
shimoga | ಮಾರಣಾಂತಿಕ ಲೆಪ್ಪೋಸ್ಪೈರೋಸಿಸ್ ಸೋಂಕು ನಿಯಂತ್ರಣಕ್ಕೆ ಶಿವಮೊಗ್ಗ ಡಿಸಿ ನೀಡಿದ ಸೂಚನೆಯೇನು?
ಶಿವಮೊಗ್ಗ (shivamogga), ಆಗಸ್ಟ್ 30 : ರೋಗಬಾದಿತ ಇಲಿ, ಹಂದಿ, ನಾಯಿ ಕುದುರೆ ಮತ್ತಿತರ ಜಾನುವಾರುಗಳ ಮೂತ್ರದಲ್ಲಿನ ಬ್ಯಾಕ್ಟೀರಿಯವು ರೋಗಪೀಡಿತ ಪ್ರಾಣಿಗಳ ಮಲ-ಮೂತ್ರದಿಂದ ಕಲುಷಿತವಾದ ನೀರು, ಮಣ್ಣು ಸಸ್ಯಗಳ ಮೂಲಕ ಮನುಷ್ಯರಿಗೆ ಮಾರಣಾಂತಿಕ ಲೆಪ್ಪೋಸ್ಪೈರೋಸಿಸ್ ಸೋಂಕು ಹರಡಬಹುದಾಗಿದ್ದು, ಅದರ ನಿಯಂತ್ರಣಕ್ಕೆ ಎಲ್ಲಾ ಅರೋಗ್ಯಾಧಿಕಾರಿಗಳು ತಕ್ಷಣದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಳೆಗಾಲ ಮುಗಿದು ಬೇಸಿಗೆ ಆರಂಭವಾಗುವ ಸಂದಿಕಾಲದಲ್ಲಿ ಮಲೇರಿಯಾ, ಚಿಕೂನ್ಗುನ್ಯಾ, ಡೇಂಗ್ಯೂ ಮುಂತಾದ ಸಾಂಕ್ರಾಮಿಕ ರೋಗಗಳು ಜಿಲ್ಲೆಯ ಅಲ್ಲಲ್ಲಿ ಕಂಡುಬಂದು ಉಲ್ಬಣಗೊಳ್ಳುವ ಸಾಧ್ಯತೆಗಳಿರುವುದರಿಂದ ಅದರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಹಾವು ಕಡಿತಕ್ಕೆ ಸಕಾಲದಲ್ಲಿ ಅಗತ್ಯ ಚಿಕಿತ್ಸೆ ನೀಡಲು ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳುವಂತೆ ಸೂಚಿಸಿದ ಅವರು, ಹಾವು ಕಡಿತದ ವ್ಯಕ್ತಿಗೆ ತ್ವರಿತಗತಿಯ ಚಿಕಿತ್ಸೆ ನಡೆಸಲು ವೈದ್ಯರು ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದದರು.
ಹಾವು ಕಚ್ಚಿದ ಸಂದರ್ಭಗಳಲ್ಲಿ ಸಾರ್ವಜನಿಕರು ಆತಂಕಕ್ಕೊಳಗಾಗದೇ ತಕ್ಷಣದಲ್ಲಿ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ಬಾದಿತ ವ್ಯಕ್ತಿಯ ಕುಟುಂಬದ ಸದಸ್ಯರು ಅಥವಾ ಸ್ಥಳದಲ್ಲಿರುವ ಯಾವುದೇ ವ್ಯಕ್ತಿ ಅವರ ರಕ್ಷಣೆಗಾಗಿ ತುರ್ತು ಕ್ರಮ ವಹಿಸುವಂತೆ ಅವರು ಸೂಚಿಸಿದರು.
ನಾಯಿ ಕಡಿತಕ್ಕೆ ಸಂಬಂದಿಸಿದಂತೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 12,136 ಪ್ರಕರಣಗಳನ್ನು ಗುರುತಿಸಲಾಗಿದೆ. ನಾಯಿ ಕಡಿತ ಚಿಕಿತ್ಸೆಗೆ ಅಗತ್ಯವಾದ ಲಸಿಕೆಗಳನ್ನು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನಿಕರೀಸಲಾಗಿದೆ. ಅಂತೆಯೇ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ ಅವರು ಮಾತನಾಡಿ, ಪ್ರತಿ ವರ್ಷ ಮಲೆನಾಡು ವ್ಯಾಪ್ತಿಯ ಸಾಗರ, ಹೊಸನಗರ, ತೀರ್ಥಹಳ್ಳಿ ಮತ್ತಿತರ ಪ್ರದೇಶದ ವ್ಯಾಪ್ತಿಯಲ್ಲಿ ಹರಡುವ ಮಾರಣಾಂತಿಕ ಮಂಗನ ಕಾಯಿಲೆಯ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಮುಂದಿನ ದಿನಗಳಲ್ಲಿ ಸಂಭಾವ್ಯ ಸೋಂಕಿತ ವ್ಯಕ್ತಿ ಅಥವಾ ಅವರ ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯ ತಪಾಸಣೆಗೆ ಕ್ರಮವಹಿಸುವಂತೆ ಅವರು ಸೂಚಿಸಿದರು.
ಪ್ರಸಕ್ತ ಸಾಲಿನಲ್ಲಿ ಈವರೆಗೆ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ. ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅರಣ್ಯ ಮತ್ತು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಸೇರಿದಂತೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರರು ಸೇರಿದಂತೆ ಜಂಟಿ ಸಮಾಲೋಚನಾ ಸಭೆ ನಡೆಸಿ, ಕ್ರಮ ಕೈಗೊಳ್ಳುವಂತೆ ಹಾಗೂ ಕಳೆದ ಸಾಲಿನಲ್ಲಿ ಗುರುತಿಸಲಾಗಿದ್ದ ಸೋಂಕಿನ ಪ್ರದೇಶಗಳಲ್ಲಿನ ಜನರಿಗೆ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಕೈಗೊಂಡ ಕ್ರಮದ ಬಗ್ಗೆ ಕ್ರೋಡೀಕರಿಸಿದ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಅವರು ಸೂಚಿಸಿದರು.
ಜನಜಾಗೃತಿಗಾಗಿ ಕೆ.ಎಫ್.ಡಿ ಕಾಯಿಲೆ ಕಂಡುಬರುವ ಪ್ರದೇಶದಲ್ಲಿನ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯಸ್ಥರಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕೂಡಲೇ ಪತ್ರ ಬರೆದು ನಿಯಂತ್ರಣ ಕೈಗೊಳ್ಳುವಂತೆಯೂ ಅವರು ಸಲಹೆ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆ ಮತ್ತು ಮಾರಾಟಕ್ಕೆ ಈ ಹಿಂದೆ ಇದ್ದ ದಂಡದ ಮೊತ್ತವನ್ನು ರೂ.200/-ಗಳಿಂದ ರೂ.1000/-ಕ್ಕೆ ವಿಸ್ತರಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಷೇಧ ಮತ್ತು ದಂಡಕ್ಕೆ ಸಂಬಂಧಿಸಿದಂತೆ ಭಿತ್ತಿ ಫಲಕಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ನಾಗರಾಜನಾಯ್ಕ್ ಸೇರಿದಂತೆ ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
shivamogga, august 30: The DC gurudatta hegde said that the bacteria in the urine of infected rats, pigs, dogs, horses and other livestock can spread leptospirosis to humans through water, soil and plants contaminated with the feces and urine of infected animals, and safety measures should be taken.