shimoga | ಶಿವಮೊಗ್ಗ ಸೆಂಟ್ರಲ್ ಜೈಲ್ ಖೈದಿ ಹೊಟ್ಟೆಯಲ್ಲಿ ಪತ್ತೆಯಾದ ಮೊಬೈಲ್ ಫೋನ್!
ಶಿವಮೊಗ್ಗ (shivamogga), ಜು. 8: ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಖೈದಿಯೋರ್ವನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾದ ಕುತೂಹಲಕಾರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸದರಿ ಖೈದಿಯನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿದ್ದ ಒಂದು ಇಂಚು ಅಗಲ ಹಾಗೂ ಮೂರು ಇಂಚು ಉದ್ದದ ಮೊಬೈಲ್ ಫೋನ್ ಹೊರ ತೆಗೆಯಲಾಗಿದೆ.
ಕಾರಾಗೃಹದಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧವಿದೆ. ಆದರೆ ಖೈದಿಯೋರ್ವನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಈ ಕುರಿತಂತೆ ತನಿಖೆ ನಡೆಸುವಂತೆ ಕೇಂದ್ರ ಕಾರಾಗೃಹದ ಅಧೀಕ್ಷಕ ರಂಗನಾಥ್ ಪಿ ಅವರು ನೀಡಿದ ದೂರಿನ ಆಧಾರದ ಮೇಲೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಏನೀದು ಪ್ರಕರಣ? : ದೌಲತ್ ಅಲಿಯಾಸ್ ಗುಂಡ (30) ಎಂಬ ಖೈದಿಯ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಪ್ರಕರಣವೊಂದರಲ್ಲಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ.
ಕಳೆದ ಜೂನ್ 24 ರಂದು ಜೈಲಿನ ಆಸ್ಪತ್ರೆಗೆ ಆಗಮಿಸಿದ ಆತ ತಾನು ಕಲ್ಲು ನುಂಗಿದ್ದೆನೆ ಎಂದು ವೈದ್ಯರಿಗೆ ತಿಳಿಸಿದ್ದ. ಈತನನ್ನು ಪರೀಕ್ಷಿಸಿದ ಜೈಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಎಕ್ಸ್ ರೇ ಮಾಡಿದಾಗ ಖೈದಿ ದೌಲತ್ ನ ಹೊಟ್ಟೆಯಲ್ಲಿ ಮೊಬೈಲ್ ಪೋನ್ ಇರುವುದು ಪತ್ತೆಯಾಗಿತ್ತು. ತದನಂತರ ಶಸ್ತ್ರಚಿಕಿತ್ಸೆ ನಡೆಸಿ ಮೊಬೈಲ್ ಫೋನ್ ಹೊರ ತೆಗೆಯಲಾಗಿದೆ.
Shivamogga, July 8: An interesting incident has come to light recently when a mobile phone was found in the stomach of a prisoner of the Central Jail in Sogane, Shivamogga. The prisoner was admitted to the Government Meggan Hospital and underwent surgery to remove a one-inch wide and three-inch long mobile phone from his stomach.
