shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಸರ್ಕಾರಕ್ಕೆ ಸಲ್ಲಿಕೆಯಾಗದ ಪ್ರಸ್ತಾವನೆ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಮಾ. 18: ಕಳೆದ ಸರಿಸುಮಾರು 30 ವರ್ಷಗಳ ನಂತರ ಆರಂಭವಾಗಿದ್ದ,, ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ಮಹಾನಗರ ಪಾಲಿಕೆ ಆಡಳಿತ ಸಿದ್ದಪಡಿಸಿರುವ ಪ್ರಸ್ತಾವನೆ, ಇಲ್ಲಿಯವರೆಗೂ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ! ಇದರಿಂದ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ವಿಷಯವು ನೆನೆಗುದಿಗೆ ಬೀಳುವಂತಾಗಿದೆ.
ಪೌರಾಡಳಿತ ಇಲಾಖೆ ಸೂಚನೆಯಂತೆ, ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಕ್ರಮಕೈಗೊಳ್ಳಲಾಗಿತ್ತು. ಕಳೆದ ಕೆಲ ತಿಂಗಳುಗಳ ಹಿಂದೆಯೇ, ಪಾಲಿಕೆಯ 7 ಅಧಿಕಾರಿಗಳ ಪ್ರತ್ಯೇಕ ತಂಡಗಳು, ನಗರದ ಹೊರವಲಯದ ಗ್ರಾಮ ಪಂಚಾಯ್ತಿ ಅಧೀನದ ಪ್ರದೇಶಗಳ ಸರ್ವೇ ನಡೆಸಿತ್ತು.
ಡ್ರೋಣ್ ಮೂಲಕವೂ ಪ್ರದೇಶಗಳ ಮಾಹಿತಿ ಕಲೆ ಹಾಕುವ ಕಾರ್ಯ ನಡೆಸಿತ್ತು. ಸುಮಾರು 24 ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಪ್ರಸ್ತಾವನೆ ಪಟ್ಟಿ ಸಿದ್ದಪಡಿಸಲಾಗಿತ್ತು. ಸದರಿ ಪ್ರಸ್ತಾವನೆಯು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಬೇಕಾಗಿತ್ತು.
ಅದರಂತೆ ಪಾಲಿಕೆ ಆಡಳಿತವು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ನಡುವೆ ಜಿಲ್ಲಾ ನಗರಾಭಿವೃದ್ದಿ ಕೋಶವು ಹೆಚ್ಚಿನ ಮಾಹಿತಿ ಕೋರಿ ಪಾಲಿಕೆಗೆ ಪತ್ರ ಬರೆದಿದೆ. ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಿರುವ 24 ಹಳ್ಳಿಗಳು ಯಾವ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತವೆ,
2011 ರ ಜನಗಣತಿಯಂತೆ ಜನಸಂಖ್ಯೆ ವಿವರ, ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡ ಸಮುದಾಯದ ವಿವರ, ಸದರಿ ಹಳ್ಳಿಗಳ ಕ್ಷೇತ್ರ ವ್ಯಾಪ್ತಿ, ಜನಸಾಂದ್ರತೆ, ಕೃಷಿಯೇತರ ಜನಸಂಖ್ಯೆ, ಆರ್ಥಿಕ ಮಾನದಂಡದ ಬಗ್ಗೆ ದೃಢೀಕರಣ ನಮೂನೆಯಲ್ಲಿ ವರದಿ ನೀಡುವಂತೆ ಪತ್ರ ಬರೆದಿದೆ ಎಂದು ಜಿಲ್ಲಾಡಳಿತದ ಉನ್ನತ ಮೂಲಗಳು ತಿಳಿಸಿವೆ.
ಲಭ್ಯ ಮಾಹಿತಿ ಅನುಸಾರ, ಇಲ್ಲಿಯವರೆಗೂ ಸದರಿ ಪತ್ರಕ್ಕೆ ಪಾಲಿಕೆ ಆಡಳಿತ ಉತ್ತರ ನೀಡಿಲ್ಲ. ಇನ್ನಷ್ಟೆ ಉತ್ತರಿಸಬೇಕಾಗಿದೆ. ಇದರಿಂದ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆಯ ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗುವಲ್ಲಿ ವಿಳಂಬವಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಗಮನಹರಿಸಲಿ : ಕಾಲಮಿತಿಯೊಳಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಕ್ಕೆ ಸಂಬಧಿಸಿದಂತೆ, ಜಿಲ್ಲಾಡಳಿತ ಹಾಗೂ ಪಾಲಿಕೆ ಆಡಳಿತ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಈ ಮೂಲಕ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆಗೆ ವೇಗ ನೀಡಬೇಕಾಗಿದೆ ಎಂಬುವುದು ನಗರದ ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.
30 ವರ್ಷಗಳಿಂದ ಪರಿಷ್ಕರಣೆಯಾಗಿಲ್ಲ : ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ!
*** ನಗರಗಳ ಬೆಳವಣಿಗೆ, ಜನಸಂಖ್ಯೆಗೆ ಅನುಗುಣವಾಗಿ ನಿಯಮಿತವಾಗಿ ನಗರ – ಪಟ್ಟಣಗಳ ವ್ಯಾಪ್ತಿ ಪರಿಷ್ಕರಣೆ ಮಾಡಿಕೊಂಡು ಬರಲಾಗುತ್ತದೆ. ಆದರೆ ಶಿವಮೊಗ್ಗ ನಗರ ವ್ಯಾಪ್ತಿ ಮಾತ್ರ ಬರೋಬ್ಬರಿ ಸರಿಸುಮಾರು 30 ವರ್ಷಗಳಿಂದ ಪರಿಷ್ಕರಣೆಯಾಗಿಲ್ಲ! ನಗರಸಭೆಯಿಂದ ಪಾಲಿಕೆಯಾಗಿ ಮೇಲ್ದರ್ಜೆಗೇರಿ ದಶಕವೇ ಉರುಳಿದರೂ ಪರಿಷ್ಕರಣೆಯಾಗಲಿ, ವಾರ್ಡ್ ಗಳ ಸಂಖ್ಯೆ ಹೆಚ್ಚಳವೂ ಆಗಿರಲಿಲ್ಲ. ದೇಶ – ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ನಗರಗಳಲ್ಲಿ ಶಿವಮೊಗ್ಗ ನಗರ ಸ್ಥಾನ ಪಡೆದರೂ, ನಗರಾಡಳಿತ ವ್ಯವಸ್ಥೆಯಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿರಲಿಲ್ಲ.
ಶಿವಮೊಗ್ಗ ಜಿಲ್ಲೆಯವರೇ ಸಿಎಂ, ಡಿಸಿಎಂ ಸೇರಿದಂತೆ ರಾಜ್ಯ ಸರ್ಕಾರದ ಹಂತದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದರೂ ಶಿವಮೊಗ್ಗ ನಗರಾಡಳಿತ ವಿಚಾರದಲ್ಲಿ ಮಾತ್ರ ಯಾವುದೇ ಜನಪರ ನಿರ್ಧಾರ ಕಾರ್ಯಗತವಾಗಿರಲಿಲ್ಲ. ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷ್ಯವಹಿಸಿದ್ದ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದವು. ಇದೀಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಮುಂದೇನಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಕನಿಷ್ಠ 50 ವಾರ್ಡ್ ಗಳಾದರೂ ರಚನೆಯಾಗಬೇಕು..!
*** ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ನಡೆಸಿ, ಪ್ರಸ್ತುತವಿರುವ 35 ವಾರ್ಡ್ ಗಳನ್ನು ಕನಿಷ್ಠ 50 ಕ್ಕೆ ಏರಿಸಬೇಕು. ಈ ಮೂಲಕ ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರಬೇಕು ಎಂಬುವುದು ನಾಗರೀಕರ ಆಗ್ರಹವಾಗಿದೆ. ಈ ಹಿಂದಿನ ನಗರಸಭೆ ಆಡಳಿತದಲ್ಲಿದ್ದ 35 ವಾರ್ಡ್ ಗಳನ್ನೇ, ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದ ವೇಳೆಯೂ ಮುಂದುವರಿಸಿಕೊಂಡು ಬರಲಾಗಿತ್ತು. ಕೆಲ ವಾರ್ಡ್ ಗಳು ಸಾಕಷ್ಟು ವಿಶಾಲ, ಜನಸಂಖ್ಯಾಬಾಹುಳ್ಯ ಹೊಂದಿವೆ. ಜನಸಂಖ್ಯೆ, ವ್ಯಾಪ್ತಿಗೆ ಅನುಗುಣವಾಗಿ ವಾರ್ಡ್ ಗಳ ಪರಿಷ್ಕರಣೆ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂಬುವುದು ಪ್ರಜ್ಞಾವಂತ ನಾಗರೀಕರ ಒತ್ತಾಯವಾಗಿದೆ.
Shivamogga, Mar. 18: The proposal prepared by the Shivamogga Municipal Corporation administration regarding the revision of the Shivamogga Municipal Administration area, which began after almost 30 years, has not been submitted to the state government through the District Collector till now! This has brought the issue of revision of the municipal area to a standstill. #shimoga, #shivamogga, #shimoga corporation, #corporation, #shimoganews, #shivamogganewsupdate,
