
shimoga crime news | ಶಿವಮೊಗ್ಗ, ಭದ್ರಾವತಿ, ರಿಪ್ಪನ್’ಪೇಟೆಯಲ್ಲಿ ದಾಖಲಾದ ಅಪರಾಧ ವರದಿಗಳ ವಿವರ
shivamogga | ಶಿವಮೊಗ್ಗ : ಬೈಕ್ ಲೋನ್ ನೆಪ – ಮಹಿಳೆಗೆ ಸಾವಿರಾರು ರೂ. ವಂಚನೆ!
ಶಿವಮೊಗ್ಗ, ಜು. 26: ಕಂಪನಿಯೊಂದರ ಮ್ಯಾನೇಜರ್ ಎಂದು ನಂಬಿಸಿ ಮಹಿಳೆಯೋರ್ವರಿಗೆ ಕರೆ ಮಾಡಿದ ವಂಚಕನೋರ್ವ, ಬೈಕ್ ಲೋನ್ ಬಾಕಿ ನೆಪ ಹೇಳಿ ಆನ್’ಲೈನ್ ಮೂಲಕ ಸಾವಿರಾರು ರೂ. ಪಡೆದು ವಂಚಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಸೌಮ್ಯ (35) ಎಂಬುವರೆ ವಂಚನೆಗೊಳಗಾದ ಮಹಿಳೆ ಎಂದು ಗುರುತಿಸಲಾಗಿದೆ. ಈ ಸಂಬಂಧ ಅವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮಹಿಳೆಯ ಮೊಬೈಲ್ ಫೋನ್ ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ವಂಚಕನು ಕಂಪೆನಿಯೊಂದರ ಮ್ಯಾನೇಜ್ ಎಂದು ಪರಿಚಯಿಸಿಕೊಂಡಿದ್ದಾನೆ. ಬೈಕ್ ಲೋನ್ ಬಾಕಿಯಿರುವುದಾಗಿ ತಿಳಿಸಿ, ವಿವಿಧ ರೀತಿಯ ಚಾರ್ಜಸ್ ಪಾವತಿಸುವಂತೆ ಸೂಚಿಸಿದ್ದಾನೆ.
ವಂಚಕನ ಮಾತು ನಂಬಿದ ಮಹಿಳೆಯು 27,900 ರೂ.ಗಳನ್ನ ಆನ್’ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. ನಂತರ ವಂಚನೆಗೊಳಗಾಗಿರುವುದು ಗೊತ್ತಾದ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ripponpet | ರಿಪ್ಪನ್’ಪೇಟೆ : ಕಿರಾಣಿ ಅಂಗಡಿ ಮುಂಭಾಗ ಮದ್ಯ ಸೇವನೆಗೆ ಅವಕಾಶ – ಕೇಸ್ ದಾಖಲು
ಹೊಸನಗರ (hosanagara), ಜು. 26: ಕಿರಾಣಿ ಅಂಗಡಿಯೊಂದರ ಮುಂಭಾಗ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರ ವಿರುದ್ದ ಹೊಸನಗರ ತಾಲೂಕು ರಿಪ್ಪನ್’ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಜು. 25 ರಂದು ನಡೆದಿದೆ.
ಖಚಿತ ವರ್ತಮಾನದ ಮೇರೆಗೆ ಸಬ್ ಇನ್ಸ್’ಪೆಕ್ಟರ್ ರಾಜುರೆಡ್ಡಿರವರು ದಾಳಿ ನಡೆಸಿದ್ದಾರೆ. ಈ ವೇಳೆ 450 ರೂ. ಮೌಲ್ಯದ 9 ಮದ್ಯ ತುಂಬಿದ ಪೌಚ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಯಡಿ ಆರೋಪಿತ ವ್ಯಕ್ತಿ ವಿರುದ್ದ ಪ್ರಕರಣ ದಾಖಲಾಗಿದೆ.
bhadravati | ಭದ್ರಾವತಿ : ಗಾಂಜಾ ಸೇವನೆ – ಆಪಾದಿತನ ವಿರುದ್ದ ಕೇಸ್!
ಭದ್ರಾವತಿ, ಜು. 26: ಗಾಂಜಾ ಸೇವನೆ ಮಾಡಿದ್ದ ಆರೋಪದ ಮೇರೆಗೆ ಓರ್ವನ ವಿರುದ್ದ ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಜು. 25 ರ ರಾತ್ರಿ ನಡೆದಿದೆ.
ಸಬ್ ಇನ್ಸ್’ಪೆಕ್ಟರ್ ರಮೇಶ್ ಅವರು ಗಸ್ತಿನಲ್ಲಿದ್ದ ವೇಳೆ, ಆಂಜನೇಯ ಆಗ್ರಹಾರದ ಬಳಿಯ ರಸ್ತೆಯಲ್ಲಿ ವ್ಯಕ್ತಿಯೋರ್ವ ಅಮಲಿನಲ್ಲಿ ಓಡಾಡುತ್ತಿದ್ದುದು ಕಂಡುಬಂದಿದೆ.
ಸದರಿ ವ್ಯಕ್ತಿ ಸಾರ್ವಜನಿಕರಿಗೆ ಉಪಟಳ ನೀಡಬಹುದೆಂಬ ಸಾಧ್ಯತೆ ಮೇರೆಗೆ ಆತನನ್ನು ವಶಕ್ಕೆ ಪಡೆದು, ಸರ್ಕಾರಿ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. ಈ ವೇಳೆ ಆಪಾದಿತನು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.