shimoga news | ನಿವೇಶನ ಹಂಚಿಕೆ ಯಾವಾಗ? ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ದಿವ್ಯ ಮೌನವೇಕೆ?

When will the site allotment happen? Why the divine silence of the Shivamogga–Bhadravathi Urban Development Authority? ನಿವೇಶನ ಹಂಚಿಕೆ ಯಾವಾಗ? ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ದಿವ್ಯ ಮೌನವೇಕೆ?

ಶಿವಮೊಗ್ಗ (shivamogga), ಜನವರಿ 14: ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ವು. ಶಿವಮೊಗ್ಗ ನಗರದ ಹೊರವಲಯ ಊರುಗಡೂರಿನಲ್ಲಿ ನೂತನ ಬಡಾವಣೆ ಅಭಿವೃದ್ದಿಗೆ ಕ್ರಮಕೈಗೊಂಡಿದ್ದು, ವಿವಿಧ ಅಳತೆಯ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಕಳೆದ ವರ್ಷ ನಾಗರೀಕರಿಂದ ಅರ್ಜಿ ಆಹ್ವಾನಿಸಿತ್ತು.

ಸರಿಸುಮಾರು 15 ವರ್ಷಗಳ ನಂತರ ಪ್ರಾಧಿಕಾರ ನಿವೇಶನಕ್ಕೆ ಅರ್ಜಿ ಆಹ್ವಾನಿಸಿದ್ದರಿಂದ, ಸಾವಿರಾರು ಸಂಖ್ಯೆಯ ನಾಗರೀಕರು ಪ್ರಾಧಿಕಾರ ಸೂಚಿಸಿದ್ದ ಮುಂಗಡ ಹಣ ಪಾವತಿಸಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದರು.

ಆದರೆ ಪ್ರಾಧಿಕಾರವು ಅರ್ಜಿ ಸ್ವೀಕರಿಸಿ ವರ್ಷವೇ ಉರುಳಿದರೂ ಇಲ್ಲಿಯವರೆಗೂ ಅರ್ಹ ನಾಗರೀಕರಿಗೆ ನಿವೇಶನ ಹಂಚಿಕೆಯ ಪ್ರಕ್ರಿಯೆ ಆರಂಭಿಸಿಲ್ಲ. ಅರ್ಜಿ ಸ್ವೀಕರಿಸುವ ವೇಳೆಯಿದ್ದ ಉತ್ಸಾಹ, ಹಂಚಿಕೆ ಪ್ರಕ್ರಿಯೆ ಆರಂಭದತ್ತ ಕಂಡುಬರುತ್ತಿಲ್ಲ. ಈ ನಿಟ್ಟಿನಲ್ಲಿ ಸಂಪೂರ್ಣ ದಿವ್ಯ ಮೌನಕ್ಕೆ ಶರಣಾಗಿರುವುದು ಸಖೇದಾಶ್ಚರ್ಯಕ್ಕೆ ಕಾರಣವಾಗಿದೆ.

ಲಭ್ಯ ಮಾಹಿತಿ ಅನುಸಾರ, ಸುಮಾರು 914 ನಿವೇಶನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 3 ಸಾವಿರಕ್ಕೂ ಅಧಿಕ ಅರ್ಜಿಗಳು ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿವೆ. ಸದರಿ ಅರ್ಜಿಗಳ ಪರಿಶೀಲನೆ, ಅರ್ಹ ಫಲಾನುಭವಿಗಳ ಆಯ್ಕೆ, ಆಕ್ಷೇಪಣೆ ಆಹ್ವಾನ ಮತ್ತೀತರ ಯಾವುದೇ ಪ್ರಕ್ರಿಯೆಗಳನ್ನು ಪ್ರಾಧಿಕಾರ ನಡೆಸಿಲ್ಲ.

ಮತ್ತೊಂದೆಡೆ, ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಸಾವಿರಾರು ನಾಗರೀಕರು, ಜಾತಕ ಪಕ್ಷಿಗಳಂತೆ ಕಾದು ಕುಳಿತುಕೊಂಡಿದ್ದಾರೆ. ಪ್ರಾಧಿಕಾರದ ಕಚೇರಿಗೆ ಅಲೆದಾಡುವಂತಾಗಿದೆ. ಕಚೇರಿಯಲ್ಲಿಯೂ ಸಮರ್ಪಕ ಮಾಹಿತಿ ಲಭ್ಯವಾಗದೆ ಗೊಂದಲಕ್ಕೊಳಗಾಗುವಂತಾಗಿದೆ.

‘ಪ್ರಸ್ತುತ ಶಿವಮೊಗ್ಗ ನಗರದಲ್ಲಿ ಬಡ – ಮಧ್ಯಮ ವರ್ಗದವರು ಸ್ವಂತ ನಿವೇಶನ ಹಾಗೂ ಮನೆ ಹೊಂದುವುದು ಕನಸಿನ ಮಾತಾಗಿದೆ. ರಿಯಲ್ ಎಸ್ಟೇಟ್ ದರ ಗಗನಕ್ಕೇರಿದೆ. ವಸತಿರಹಿತ ಜನಸಾಮಾನ್ಯರಿಗೆ ಸೂರು ಕಲ್ಪಿಸುವ ಮಹತ್ತರ ಉದ್ದೇಶದಿಂದ ಕಾರ್ಯನಿರ್ವಹಿಸುವ ನಗರಾಭಿವೃದ್ದಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿಯಂತ ಸಂಸ್ಥೆಗಳು ಕಳೆದ ಒಂದೂವರೆ ದಶಕದಿಂದ ಶಿವಮೊಗ್ಗ ನಗರದಲ್ಲಿ ಹೊಸ ಬಡಾವಣೆಗಳ ರಚನೆ ಮಾಡಿಲ್ಲ.

ಈ ನಡುವೆ ಕಳೆದ ವರ್ಷ ಪ್ರಾಧಿಕಾರವು ಊರುಗಡೂರು ಬಡಾವಣೆಯಲ್ಲಿ ನಿವೇಶನಕ್ಕೆ ಅರ್ಜಿ ಆಹ್ವಾನಿಸಿತ್ತು. ಸಾಲ ಮಾಡಿ ಲಕ್ಷಾಂತರ ರೂ. ಮುಂಗಡ ಪಾವತಿಸಿ, ನಿವೇಶನಕ್ಕೆ ಅರ್ಜಿ ಸಲ್ಲಿಸಲಾಗಿದೆ. ವರ್ಷವಾದರೂ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭವಾಗಿಲ್ಲ. ಮತ್ತೊಂದೆಡೆ, ಮಾಡಿದ ಸಾಲಕ್ಕೆ ಪ್ರತಿ ತಿಂಗಳು ಸಾವಿರಾರು ರೂ. ಬಡ್ಡಿ ತೆತ್ತುವಂತಾಗಿದೆ. ಪ್ರಾಧಿಕಾರ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭಿಸಬೇಕು. ಇಲ್ಲವೇ, ಪಾವತಿಸಿದ ಮುಂಗಡ ಹಣವಾದರೂ ನಾಗರೀಕರಿಗೆ ಹಿಂದಿರುಗಿಸಬೇಕು’ ಎಂದು ನಿವೇಶನಕ್ಕೆ ಅರ್ಜಿ ಸಲ್ಲಿಸಿದ ನಾಗರೀಕರು ಆಗ್ರಹಿಸಲಾರಂಭಿಸಿದ್ದಾರೆ.

*** ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರ ಅಧಿಕಾರಾವಧಿ ಪೂರ್ಣಕ್ಕೆ ಇನ್ನೂ ಕೆಲ ತಿಂಗಳುಗಳು ಬಾಕಿಯಿದೆ. ಅವರ ಅಧಿಕಾರಾವಧಿಯಲ್ಲಿ ಊರುಗಡೂರು ಬಡಾವಣೆಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರದ ಆಯುಕ್ತ ವಿಶ್ವನಾಥ ಪಿ ಮುದಜ್ಜಿ ಅವರು ಕೂಡ ಆದ್ಯ ಗಮನಹರಿಸಬೇಕಾಗಿದೆ. ಅಧ್ಯಕ್ಷರು – ಆಯುಕ್ತರು, ಕಾಲಮಿತಿಯೊಳಗೆ ವಸತಿ ರಹಿತ ಜನಸಾಮಾನ್ಯರ ಪರ ನಿಲುವು ಕೈಗೊಳ್ಳಬೇಕಾಗಿದೆ ಎಂದು ನಿವೇಶನಕ್ಕೆ ಅರ್ಜಿ ಸಲ್ಲಿಸಿ ಜಾತಕ ಪಕ್ಷಿಗಳಂತೆ ಕಾದು ಕುಳಿತಿರುವ ನಾಗರೀಕರು ಆಗ್ರಹಿಸುತ್ತಾರೆ.

Shivamogga, January 14: The Shivamogga–Bhadravathi Urban Development Authority (SUDA) has taken steps to develop a new residential layout at Urugaduru. In connection with the allotment of sites of various dimensions, the authority had invited applications from citizens last year.Since this was the first call for site applications in nearly 15 years, thousands of citizens submitted applications, paying the prescribed advance amount as directed by the authority.However, even after a year has passed since the applications were collected, the authority has not yet initiated the process of allotting sites to eligible applicants. The enthusiasm that was evident during the application stage has not translated into progress toward allotment. This prolonged silence from the authority has become a matter of deep disappointment and surprise among the public.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →