ಇತ್ತೀಚೆಗಷ್ಟೆ ಗೋವಾದ ಮಾಪುಸ ನಗರದಲ್ಲಿ ನಿಷೇಧಿಸಲಾಗಿದ್ದ ಗೋಬಿ ಮಂಚೂರಿ
ಚೆನ್ನೈ (ತಮಿಳುನಾಡು), ಫೆ. 18: ಇತ್ತೀಚೆಗಷ್ಟೆ ಗೋವಾದ ಮಾಪುಸ ನಗರದಲ್ಲಿ ಸೋಪ್ ಪೌಡರ್ ಬಳಸಿ ತಯಾರಿಸಿದ ಸಾಸ್ ಬಳಸಲಾಗುತ್ತಿದೆ ಎಂಬ ಆರೋಪದ ಮೇರೆಗೆ, ಅಲ್ಲಿನ ಸ್ಥಳಿಯಾಡಳಿತವು ಗೋಬಿ ಮಂಚೂರಿ (gobi Manchurian) ತಯಾರಿಕೆ ಹಾಗೂ ಮಾರಾಟವನ್ನು ನಿಷೇಧಿಸಿತ್ತು.
ಇದೀಗ ತಮಿಳುನಾಡು ಸರ್ಕಾರದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯು, ಕ್ಯಾನ್ಸರ್’ಕಾರಕ ಅಂಶವಿರುವ ಆರೋಪದ ಮೇರೆಗೆ ಮಕ್ಕಳ ಅಚ್ಚುಮೆಚ್ಚಿನ ಸಿಹಿ ತಿನಿಸಾದ ಕಾಟನ್ ಕ್ಯಾಂಡಿ – cotton candy (ಬಾಂಬೆ ಮಿಠಾಯಿ – Bombay miṭhayi) ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ.
ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್’ಕಾರಕ ‘ರೊಡಾಮೈನ್ – ಬಿ’ಇರುವುದು ಪ್ರಯೋಗಾಲಯ ತಪಾಸಣೆ ವೇಳೆ ದೃಢಪಟ್ಟಿತ್ತು. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ, ತಮಿಳುನಾಡಿನಾದ್ಯಂತ ಕಾಟನ್ ಕ್ಯಾಂಡಿ ಮಾರಾಟ ನಿರ್ಬಂಧಿಸಲು ಮುಖ್ಯ ಕಾರಣವಾಗಿದೆ. ನಿಯಮ ಉಲ್ಲಂಘಿಸಿ ಕಾಟನ್ ಕ್ಯಾಂಡಿ ಮಾರಾಟ ಮಾಡುವವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಆರೋಗ್ಯಕ್ಕೆ ಮಾರಕ : ಆರೋಗ್ಯಕ್ಕೆ ಮಾರಕವಾದ ವಸ್ತುಗಳನ್ನು ಬಳಸಿ ತಯಾರಿಸಿದ ಕಾಟನ್ ಕ್ಯಾಂಡಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ದೊಡ್ಡ ಪ್ರಮಾಣದಲ್ಲಿ ಕೇಳಿಬಂದಿತ್ತು. ಈ ಕಾರಣದಿಂದ ತಮಿಳುನಾಡು ರಾಜ್ಯದ ವಿವಿಧೆಡೆ ಮಾರಾಟ ಮಾಡಲಾಗುತ್ತಿದ್ದ ಕಾಟನ್ ಕ್ಯಾಂಡಿಯನ್ನು ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಉನ್ನತ ಮಟ್ಟದ ತಪಾಸಣೆಗೊಳಪಡಿಸಲಾಗಿತ್ತು.
ಪರೀಕ್ಷೆಯ ವೇಳೆ ಕಾಟನ್ ಕ್ಯಾಂಡಿಗೆ ಬಣ್ಣ ನೀಡಲು ಬಳಸಲಾಗುವ ರಾಸಾಯನಿಕದಲ್ಲಿ ಕ್ಯಾನ್ಸರ್’ಗೆ ಕಾರಣವಾಗುವ ‘ರೊಡಾಮೈನ್ – ಬಿ’ ಇರುವುದು ದೃಢಪಟ್ಟಿತ್ತು.
ಪುದುಚೇರಿಯಲ್ಲಿಯೂ ನಿರ್ಬಂಧ : ಪ್ರಸ್ತುತ ತಿಂಗಳ ಆರಂಭದಲ್ಲಿ ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಕಾಟನ್ ಕ್ಯಾಂಡಿ ಮಾರಾಟ ನಿಷೇಧಿಸಲಾಗಿತ್ತು. ಇದರ ಬೆನಲ್ಲೇ, ತಮಿಳುನಾಡು ಸರ್ಕಾರ ಕೂಡ ಕಾಟನ್ ಕ್ಯಾಂಡಿ ಮಾರಾಟವನ್ನು ನಿರ್ಬಂಧಿಸಿದೆ.

