
ಭದ್ರಾವತಿ : ನಕಲಿ ನೋಟು ಚಲಾವಣೆ – ರಿಯಲ್ ಎಸ್ಟೇಟ್ ಕೆಲಸಗಾರ ಅರೆಸ್ಟ್!
ಭದ್ರಾವತಿ (bhadravati), ಜೂ. 15: ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇರೆಗೆ, ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.
ಭದ್ರಾವತಿಯ ಭಂಡಾರಹಳ್ಳಿ ಎದುರಿನ ನಾಗಮ್ಮ ಲೇಔಟ್ ನಿವಾಸಿ, ರಿಯಲ್ ಎಸ್ಟೇಟ್ ಕೆಲಸ ಮಾಡುವ ರಂಗೇಗೌಡ (57) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ 500 ರೂ. ಮುಖಬೆಲೆಯ 13 ನೋಟುಗಳು ಹಾಗೂ 200 ರೂ., 100 ರೂ., 50 ರೂ. ಮುಖಬೆಲೆಯ ತಲಾ 1 ನಕಲಿ ನೋಟು ಹಾಗೂ ಕೃತ್ಯಕ್ಕೆ ಬಳಸಿದ್ದ ಡಿಸ್ಕವರ್ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯು ಬೇರೆಡೆಯೂ ನಕಲಿ ನೋಟುಗಳ ಚಲಾವಣೆ ಮಾಡಿರುವ ಕುರಿತಂತೆ ಪೊಲೀಸರ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ OFP 790829 ಹಾಗೂ 9TV 978202 ಕ್ರಮ ಸಂಖ್ಯೆಯ 500 ಮುಖಬೆಲೆಯ ನೋಟುಗಳು ಕಂಡುಬಂದಲ್ಲಿ, ಪೊಲೀಸರಿಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಜೂನ್ 14 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಕ್ಕಿದ್ದು ಹೇಗೆ? : ಭದ್ರಾವತಿ ನಗರದ ಕೂಲಿ ಬ್ಲಾಕ್ ಶೆಡ್ ನಿವಾಸಿ ಅಜಯ್ ಎಂಬುವರಿಗೆ 12-6-2025 ರ ಸಂಜೆ ಡಿಸ್ಕವರ್ ಬೈಕ್ ನಲ್ಲಿ ಆಗಮಿಸಿದ ಆರೋಪಿಯು, 500 ರೂ. ನಕಲಿ ನೋಟು ನೀಡಿ ವ್ಯಾಪಾರ ಮಾಡಿ ತೆರಳಿದ್ದ. ಈ ಕುರಿತಂತೆ ಅಜಯ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಭದ್ರಾವತಿ ಡಿವೈಎಸ್ಪಿ ನಾಗರಾಜ್, ಇನ್ಸ್‌ಪೆಕ್ಟರ್ ಮಂಜುನಾಥ್, ಪಿಎಸ್ಐ ರಮೇಶ್, ಎಎಸ್ಐ ಮಂಜಪ್ಪ, ಸಿಬ್ಬಂದಿಗಳಾದ ನವೀನ್, ವಿಜಯ್, ಶ್ರೀಧರ್, ಮಾರುತಿ ಪಾಟೀಲ್, ಪ್ರಸನ್ನ, ರಘು, ನಾಗರಾಜಪ್ಪರವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Bhadravati, June 15: Bhadravati New Town police have arrested an accused on charges of circulating fake currency. #bhadravati, #bhadravathi, #bhadravatinews, #ಭದ್ರಾವತಿ,