ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳಿಗೆ ಡಿಸಿ ನೀಡಿದ ಸೂಚನೆಯೇನು?

#ಕರ್ನಾಟಕವಿಧಾನಸಭೆ ಚುನಾವಣೆ2023 #ಕರ್ನಾಟಕವಿಧಾನಸಭೆಎಲೆಕ್ಷನ್, #ಕರ್ನಾಟಕವಿಧಾನಸಭೆ, #ವಿಧಾನಸಭೆಚುನಾವಣೆ, #ಅಸೆಂಬ್ಲಿಎಲೆಕ್ಷನ್, #ಕರ್ನಾಟಕವಿಧಾನಸಭೆಚುನಾವಣೆಗೆವೇಳಾಪಟ್ಟಿಪ್ರಕಟ, #ಅಸೆಂಬ್ಲಿಎಲೆಕ್ಷನ್, #ವಿಧಾನಸಭೆಚುನಾವಣೆ, #ಚುನಾವಣಾವೇಳಾಪಟ್ಟಿ,

ಶಿವಮೊಗ್ಗ, ಏ. 2: ವಿಧಾನಸಭೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿಗಳು, ಮಾದರಿ ನೀತಿ-ಸಂಹಿತೆ ಉಲ್ಲಂಘನೆಗೆ ಆಸ್ಪದವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಭಾನುವಾರ ಶಿವಮೊಗ್ಗ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳೊಂದಿಗೆ ನಡೆಸಿದ ಸಭೆಯ ವೇಳೆ ಅವರು ಈ ಸೂಚನೆ ನೀಡಿದ್ದಾರೆ.

ಎಲ್ಲ ಚುನಾವಣಾಧಿಕಾರಿಗಳು ಮತಗಟ್ಟೆಗಳಿಗೆ ತೆರಳಿ ಅಲ್ಲಿರುವ ಸೌಲಭ್ಯಗಳ ಪರಿಶೀಲನೆ ನಡೆಸಬೇಕು. ಚುನಾವಣಾ ಪ್ರಕ್ರಿಯೆ ಕುರಿತು, ಈಗಿನಿಂದಲೇ ಸಮರ್ಪಕವಾದ ಯೋಜನೆ ಹಾಕಿಕೊಂಡು ಕಾರ್ಯನಿರ್ವಹಿಸಬೇಕು.

ಪ್ರತಿ ಮತಗಟ್ಟೆಗೆ ಪಂಚಾಯಿತಿ ಅಥವಾ ಇತರೆ ಸ್ಥಳೀಯ ಸಂಸ್ಥೆಗಳಿಂದ ಒಬ್ಬರನ್ನು ನಿಯೋಜಿಸಬೇಕು. ಇಓ, ಚೀಫ್ ಆಫೀಸರ್, ಪಿಡಿಓ ಗಳು ಮತಗಟ್ಟೆಗಳು ಹಾಗೂ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿ/ಸಿಬ್ಬಂದಿಗಳು ಮೂಲಸೌಕರ್ಯಗಳ ಕುರಿತಂತೆ ನಿಗಾವಹಿಸಬೇಕು ಎಂದು ತಿಳಿಸಿದ್ದಾರೆ.

ಮತಗಟ್ಟೆಗಳಲ್ಲಿ ಮೂಲಸೌಕರ್ಯ, ಚುನಾವಣಾ ಸಿಬ್ಬಂದಿಗಳಿಗೆ ನೀರು, ಊಟದ ವ್ಯವಸ್ಥೆ ಸಮರ್ಪಕವಾಗಿದೆಯೇ ಎಂಬುವುದನ್ನು ಪರಿಶೀಲಿಸಬೇಕು. ಸೌಲಭ್ಯಗಳ ಕೊರತೆಯಿರುವ ಹಳ್ಳಿಗಳಲ್ಲಿ, ಹೆಚ್ಚಿನ ಕಾಳಜಿ ವಹಿಸಿ ವ್ಯವಸ್ಥೆ ಮಾಡಬೇಕು. ಮೂರು ಅಥವಾ ಹೆಚ್ಚು ಮತಗಟ್ಟೆ ಇರುವ ಕ್ಲಸ್ಟರ್ ಮತಗಟ್ಟೆಗಳಲ್ಲಿ, ಪೆಂಡಾಲ್ ಮತ್ತೀತರ ಸೌಕರ್ಯ ಸಮರ್ಪಕವಾಗಿರುವಂತೆ ನಿಗಾ ವಹಿಸಬೇಕು ಎಂದು ಹೇಳಿದ್ದಾರೆ.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಓ ಸ್ನೇಹಲ್ ಲೋಖಂಡೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಸ್.ಎಸ್.ಬಿರಾದರ್, ಚುನಾವಣಾ ನಿಯೋಜಿತ ಅಧಿಕಾರಿಗಳು ಹಾಜರಿದ್ದರು.

ನಾಮಪತ್ರ ಸಲ್ಲಿಕೆ : ಈಗಿನಿಂದಲೇ ಪೂರ್ವತಯಾರಿಗೆ ಸೂಚನೆ

*** ನಾಮಪತ್ರ ಸಲ್ಲಿಕೆಗೆ ಅಗತ್ಯವಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು. ನಾಮಪತ್ರ ಸ್ವೀಕರಿಸುವ ಕುರಿತು ಚುನಾವಣಾಧಿಕಾರಿಗಳು ನಿಯಮಗಳು, ಮಾರ್ಗಸೂಚಿಗಳನ್ನು ಮತ್ತೊಮ್ಮೆ ಓದಿ, ತಿಳಿದುಕೊಂಡು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಬೇಕು. ಮಸ್ಟರಿಂಗ್ ಕೇಂದ್ರಗಳು ಹಾಗೂ` ಇದಕ್ಕೆ ಸಂಬಂಧಿಸಿದ ಸಿಬ್ಬಂದಿಗಳು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಮತದಾರರ ಗುರುತಿನ ಚೀಟಿಗಳ ವಿತರಣೆಯನ್ನು ಸಮರ್ಪಕವಾಗಿ ಮಾಡಬೇಕು. ಹೊಸ ಹಾಗೂ ಉಳಿದ ಗುರುತಿನ ಚೀಟಿಗಳನ್ನು ಅಂಚೆ ಮೂಲಕ ವಿತರಿಸಲು ಶೀಘ್ರವೇ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮತದಾನ ಜಾಗೃತಿ ಕಾರ್ಯಕ್ರಮ ಹೆಚ್ಚಿಸಲು ಸಿಇಓ ಸ್ನೇಹಲ್ ಲೋಖಂಡೆ ಸಲಹೆ

*** ಕಳೆದ ವಿಧಾನಸಭೆ ಚುನಾವಣೆ ವೇಳೆ ಕಡಿಮೆ ಮತದಾನವಾದ ಪ್ರದೇಶಗಳಲ್ಲಿ, ಮತದಾನ ಜಾಗೃತಿ ಕಾರ್ಯಕ್ರಮ ಹೆಚ್ಚಿಸಬೇಕು. ಮತದಾನದ ಮಹತ್ವದ ಕುರಿತಂತೆ ಮತದಾರರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಸ್ನೇಹಲ್ ಲೋಖಂಡೆ ಸಲಹೆ ನೀಡಿದ್ದಾರೆ.

ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿಎಸ್‍ಟಿ ಮತ್ತು ಇತರೆ ತಂಡಗಳು ತಮ್ಮ ತಮ್ಮ ಕರ್ತವ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಎಲ್ಲ ಹಳ್ಳಿಗಳಲ್ಲಿಯೂ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಕಸ ಸಂಗ್ರಹ ವಾಹನಗಳಲ್ಲಿ ಮತದಾನ ಮಹತ್ವ-ಅರಿವು ಮೂಡಿಸುವ ಜಿಂಗಲ್‍ಗಳನ್ನು ಹಾಕಬೇಕು. ಸ್ವೀಪ್ ಚಟುವಟಿಕೆಗಳನ್ನು ಸಕ್ರಿಯಗೊಳಿಸಿ ಮತದಾನ ಜಾಗೃತಿ ಮೂಡಿಸಬೇಕು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *