
shimoga | ಶಿವಮೊಗ್ಗ ನಗರದಲ್ಲಿ ಶಾಲಾ ವಾಹನಗಳ ವಿರುದ್ದ ಸಾಲುಸಾಲು ಕೇಸ್!
ಶಿವಮೊಗ್ಗ (shivamogga), ಜೂ. 23: ಶಿವಮೊಗ್ಗ ನಗರದಲ್ಲಿ ಶಾಲಾ ವಾಹನಗಳ ತಪಾಸಣಾ ಕಾರ್ಯವನ್ನು ಟ್ರಾಫಿಕ್ ಠಾಣೆಗಳ ಪೊಲೀಸರು ಮುಂದುವರಿಸಿದ್ದಾರೆ. ಜೂ. 23 ರಂದು ಪೂರ್ವ ಹಾಗೂ ಪಶ್ಚಿಮ ಟ್ರಾಫಿಕ್ ಠಾಣೆಗಳ ಪೊಲೀಸರು, ನಿಯಮ ಉಲ್ಲಂಘಿಸಿದ ಶಾಲಾ ವಾಹನಗಳ ವಿರುದ್ದ ಕೇಸ್ ದಾಖಲಿಸಿದ್ದಾರೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಸೋಮವಾರ ಪ್ರಕಟಣೆ ಬಿಡುಗಡೆ ಮಾಡಿದೆ. ಟ್ರಾಫಿಕ್ ಠಾಣೆಗಳ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಶಿವಮೊಗ್ಗ ನಗರಾದ್ಯಂತ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಶಾಲಾ ವಾಹನಗಳ ತಪಾಸಣೆ ನಡೆಸಿದ್ದಾರೆ. ಈ ವೇಳೆ ನಿಯಮ ಉಲ್ಲಂಘನೆ ಮಾಡಿದ ವಾಹನ ಚಾಲಕರ ವಿರುದ್ದ ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.
ವಾಹನಗಳಲ್ಲಿ ನಿಯಮಕ್ಕೆ ವಿರುದ್ಧವಾಗಿ ಅತೀ ಹೆಚ್ಚು ಮಕ್ಕಳನ್ನು ಕೊಂಡೊಯ್ಯುತ್ತಿರುವ ಆರೋಪದ ಮೇರೆಗೆ 17 ಕೇಸ್, ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ 4 ಕೇಸ್, ವಾಹನದ ಫಿಟ್ನೆಸ್ ಪ್ರಮಾಣಪತ್ರ ಹೊಂದಿಲ್ಲದ 3 ಕೇಸ್ ಗಳನ್ನು ಪೊಲೀಸರು ದಾಖಲಿಸಿದ್ದಾರೆ.
ವಾಹನದ ವಿಮೆ, ಎಮಿಷನ್ ರಿಪೋರ್ಟ್ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಅನ್ನು ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳುವಂತೆ ಇದೇ ವೇಳೆ ವಾಹನಗಳ ಚಾಲಕರಿಗೆ ಸೂಚನೆ ನೀಡಲಾಗಿದೆ. ಕಡ್ಡಾಯವಾಗಿ ಸಂಚಾರ ನಿಯಮಗಳ ಪಾಲಿಸುವಂತೆ ಪೊಲೀಸರು ಅರಿವು ಮೂಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
Shivamogga, Jun. 23: The traffic police in Shivamogga city have continued their inspection of school vehicles. On Jun. 23, the police of the East and West traffic stations registered cases against school vehicles that violated the rules. The district police department issued a statement in this regard on Monday. Police officers and staff from traffic stations have been checking school vehicles on major roads across Shivamogga city.