Inclusion in Shivamogga Municipal Corporation : What was the decision taken in the special meeting of Abbalagere Gram Panchayat? ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಅಬ್ಬಲಗೆರೆ ಗ್ರಾಪಂ ವಿಶೇಷ ಸಭೆಯಲ್ಲಿ ಕೈಗೊಂಡ ನಿರ್ಣಯವೇನು?

shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಅಬ್ಬಲಗೆರೆ ಗ್ರಾಪಂ ವಿಶೇಷ ಸಭೆಯಲ್ಲಿ ಕೈಗೊಂಡ ನಿರ್ಣಯವೇನು?

ಶಿವಮೊಗ್ಗ (shivamogga), ಜೂ. 5: ಶಿವಮೊಗ್ಗ ಪಾಲಿಕೆ ವ್ಯಾಪ್ತಿಗೆ ಗ್ರಾಮಗಳ ಸೇರ್ಪಡೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲು, ಜೂ. 6 ರಂದು ಅಬ್ಬಲಗೆರೆ ಗ್ರಾಮ ಪಂಚಾಯ್ತಿಯಲ್ಲಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ವಿಶೇಷ ಸಭೆ ಕರೆಯಲಾಗಿತ್ತು.

ಸಭೆಯ ನಂತರ ಅಧ್ಯಕ್ಷೆ ಭಾಗ್ಯ ಬಿ ಹೊಸಟ್ಟಿ ಅವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಉದ್ದೇಶಿಸಿರುವ ಪ್ರದೇಶಗಳ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು.

ಅದರಂತೆ ಗ್ರಾಪಂನಲ್ಲಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಅಭಿಪ್ರಾಯ ಆಲಿಸಲು ವಿಶೇಷ ಸಭೆ ನಡೆಸಲಾಗಿದೆ. ಕೆಲವರು ತಮ್ಮ ಗ್ರಾಮಗಳನ್ನು, ಪಾಲಿಕೆ ವ್ಯಾಪ್ತಿ ಸೇರ್ಪಡೆಗೆ ಆಕ್ಷೇಪಿಸಿದ್ದಾರೆ. ಆದರೆ ಗ್ರಾಮಗಳ ವ್ಯಾಪ್ತಿಯ ಬಡಾವಣೆಗಳನ್ನು, ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾವು ಮತ್ತೋಡು ಪ್ರದೇಶವನ್ನು ಪಾಲಿಕೆಗೆ ಸೇರ್ಪಡೆ ಮಾಡುವ ಸಲಹೆ ನೀಡಿದ್ದೆನೆ’ ಎಂದು ತಿಳಿಸಿದರು.

ಬಸವನಗಂಗೂರು ಗ್ರಾಮದ ಸದಸ್ಯರೂ ಆದ ಗ್ರಾಪಂ ಉಪಾಧ್ಯಕ್ಷ ರಾಜಶೇಖರಪ್ಪ, ಅದೇ ಗ್ರಾಮದ ಸದಸ್ಯೆ ದೇವಮ್ಮ ಅವರು ಮಾತನಾಡಿದರು. ‘ಬಸವನಗಂಗೂರು ಗ್ರಾಮವನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬಾರದು. ಇದಕ್ಕೆ ಬದಲಾಗಿ ಗ್ರಾಮ ವ್ಯಾಪ್ತಿಯಲ್ಲಿರುವ ವಸತಿ ಬಡಾವಣೆಗಳನ್ನು ಪಾಲಿಕೆ ಸೇರ್ಪಡೆ ಮಾಡಿಕೊಳ್ಳಲಿ’ ಎಂದು  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಳಿದಂತೆ ಚೆನ್ನಮುಂಭಾಪುರ ಗ್ರಾಮದ ಸದಸ್ಯರುಗಳಾದ ಶ್ರೀನಿವಾಸ್, ಮಂಜುನಾಥ್ ಹಾಗೂ ಮಂಜುಳಾ ಮೋಹನ್ ಅವರು ಕೂಡ ಚೆನ್ನಮುಂಭಾಪುರ ಗ್ರಾಮವನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೆ ಆಕ್ಷೇಪವಿದೆ. ತಮ್ಮ ಪ್ರದೇಶ ಗ್ರಾಪಂ ವ್ಯಾಪ್ತಿಯಲ್ಲಿಯೇ ಇರಲಿ ಎಂದು ತಿಳಿಸಿದ್ದಾರೆ.

ಹುಣಸೋಡು ಗ್ರಾಪಂ ಸದಸ್ಯ ವೆಂಕಟೇಶ್ ನಾಯ್ಕ್ ಮತ್ತು ಕಲ್ಲುಗಂಗೂರು ಗ್ರಾಪಂ ಸದಸ್ಯೆ ಗುಳ್ಳೆಮ್ಮ ಅವರು ಕೂಡ ಪಾಲಿಕೆ ವ್ಯಾಪ್ತಿ ಸೇರ್ಪಡೆಯ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿ, ಗ್ರಾಪಂ ಅಧೀನದಲ್ಲಿಯೇ ಇರಲಿ ಎಂದು ತಿಳಿಸಿದರು.

ಪಿಡಿಓ ರಾಜಪ್ಪ ಅವರು ಮಾತನಾಡಿ, ‘ಸಭೆಯಲ್ಲಿ ಗ್ರಾಮಸ್ಥರು ಹಾಗೂ ಸದಸ್ಯರ ಅಭಿಪ್ರಾಯ ಆಲಿಸಲಾಗಿದೆ. ಕೆಲ ಸದಸ್ಯರು ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಕೆಹೆಚ್’ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ಹಾಗೂ ಸುತ್ತಮುತ್ತಲಿನ ಬಡಾವಣೆ ನಿವಾಸಿಗಳು ತಮ್ಮ ಪ್ರದೇಶಗಳನ್ನು ಪಾಲಿಕೆಗೆ ಸೇರ್ಪಡೆ ಮಾಡುವಂತೆ ಕೋರಿದ್ದಾರೆ.

ಜನಪ್ರತಿನಿಧಿಗಳು ಹಾಗೂ ನಿವಾಸಿಗಳ ಅಭಿಪ್ರಾಯವನ್ನು ಆಡಳಿತದ ಗಮನಕ್ಕೆ ತರಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ. ಸಭೆಯಲ್ಲಿ ಗ್ರಾಪಂ ಗ್ರೇಡ್ – 1 ಕಾರ್ಯದರ್ಶಿ ಶಿವಾನಾಯ್ಕ್ ಮೊದಲಾದವರಿದ್ದರು.

ಪ್ರಮುಖರ ಅಭಿಪ್ರಾಯ : ಅಬ್ಬಲಗೆರೆ ಗ್ರಾಮದ ಮುಖಂಡ ಗೋಪಿ ಅವರು ಮಾತನಾಡಿ, ಅಬ್ಬಲಗೆರೆ ಗ್ರಾಮವನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬಾರದು. ಗ್ರಾಮ ವ್ಯಾಪ್ತಿಯಲ್ಲಿ ಕೃಷಿ ಪ್ರದೇಶ ಹೆಚ್ಚಿದೆ. ಈ ಕುರಿತಂತೆ ಗ್ರಾಮಸ್ಥರ ಸಹಿ ಸಂಗ್ರಹಿಸಿ, ಗ್ರಾಪಂಗೆ ಸಲ್ಲಿಸಲಾಗುವುದು’ ಎಂದರು.

ಪತ್ರಕರ್ತ ಬಿ. ರೇಣುಕೇಶ್ ಅವರು ಮಾತನಾಡಿ, ‘ನಗರಕ್ಕೆ ಹೊಂದಿಕೊಂಡಂತಿರುವ ಕೆಹೆಚ್’ಬಿ ಪ್ರೆಸ್ ಕಾಲೋನಿ, ಶ್ರೀ ಬಡಾವಣೆ, ಮಹಾಲಕ್ಷ್ಮೀ ಹಾಗೂ ಶಂಕರಚಾರ್ಯ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು. ಇದರಿಂದ ಸದರಿ ಬಡಾವಣೆಗಳ ಮೂಲಸೌಕರ್ಯ ನಿರ್ವಹಣೆಗೆ ಸಾಕಷ್ಟು ಅನುಕೂಲವಾಗಲಿದೆ. ಈಗಾಗಲೇ ಈ ಸಂಬಂಧ ಕೆಹೆಚ್’ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದಿಂದ ಗ್ರಾಪಂ ಅಧ್ಯಕ್ಷೆ ಹಾಗೂ ಪಿಡಿಓ ಅವರಿಗೆ ಮನವಿ ಅರ್ಪಿಸಲಾಗಿದೆ’ ಎಂದರು.

Shivamogga, Jun. 5: To gather opinions regarding the inclusion of villages under the jurisdiction of Shivamogga Corporation, a special meeting of people’s representatives and villagers was called at Abbalagere Gram Panchayat on Jun. 6.

Shivamogga: Jayanagar police arrested Kalkare Manjana, a Bengaluru resident with 72 cases, by shooting him in the leg! ಶಿವಮೊಗ್ಗ : 72 ಕೇಸ್ ಗಳಿರುವ ಬೆಂಗಳೂರಿನ ಕಲ್ಕರೆ ಮಂಜನ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಜಯನಗರ ಠಾಣೆ ಪೊಲೀಸರು! Previous post shimoga | ಶಿವಮೊಗ್ಗ : 72 ಕೇಸ್ ಗಳಿರುವ ಬೆಂಗಳೂರಿನ ಕಲ್ಕರೆ ಮಂಜನ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಜಯನಗರ ಠಾಣೆ ಪೊಲೀಸರು!
shimoga | Shimoga: The water board has freed the menace of potholes! shimoga | ಶಿವಮೊಗ್ಗ : ಗುಂಡಿ ಗಂಡಾಂತರಕ್ಕೆ ಮುಕ್ತಿ ಕಲ್ಪಿಸಿದ ಜಲ ಮಂಡಳಿ! Next post shimoga | ಶಿವಮೊಗ್ಗ : ಗುಂಡಿ ಗಂಡಾಂತರಕ್ಕೆ ಮುಕ್ತಿ ಕಲ್ಪಿಸಿದ ಜಲ ಮಂಡಳಿ!