
shimoga | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಿಂದೂ – ಮುಸ್ಲಿಂ ಸಮಾಜಗಳ ಸೌಹಾರ್ದತೆ, ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಮೂರ್ತಿ ಮೆರವಣಿಗೆಗಳು!
ಶಿವಮೊಗ್ಗ (shivamogga), ಆಗಸ್ಟ್ 30: ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶಮೂರ್ತಿಗಳ ವಿಸರ್ಜನಾ ಪೂರ್ವ ಮೆರವಣಿಗೆಗಳು ಹಿಂದೂ – ಮುಸ್ಲಿಂ ಸಮುದಾಯಗಳ ಸೌಹಾರ್ದತೆ, ಭಾವೈಕ್ಯತೆಗೆ ವೇದಿಕೆಗಳಾಗುತ್ತಿವೆ.
ಗಣೇಶಮೂರ್ತಿಗಳ ಮೆರವಣಿಗೆಯಲ್ಲಿ ಮುಸ್ಲಿಂ ಸಮಾಜ ಬಾಂಧವರು ಭಾಗಿಯಾಗಿ, ಗಣೇಶಮೂರ್ತಿಗೆ ಹೂವಿನ ಮಾಲೆ ಅರ್ಪಿಸುತ್ತಿದ್ದಾರೆ. ಹಾಗೆಯೇ ಮೆರವಣಿಗೆಯಲ್ಲಿ ಭಾಗಿಯಾದವರಿಗೆ ತಂಪು ಪಾನೀಯ, ತಿನಿಸು ವಿತರಿಸಿ ಗಮನ ಸೆಳೆಯುತ್ತಿದ್ದಾರೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಆಗಸ್ಟ್ 30 ರಂದು ಪ್ರಕಟಣೆ ಬಿಡುಗಡೆ ಮಾಡಿದೆ. ಆಗಸ್ಟ್ 29 ರ ಶುಕ್ರವಾರ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಳ ಮಲ್ಲಿಕಾರ್ಜುನ ಬಡಾವಣೆಯ ಬಜರಂಗದಳ ಗಣಪತಿ ಮೆರವಣಿಗೆ ಮತ್ತು ಗೋಪಾಳದ ದ್ರೌಪದಮ್ಮ ಕನ್ನಡ ಯುವಕರ ಸಂಘದ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆಗಳು ಹಿಂದೂ – ಮುಸ್ಲಿಂ ಸಮಾಜ ಬಾಂಧವರ ಸೌಹಾರ್ದತೆಗೆ ಸಾಕ್ಷಿಯಾಗಿದ್ದವು.
ಉಳಿದಂತೆ ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಪಂಪ್ ಹೌಸ್ ಗಣಪತಿ, ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸೀಬಿನಕೆರೆ ಗಣಪತಿ, ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಳುಗೋಡು ಗ್ರಾಮದ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಗಳು ಎರಡೂ ಸಮುದಾಯಗಳ ಸೌಹಾರ್ದತೆ – ಸಾಮರಸ್ಯಕ್ಕೆ ವೇದಿಕೆಗಳಾಗಿದ್ದವು.
ಆಯಾ ವ್ಯಾಪ್ತಿಯ ಮಸೀದಿ ಕಮಿಟಿ, ದರ್ಗಾ ಕಮಿಟಿ, ಈದ್ ಮಿಲಾದ್ ಕಮಿಟಿ ಹಾಗೂ ಮುಸ್ಲಿಂ ಮುಖಂಡರುಗಳು ಗಣೇಶಮೂರ್ತಿಗಳಿಗೆ ಹೂವಿನ ಹಾರ ಹಾಕುವ ಮೂಲಕ ಜೊತೆಗೆ ಪಾನೀಯ ಹಾಗೂ ತಿನಿಸುಗಳನ್ನು ಹಂಚುವ ಮೂಲಕ ಸೌಹಾರ್ದತೆ, ಭಾವೈಕ್ಯತೆ ಮೆರೆದಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
Shivamogga, August 30: Pre-immersion processions of Ganesh idols installed in public places in various parts of Shivamogga district are becoming platforms for harmony between Hindu and Muslim communities.