದು, ಅಗತ್ಯ ಸಹಕಾರ ನೀಡಲಾಗುವುದು. ಲಾಭ ಮಾಡುವುದು ಎಪಿಎಂಸಿ ಉದ್ದೇಶವಲ್ಲ. ಆಯಾ ಎಪಿಎಂಸಿಗಳಿಂದ ಬರುವ ಆದಾಯವನ್ನು ಸ್ಥಳೀಯವಾಗಿ ಅಭಿವೃದ್ಧಿಗೆ ವಿನಿಯೋಗ ಮಾಡುವುದು ಸರ್ಕಾರದ ಉದ್ದೇಶ. ಎಪಿಎಂಸಿಗಳು ಆರ್ಥಿಕವಾಗಿ ಸದೃಢವಾದರೆ ರೈತರಿಗೆ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಅಡಕೆ ದಾಸ್ತಾನು ಮಾಡುವ ಗೋದಾಮುಗಳ ಬಾಡಿಗೆಯನ್ನು ಈಗಾಗಲೇ ಪ್ರತಿಶತ 40ರಷ್ಟು ಕಡಿಮೆ ಮಾಡಲಾಗಿದೆ. ಶಿವಮೊಗ್ಗ ಎಪಿಎಂಸಿಗೆ ಮಾಹಿತಿ ಇಲ್ಲದಿದ್ದರೆ ಇಲ್ಲಿನ ಅಧಿಕಾರಿಗಳ ಮೂಲಕ ನಿರ್ದೇಶನ ನೀಡಿ ಕಡಿಮೆ ಮಾಡಿರುವ ಬಾಡಿಗೆಯನ್ನು ಆಕರ ಮಾಡಲು ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.

ರಾಜ್ಯದ ಹಲವು ಎಪಿಎಂಸಿಗಳಲ್ಲಿ ಗೋದಾಮುಗಳು ಖಾಲಿ ಇವೆ. ನಬಾರ್ಡ್ ನೆರವು ಸಿಕ್ಕಿದೆ ಎಂದು ಹಿಂದೆ ಗೋದಾಮುಗಳನ್ನು ನಿರ್ಮಿಸಿರುವುದರಿಂದ ಉಪಯೋಗವಾಗುತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಗೋದಾಮುಗಳಿಗೆ ಬೇಡಿಕೆ ಇದ್ದು, ಅಗತ್ಯ ಜಾಗವನ್ನು ಇಲಾಖೆಯಿಂದಲೇ ಖರೀದಿಸಿ ಗೋದಾಮು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಖಾಸಗಿ ಎಪಿಎಂಸಿಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಉತ್ತೇಜಿಸುವುದಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನಾಲ್ಕು ಖಾಸಗಿ ಎಪಿಎಂಸಿಗಳಿಗೆ ಪರವಾನಗಿ ನೀಡಲಾಗಿದೆ. ಈ ಖಾಸಗಿ ಎಪಿಎಂಸಿಗಳನ್ನು ಮುಚ್ಚಬೇಕು ಎಂಬ ಬೇಡಿಕೆ ಕೂಡಾ ಇದೆ ಎಂದು ಗಮನಕ್ಕೆ ತಂದರು.

ರಾಜ್ಯದ ಹಲವು ಎಪಿಎಂಸಿಗಳಲ್ಲಿ ಕೃಷಿಯೇತರ ವಹಿವಾಟು ನಡೆಯುತ್ತಿರುವುದು ಗಮನದಲ್ಲಿದೆ. ಕಿರಾಣಿ ಅಂಗಡಿಗಳು, ಸಿಮೆಂಟ್, ಸ್ಟೀಲ್ ವಿತರಕರು, ಪ್ಲಾಸ್ಟಿಕ್ವ್ಯಾಪಾರಿಗಳೂ ಇದ್ದಾರೆ. ಹಲವು ಕಡೆ ವಾಸದ ಮನೆಗಳನ್ನೂ ನಿರ್ಮಿಸಲಾಗಿದೆ. ಎಪಿಎಂಸಿಗಳು ಸಂಪೂರ್ಣವಾಗಿ ಕೃಷಿ ವಹಿವಾಟಿಗೆ ಸೀಮಿತವಾಗಿರಬೇಕು ಎಂಬುದು ಸರ್ಕಾರದ ಆಶಯವಾಗಿದ್ದು, ಕೃಷಿಯೇತರ ವಹಿವಾಟನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬಹುಮಹಡಿ ಕಟ್ಟಡಗಳ ಮೇಲೆ ಹೊಸದಾಗಿ ಶುಲ್ಕ ನಿಗದಿಪಡಿಸಲಾಗಿದ್ದು, ಸಹಕಾರಿ ಸಂಘಗಳಿಗೆ ರಿಯಾಯಿತಿ ನೀಡಬೇಕು ಎಂಬ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಸಚಿವರು ಹೇಳಿದರು.

ಸೌಹಾರ್ದ ಸಹಕಾರಿ ಸಂಘಗಳಿಗೆ ಎಪಿಎಂಸಿ ಸೆಸ್ನಲ್ಲಿ ರಿಯಾಯಿತಿ ನೀಡಬೇಕು ಎಂಬ ಬೇಡಿಕೆ ಸಾಧುವಲ್ಲ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.

ಶಾಸಕರಾದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಡಿ.ಜಿ. ಶಾಂತನಗೌಡ,  ಕೃಷಿ ಮಾರುಕಟ್ಟೆ ನಿರ್ದೇಶನ ಶಿವಾನಂದ ಕಾಪ್ಸೆ, ಹೆಚ್ಚವರಿ ನಿರ್ದೇಶಕರಾದ ನಾಗೇಶ್ (ಯೋಜನೆ), ನಜೀಬುಲ್ಲಾ ಖಾನ್ (ಆಡಳಿತ), ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್, ಸುಬ್ರಹ್ಮಣ್ಯ ವೈ.ಎಸ್., ಕೆ.ವಿ. ಸೂರ್ಯನಾರಾಯಣ, ಕೆ.ಬಿ. ಕೃಷ್ಣಮೂರ್ತಿ, ಎನ್.ಕೆ. ನಾಗೇಂದ್ರ, ಎಚ್.ಬಿ. ರಮಾಕಾಂತ ಮತ್ತಿತರ ಸಹಕಾರಿಗಳು ಉಪಸ್ಥಿತರಿದ್ದರು.

Shivamogga, Mar 19: Agricultural Marketing Minister Shivanand Patil has assured that direct purchase of arecanut in APMCs will be curbed and licenses will not be issued to private operators. Cooperative societies like Campcos and Mamcos will be encouraged.

Speaking at a meeting of leaders of cooperative societies led by MLA araga jnanendra on issues related to the arecanut growers and arecanut sales cooperative societies in Shivamogga district held at the Vidhana Soudha in Bengaluru on Wednesday, the minister said that strict action will be taken to curb the illegal trade of arecanut.

Shivamogga: Sudden visit – Deputy Lokayukta leaves officials in shock! shimoga | ಶಿವಮೊಗ್ಗ : ದಿಢೀರ್ ಭೇಟಿ – ಅಧಿಕಾರಿಗಳ ಮೈಚಳಿ ಬಿಡಿಸಿದ ಉಪ ಲೋಕಾಯುಕ್ತರು! Previous post shimoga | ಶಿವಮೊಗ್ಗ : ದಿಢೀರ್ ಭೇಟಿ – ಅಧಿಕಾರಿಗಳ ಮೈಚಳಿ ಬಿಡಿಸಿದ ಉಪ ಲೋಕಾಯುಕ್ತರು!
Shimoga | Ward allocation of Shimoga Municipal Corporation zonal offices: JDS objects – appeal to DC! shimoga | ಶಿವಮೊಗ್ಗ ಪಾಲಿಕೆ ವಲಯ ಕಚೇರಿಗಳ ವಾರ್ಡ್ ಹಂಚಿಕೆ : ಜೆಡಿಎಸ್ ಆಕ್ಷೇಪ – ಡಿಸಿಗೆ ಮನವಿ! Next post shimoga | ಶಿವಮೊಗ್ಗ ಪಾಲಿಕೆ ವಲಯ ಕಚೇರಿಗಳ ವಾರ್ಡ್ ಹಂಚಿಕೆ : ಜೆಡಿಎಸ್ ಆಕ್ಷೇಪ – ಡಿಸಿಗೆ ಮನವಿ!