
bhadravati | ಭದ್ರಾವತಿ : ಮೂವರಿಗೆ ಜೈಲು ಶಿಕ್ಷೆ – ಕಾರಣವೇನು?
ಭದ್ರಾವತಿ (bhadravathi), ಆಗಸ್ಟ್ 24: : ಮಹಿಳೆಯೋರ್ವರಿಗೆ ಜಾತಿ ನಿಂದನೆ ಮಾಡಿ, ಮಾನಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರಿಗೆ ಜೈಲು ಶಿಕ್ಷೆ ವಿಧಿಸಿ ಭದ್ರಾವತಿ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಭದ್ರಾವತಿ ತಾಲೂಕಿನ ಸಿರಿಯೂರು ವೀರಾಪುರ ಗ್ರಾಮದ ನಿವಾಸಿಗಳಾದ ಶ್ರೀಧರ್, ಮೋಹನ್ ಗೆ 4 ವರ್ಷ ಹಾಗೂ ಹರೀಶ್ ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಆಗಸ್ಟ್ 23 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ ಅವರು ವಾದ ಮಂಡನೆ ಮಾಡಿದ್ದರು.
ಪ್ರಕರಣದ ಹಿನ್ನೆಲೆ : 11-8-2018 ರಂದು ಸಿರಿಯೂರು ವೀರಾಪುರ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೋರ್ವರ ಅಂಗಡಿಗೆ ನುಗ್ಗಿದ್ದ ಅಪರಾಧಿಗಳು ದಾಂಧಲೆ ನಡೆಸಿದ್ದರು. ಪೀಠೋಪಕರಣಗಳನ್ನು ಹಾಳು ಮಾಡಿದ್ದರು. ಜಾತಿ ನಿಂದನೆ ಮಾಡಿ, ಮಾನಹಾನಿಗೆ ಯತ್ನಿಸಿದ್ದರು.
ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ಪೊಲೀಸ್ ಉಪಾಧೀಕ್ಷಕರಾಗಿದ್ದ ಓಂಕಾರನಾಯ್ಕ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.
ಒಟ್ಟಾರೆ ನಾಲ್ವರ ವಿರುದ್ದ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು. ಇದರಲ್ಲಿ ಓರ್ವ ಮೃತಪಟ್ಟಿದ್ದಾನೆ. ಪ್ರಸ್ತುತ ಮೂವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
Bhadravati, August 23: The Bhadravati 4th Additional District and Sessions Court has sentenced three people to four years in prison in a case of caste-based insults and defamation against a woman.