
shimoga | ಶಿವಮೊಗ್ಗ : ದಿಢೀರ್ ಭೇಟಿ – ಅಧಿಕಾರಿಗಳ ಮೈಚಳಿ ಬಿಡಿಸಿದ ಉಪ ಲೋಕಾಯುಕ್ತರು!
ಶಿವಮೊಗ್ಗ (shivamogga), ಮಾ. 19: ಶಿವಮೊಗ್ಗ ನಗರದಲ್ಲಿ ಮಾರ್ಚ್ 19 ರ ಬೆಳ್ಳಂಬೆಳಿಗ್ಗೆ ಉಪ ಲೋಕಾಯುಕ್ತ ನ್ಯಾಯಾಧೀಶರಾದ ಕೆ ಎನ್ ಫಣೀಂದ್ರ ಅವರು, ವಿವಿಧೆಡೆ ದಿಢೀರ್ ಭೇಟಿಯಿತ್ತು ಪರಿಶೀಲಿಸಿದರು. ಈ ವೇಳೆ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ದ ಗರಂ ಆದರು. ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದರು!
ಮೊದಲಿಗೆ ಮಹಾತ್ಮ ಗಾಂಧಿ ಉದ್ಯಾನವನಕ್ಕೆ ಭೇಟಿಯಿತ್ತರು. ಅಲ್ಲಿನ ಅವ್ಯವಸ್ಥೆ ಕಂಡು ಗರಂ ಆದರು. ಜೊತೆಗೆ ವಾಯು ವಿಹಾರಕ್ಕೆ ಆಗಮಿಸಿದ್ದ ನಾಗರೀಕರು ಕೂಡ ಹಲವು ಸಮಸ್ಯೆಗಳನ್ನು ಉಪ ಲೋಕಾಯುಕ್ತರ ಮುಂದಿಟ್ಟರು. ಕಾಲಮಿತಿಯೊಳಗೆ ಪಾರ್ಕ್ ನ ಅವ್ಯವಸ್ಥೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ಪಾರ್ಕ್ ನಲ್ಲಿ ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಸೇರಿದಂಥೆ ಅಗತ್ಯ ಮೂಲಸೌಕರ್ಯಗಳನ್ನು 20 ದಿವಸದೊಳಗೆ ಕಲ್ಪಿಸಬೇಕು. ಗಿಡಗಳಿಗೆ ಸಮರ್ಪಕ ನೀರು ಪೊರೈಕೆ ಮಾಡಬೇಕು. ಪ್ರತಿ 15 ದಿವಸಕ್ಕೊಮ್ಮೆ ಲೋಕಾಯುಕ್ತ ಡಿವೈಎಸ್ಪಿ ಭೇಟಿಯಿತ್ತು ವೀಕ್ಷಣೆ ಮಾಡಲಿದ್ದಾರೆ ಎಂದು ಉಪ ಲೋಕಾಯುಕ್ತರು ತಿಳಿಸಿದ್ದಾರೆ.
ಪಾಲಿಕೆ ಕಮೀಷನರ್ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ವಿರುದ್ದ ಕೇಸ್ ದಾಖಲಿಸಲಾಗುವುದು. ಪಾರ್ಕ್ ನ ಸಮಸ್ಯೆಗಳು ಪರಿಹಾರವಾದ ಬಳಿಕ ಪ್ರಕರಣ ಹಿಂಪಡೆಯಲಾಗುವುದು. ಇಲ್ಲವಾದಲ್ಲಿ ವರ್ಷವಾದರೂ ಕೇಸ್ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಂತರ ಬಿ ಹೆಚ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿಯಿತ್ತು ವೀಕ್ಷಣೆ ಮಾಡಿದರು. ಗ್ರಾಹಕರ ಸಂಖ್ಯೆ ಕಡಿಮೆಯಿರುವುದೇಕೆ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ಆಹಾರದ ಗುಣಮಟ್ಟದ ಬಗ್ಗೆ ಗ್ರಾಹಕರಿಂದ ಮಾಹಿತಿ ಪಡೆದುಕೊಂಡರು.
ನಂತರ ರಾಜೇಂದ್ರ ನಗರ ಬಡಾವಣೆ ಮೂಲಕ ಹಾದು ಹೋಗಿರುವ ತುಂಗಾ ನಾಲೆಯು ಕೊಳಚೆಯಿಂದ ಆವೃತವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಪಾರ್ಕ್ ವೀಕ್ಷಣೆ ಮಾಡಿದರು. ಅಲ್ಲಿನ ಅವ್ಯವಸ್ಥೆ ಬಗ್ಗೆ ತೀವ್ರ ಗರಂ ಆದರು,. ನಾಗರೀಕರು ಕೂಡ ಹಲವು ದೂರುಗಳನ್ನು ಮುಂದಿಟ್ಟರು.
ನವುಲೆ ಕೆರೆ ಅವ್ಯವಸ್ಥೆ ಕುರಿತಂತೆ ಉಪ ಲೋಕಾಯುಕ್ತರು ತೀವ್ರ ಬೇಸರ ವ್ಯಕ್ತಪಡಿಸಿದರು. ಸದರಿ ಕೆರೆ ಯಾವ ಇಲಾಖೆ ಉಸ್ತುವಾರಿಯಲ್ಲಿದೆ ಎಂಬುವುದರ ಬಗ್ಗೆಯೇ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ. ತಕ್ಷಣವೇ ಕೆರೆ ಜೀರ್ಣೋದ್ಧಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಂಚಲನ : ಉಪ ಲೋಕಾಯುಕ್ತರ ದಿಢೀರ್ ಭೇಟಿಯು ಆಡಳಿತ ವಲದಯಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಹಾಗೆಯೇ ಹಲವು ರೀತಿಯ ಅವ್ಯವಸ್ಥೆ, ಲೋಪದೋಷಗಳು ಬೆಳಕಿಗೆ ಬರುವಂತಾಗಿದೆ. ಸಾರ್ವಜನಿಕರ ಕೆಲಸ ಏನೆಂಬುವುದನ್ನೇ ಮರೆತ್ತಿದ್ದ ಅದಕ್ಷ ಅಧಿಕಾರಿಗಳಲ್ಲಿ ನಡುಕು ಹುಟ್ಟುವಂತೆ ಮಾಡಿರುವುದಂತೂ ಸತ್ಯವಾಗಿದೆ.
Shivamogga, Mar 19: On March 19, Deputy Lokayukta Judge KN Phanindra made a surprise visit to various places in Shivamogga city and inspected them. During this, he found chaos and lashed out at the officials. He warned that a case would be registered!