ಶಿವಮೊಗ್ಗ – ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳಿಂದ ವ್ಯಾಪಾರಿ ಮೇಲೆ ಹಲ್ಲೆ : ವೈರಲ್ ಆದ ವೀಡಿಯೋ!
ಶಿವಮೊಗ್ಗ, ಜ. 15: ಕ್ಷುಲ್ಲಕ ಕಾರಣಕ್ಕೆ ನಾಲ್ವರು ಕಿಡಿಗೇಡಿಗಳು, ವ್ಯಾಪಾರಿಯೋರ್ವರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ, ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಸ್ತೂರ ಬಾರ ರಸ್ತೆಯಲ್ಲಿ ಜ. 14 ರ ರಾತ್ರಿ ನಡೆದಿದೆ.
ಸಿಹಿ ತಿನಿಸು, ಸಮೋಸ ಮಾರಾಟ ಮಾಡುವ ಹೀರಾ ಲಾಲ್ ಎಂಬುವರೇ ಹಲ್ಲೆಗೊಳಗಾದ ವ್ಯಾಪಾರಿಯಾಗಿದ್ದಾರೆ. ಕಿಡಿಗೇಡಿಗಳ ದಾಳಿಯಿಂದ ಗಾಯಗೊಂಡಿರುವ ವ್ಯಾಪಾರಿಯನ್ನು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಏನಾಯ್ತು?: ವ್ಯಾಪಾರಿಯ ಅಂಗಡಿ ಬಳಿ, ರಾತ್ರಿ ಸರಿಸುಮಾರು 8 ಗಂಟೆ ವೇಳೆಗೆ ನಾಲ್ವರು ಅಪರಿಚಿತರು ಆಗಮಿಸಿದ್ದಾರೆ. ವಿಳಾಸವೊಂದರ ಮಾಹಿತಿ ಕೇಳಿದ್ದಾರೆ. ವ್ಯಾಪಾರಿ ತಿಳಿಸಿದ್ದಾರೆ. ಅಲ್ಲಿಂದ ತೆರಳಿದ್ದ ಆರೋಪಿಗಳು, ಮತ್ತೆ ವಾಪಾಸ್ ಬಂದಿದ್ದಾರೆ.
ರಸ್ತೆಯಲ್ಲಿ ನಿಂತು ವ್ಯಾಪಾರಿಗೆ ವಿನಾ ಕಾರಣ ಅವ್ಯಾಚ್ಯ ಶಬ್ದಗಳಿಂದ ನಿಂದಿಸಲಾರಂಭಿಸಿದ್ದಾರೆ. ಈ ವೇಳೆ ಅಂಗಡಿಯಿಂದ ಹೊರಬಂದು ವ್ಯಾಪಾರಿ ಪ್ರಶ್ನಿಸಿದ್ದಾರೆ. ಈ ವೇಳೆ ಏಕಾಏಕಿ ಆರೋಪಿಗಳು ವ್ಯಾಪಾರಿಯ ಮೇಲೆ ಹಲ್ಲೆ ನಡೆಸಲಾರಂಭಿಸಿದ್ದಾರೆ. ಹಾಗೆಯೇ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ.
ತಕ್ಷಣವೇ ಸ್ಥಳದಲ್ಲಿದ್ದವರು ವ್ಯಾಪಾರಿಯ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಮೂವರು ಸ್ತಳದಿಂದ ಪರಾರಿಯಾಗಿದ್ದಾರೆ. ಓರ್ವ ಆರೋಪಿಯನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ್ದಾರೆ.
ವಶಕ್ಕೆ ಪಡೆದ ಆರೋಪಿಯನ್ನು ಪೊಲೀಸರು ವಿಚಾರಣೆಗೊಳೊಡಿಸಿದ್ದಾರೆ. ಪರಾರಿಯಾಗಿರುವವರ ಪತ್ತೆಗೆ ಕ್ರಮಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
ವೈರಲ್ : ಘಟನೆಯ ದೃಶ್ಯಾವಳಿಯು ಅಂಗಡಿಯೊಂದರಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಸ್ತುತ ಸದರಿ ದೃಶ್ಯಾವಳಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
