
shimoga | ಶಿವಮೊಗ್ಗ ಪಾಲಿಕೆ ವಲಯ ಕಚೇರಿಗಳ ವಾರ್ಡ್ ಹಂಚಿಕೆ : ಜೆಡಿಎಸ್ ಆಕ್ಷೇಪ – ಡಿಸಿಗೆ ಮನವಿ!
ಶಿವಮೊಗ್ಗ (shivamogga), ಮಾ. 19: ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಲು ಮಹಾನಗರ ಪಾಲಿಕೆ ಆಡಳಿತ ಹೊಸದಾಗಿ ಅಸ್ತಿತ್ವಕ್ಕೆ ತಂದಿರುವ ಮೂರು ವಲಯ ಕಚೇರಿಗಳ ವಾರ್ಡ್ ಗಳ ಹಂಚಿಕೆ ಅವೈಜ್ಞಾನಿಕವಾಗಿದೆ ಎಂದು ಜೆಡಿಎಸ್ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಮಾರ್ಚ್ 19 ರಂದು ನಗರದ ಕುವೆಂಪು ರಂಗಮಂದಿರ ಆವರಣದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಜೆಡಿಎಸ್ ಪಕ್ಷ ಮನವಿ ಪತ್ರ ಅರ್ಪಿಸಿದೆ.
ವಿನೋಬನಗರ ಪೊಲೀಸ್ ಚೌಕಿ ಬಳಿಯಿರುವ ಪಾಲಿಕೆ ವಲಯ ಕಚೇರಿ – 1 ಕ್ಕೆ ವಾರ್ಡ್ ಗಳಾದ 1, 2, 3, 4, 6, 7, 8, 9, 32, 33, 34 ನ್ನು ಹಂಚಿಕೆ ಮಾಡಲಾಗಿದೆ. ಸದರಿ ವಾರ್ಡ್ ಗಳ ಪೈಕಿ 32, 33 ಹಾಗೂ 34 ಕ್ರಮವಾಗಿ ಟಿಪ್ಪುನಗರ, ಸವಾಳಿ ಪಾಳ್ಯ ಹಾಗೂ ವಿದ್ಯಾನಗರ ದಕ್ಷಿಣ ಭಾಗಗಳಾಗಿವೆ. ವಿನೋಬನಗರ ವಲಯ ಕಚೇರಿಯಿಂದ ಸುಮಾರು 5 ರಿಂದ 6 ಕಿ.ಮೀ. ದೂರದಲ್ಲಿವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಹಾಗೆಯೇ ವಲಯ ಕಚೇರಿ 3 ರ ವ್ಯಾಪ್ತಿಗೆ ವಾರ್ಡ್ 12, 13, 14, 15, 16, 17. 18, 19, 23, 24, 25, 27 ಹಾಗೂ 28 ಹಂಚಿಕೆ ಮಾಡಲಾಗಿದೆ. ಈ ಪೈಕಿ 18 ಮತ್ತು 19 ನೇ ವಾರ್ಡ್ ಗಳು ಕ್ರಮವಾಗಿ ವಿನೋಬನಗರ ದಕ್ಷಿಣ ಹಾಗೂ ಶರಾವತಿ ನಗರ ಆಗಿರುತ್ತದೆ. ವಲಯ ಕಚೇರಿಯಿರುವ ಪ್ರದೇಶಕ್ಕೆ ವಿನೋಬನಗರ ಹಗೂ ಶರಾವತಿ ನಗರ ಪ್ರದೇಶಗಳು ಐದಾರು ಕಿ.ಮೀ. ದೂರವಾಗುತ್ತದೆ.
ಈ ಹಿನ್ನೆಲೆಯಲ್ಲಿ ಕೆಲ ವಲಯ ಕಚೇರಿಗಳಿಗೆ ಅವೈಜ್ಞಾನಿಕವಾಗಿ ವಾರ್ಡ್ ಗಳ ಹಂಚಿಕೆ ಮಾಡಲಾಗಿದೆ. ಇದರಿಂದ ನಾಗರೀಕರು ತೀವ್ರ ತೊಂದರೆ ಪಡುವಂತಾಗುತ್ತದೆ ಎಂದು ಜೆಡಿಎಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಭೌಗೋಳಿಕವಾಗಿ ಶಿವಮೊಗ್ಗ ನಗರದ ವಾರ್ಡ್ ಗಳ ವಲಯ ಕಚೇರಿಗಳ ಹಂಚಿಕೆ ಮಾಡಬೇಕು. ವಿನೋಬನಗರ ವಾರ್ಡ್ 18 ಹಾಗೂ ಶರಾವತಿ ನಗರ ವಾರ್ಡ್ 19 ನ್ನು ವಲಯ ಕಚೇರಿ – 1 ರ ವ್ಯಾಪ್ತಿಗೆ
ಹಾಗೂ ವಾರ್ಡ್ 32 ಟಿಪ್ಪು ನಗರ, ವಾರ್ಡ್ 33 ಸವಾಯಿ ಪಾಳ್ಯ ಹಾಗೂ ವಾರ್ಡ್ 34 ವಿದ್ಯಾನಗರವನ್ನು ವಲಯ 3 ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ ಆದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್, ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಮುಖಂಡರಾದ ಉಮಾಶಂಕರ್ ಉಪಾಧ್ಯಯ, ಕೃಷ್ಣ, ವೆಂಕಟೇಶ್, ವಿಜಯ್ ಕುಮಾರ್, ಸಂಜಯ್ ಕಶ್ಯಪ್,
ದಯಾನಂದ ಸಾಲಾಗಿ, ಮಾಧವಮೂರ್ತಿ, ಸಿದ್ದೇಶ್, ಗೋವಿಂದ್ ರಾಜ್, ಗೋಪಿ ಮೊದಲಿಯಾರ್, ನಿಹಾಲ್ ಖಾನ್, ನೀಲು, ರುದ್ರೇಶ್, ಮೂರ್ತಿ, ಪ್ರಪುಲ್ಲ ಚಂದ್ರಶೇಖರ್, ಚಿನ್ನು, ಬಸಪ್ಪ, ಪುಷ್ಪ, ಲಕ್ಷ್ಮೀ, ಸರಿತ ಮೊದಲಾದವರಿದ್ದರು.
Shivamogga, March 19: The JDS party has objected to the allocation of three zonal offices and wards newly established by the Municipal Corporation administration to facilitate citizens, saying it is unscientific. In this regard, the JDS party submitted a petition to District Collector Gurudatta Hegde on March 19 at the Kuvempu Theatre premises in the city.