shimoga news | ಶಿವಮೊಗ್ಗ ನಗರದ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ತೀವ್ರ ಕೊರತೆ : ಗಮನಿಸುವುದೆ ಸರ್ಕಾರ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ನವೆಂಬರ್ 5: ರಾಷ್ಟ್ರ – ರಾಜ್ಯದಲ್ಲಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ 2 ನೇ ಹಂತದ ನಗರಗಳಲ್ಲೊಂದಾದ, ಕೋಮು ಸೂಕ್ಷ್ಮ ಪ್ರದೇಶವಾಗಿರುವ ಹಾಗೂ ಅತೀ ಹೆಚ್ಚು ಅಪರಾಧ ಚಟುವಟಿಕೆಗಳು ವರದಿಯಾಗುವ ನಗರಗಳಲ್ಲೊಂದಾದ ಶಿವಮೊಗ್ಗದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಬಲವಿಲ್ಲವಾಗಿದೆ..!
ನಗರದ ಕೆಲ ಪ್ರಮುಖ ಪೊಲೀಸ್ ಠಾಣೆಗಳಲ್ಲಿ, ಸಿಬ್ಬಂದಿಗಳ ತೀವ್ರ ಸ್ವರೂಪದ ಕೊರತೆಯಿರುವ ಮಾಹಿತಿಗಳಿವೆ. ಇದರಿಂದ ಪರಿಣಾಮಕಾರಿ ‘ಪೊಲೀಸಿಂಗ್’ ಸಾಧ್ಯವಾಗುತ್ತಿಲ್ಲವಾಗಿದೆ. ಈಗಿರುವ ಸಿಬ್ಬಂದಿಗಳ ಮೇಲೆ ಕಾರ್ಯಭಾರದ ಒತ್ತಡ ಹೆಚ್ಚಾಗುವಂತಾಗಿದೆ. ಕೆಲವೊಮ್ಮೆ ಹಗಲಿರುಳು ಕಾರ್ಯನಿರ್ವಹಣೆ ಮಾಡುವಂತಾಗಿರುವ ದೂರುಗಳು ಕೇಳಿಬರುತ್ತಿವೆ.
ಕಳೆದ ಸರ್ಕಾರದ ಅವಧಿಯಲ್ಲಿ, ಬೆಂಗಳೂರು ಮಾದರಿಯಲ್ಲಿ ಶಿವಮೊಗ್ಗದ ಪೊಲೀಸ್ ಠಾಣೆಗಳನ್ನು ಇನ್ಸ್’ಪೆಕ್ಟರ್ ಮಟ್ಟದ ಠಾಣೆಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಇನ್ಸ್’ಪೆಕ್ಟರ್ ಮಟ್ಟದ ಠಾಣೆಗಳಲ್ಲಿ ಕನಿಷ್ಠ ಸರಾಸರಿ 70 ರಷ್ಟು ಪೊಲೀಸರಿರಬೇಕು. ಬೆಂಗಳೂರಿನ ಠಾಣೆಗಳಲ್ಲಿ ಸರಾಸರಿ 100, ಅದಕ್ಕಿಂತಲೂ ಹೆಚ್ಚಿನ ಪೊಲೀಸರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಆದರೆ ಶಿವಮೊಗ್ಗದ ಕೆಲ ಪೊಲೀಸ್ ಠಾಣೆಗಳಲ್ಲಿ 35, 40, 50 ಸಿಬ್ಬಂದಿಗಳಿದ್ದಾರೆ. ಸದರಿ ಸಿಬ್ಬಂದಿಗಳಲ್ಲಿ ದೈನಂದಿನ ಠಾಣೆಗೆ ಸಂಬಂಧಿಸಿದ ಕೆಲಸಕಾರ್ಯಗಳಿಗೆ 20 ರಿಂದ 25 ರಷ್ಟು ಬಳಕೆಯಾಗುತ್ತಿದ್ದಾರೆ. ಉಳಿದಂತೆ ಗಸ್ತು, ನಾಗರೀಕರ ಅಹವಾಲು ಆಲಿಕೆ, ಅಪರಾಧ ಪ್ರಕರಣಗಳ ತನಿಖೆ ಮತ್ತೀತರ ಜರೂರು ಕೆಲಸಕಾರ್ಯಗಳಿಗೆ ಉಳಿಯುವವರು ಬೆರಳೆಣಿಕೆಯಷ್ಟು ಸಿಬ್ಬಂದಿಗಳು ಮಾತ್ರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಠಾಣಾಧಿಕಾರಿಗಳಿಗೆ ವಿವಿಧ ಕರ್ತವ್ಯಗಳಿಗೆ ಸಿಬ್ಬಂದಿಗಳ ಹೊಂದಾಣಿಕೆ ಮಾಡುವುದು ಕಷ್ಟಕರವಾಗಿ ಪರಿಣಮಿಸುತ್ತಿದೆ. ಮತ್ತೋಂದೆಡೆ, ನಿರಂತರವಾಗಿ ಏರುತ್ತಿರುವ ಅಪರಾಧ ಚಟುವಟಿಕೆಗಳು, ನಾಗರೀಕರಿಂದ ಹೆಚ್ಚುತ್ತಿರುವ ಪೊಲೀಸ್ ಗಸ್ತು ಬೇಡಿಕೆಗಳು ಠಾಣಾಧಿಕಾರಿಗಳಿಗೆ ಪ್ರತಿದಿನದ ಸವಾಲುಗಳಾಗಿ ಪರಿಣಮಿಸುತ್ತಿದೆ.
ಎಲ್ಲೆಲ್ಲಿ ಕೊರತೆ? : ಲಭ್ಯ ಮಾಹಿತಿ ಅನುಸಾರ ಶಿವಮೊಗ್ಗದ ವಿನೋಬನಗರ ಠಾಣೆ, ಪಶ್ಚಿಮ ಟ್ರಾಫಿಕ್ ಠಾಣೆ, ಪೂರ್ವ ಟ್ರಾಫಿಕ್ ಠಾಣೆ, ಜಯನಗರ ಠಾಣೆ, ಮಹಿಳಾ ಪೊಲೀಸ್ ಠಾಣೆ, ಕೋಟೆ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ಕೊರತೆಯಿದೆ ಎಂದು ಹೇಳಲಾಗುತ್ತಿದೆ.
ತಕ್ಷಣವೇ ಗೃಹ ಇಲಾಖೆಯು ಇತ್ತ ಗಮನಹರಿಸಬೇಕಾಗಿದೆ. ನಾಗರೀಕರ ಹಿತದೃಷ್ಟಿ, ಪರಿಣಾಮಕಾರಿ ಕಾನೂನು – ಸುವ್ಯವಸ್ಥೆಯ ಪರಿಪಾಲನೆ, ಗಸ್ತು ವ್ಯವಸ್ಥೆ ಬಲಪಡಿಸಲು, ಅಪರಾಧ ಚಟುವಟಿಕೆಗಳ ಕಡಿವಾಣ ಹಾಗೂ ಸಿಬ್ಬಂದಿಗಳ ಮೇಲಿನ ಕಾರ್ಯಭಾರದ ಒತ್ತಡ ಕಡಿಮೆ ಮಾಡಲು ಶಿವಮೊಗ್ಗದ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಅಗತ್ಯ ಸಿಬ್ಬಂದಿಗಳ ನಿಯೋಜನೆಗೆ ಕ್ರಮಕೈಗೊಳ್ಳಬೇಕೆಂಬ ಆಗ್ರಹ ಪ್ರಜ್ಞಾವಂತ ನಾಗರೀಕರದ್ದಾಗಿದೆ.
ಶಿವಮೊಗ್ಗ – ಭದ್ರಾವತಿ ಪೊಲೀಸ್ ಕಮೀಷನರೇಟ್ ಮಾಡಲು ಮೀನಮೇಷವೇಕೆ?
*** ಶಿವಮೊಗ್ಗ – ಭದ್ರಾವತಿ ಒಳಗೊಂಡಂತೆ, ಪೊಲೀಸ್ ಕಮೀಷನರೇಟ್ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳದ್ದಾಗಿದೆ. ಆದರೆ ಜಿಲ್ಲೆಯವರೆ ಸಿಎಂ, ಡಿಸಿಎಂ, ಗೃಹ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದರೂ ಪ್ರಮುಖ ಆಡಳಿತಾತ್ಮಕ ಬೇಡಿಕೆಯಾದ ‘ಕಮೀಷನರೇಟ್ ಕಚೇರಿ’ ಸ್ಥಾಪನೆಗೆ ಚಿತ್ತ ಹರಿಸಲಿಲ್ಲ.ಸಂಪೂರ್ಣ ನಿರ್ಲಕ್ಷ್ಯವಹಿಸಿದರು. ಹಾಲಿ ಸರ್ಕಾರದ ಅವಧಿಯಲ್ಲಾದರೂ ನಾಗರೀಕರ ಭದ್ರತೆಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಶಿವಮೊಗ್ಗ – ಭದ್ರಾವತಿ ಪೊಲೀಸ್ ಕಮೀಷನರೇಟ್ ಸ್ಥಾಪನೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ ಜಿ ಪರಮೇಶ್ವರ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ ಎ ಸಲೀಂ ಅವರು ಆದ್ಯ ಗಮನಹರಿಸಬೇಕಾಗಿದೆ. ಇದರಿಂದ ಶಿವಮೊಗ್ಗ – ಭದ್ರಾವತಿಯಲ್ಲಿ ಹೊಸ ಪೊಲೀಸ್ ಠಾಣೆಗಳ ಸ್ಥಾಪನೆಯಾಗುವುದರ ಜೊತೆಗೆ, ಸಿಬ್ಬಂದಿಗಳ ಕೊರತೆಯೂ ನೀಗುವಂತಾಗುತ್ತದೆ. ಜೊತೆಗೆ ಪೊಲೀಸ್ ಇಲಾಖೆಗೂ ಹೆಚ್ಚಿನ ಸೌಲಭ್ಯಗಳು ದೊರಕುವಂತಾಗುತ್ತದೆ.
ಜನಪರ ಕಾರ್ಯಕ್ರಮಗಳತ್ತ ಜನಪ್ರತಿನಿಧಿಗಳಿಗೆ ಆಸಕ್ತಿ ಇಲ್ಲವೇಕೆ?
*** ಶಿವಮೊಗ್ಗ ನಗರದ ಪ್ರಮುಖ ಆಡಳಿತಾತ್ಮಕ ಬೇಡಿಕೆಗಳ ಕುರಿತಂತೆ ಜಿಲ್ಲೆಯ ಸರ್ವ ಪಕ್ಷಗಳ ಜನಪ್ರತಿನಿಧಿಗಳಿಗೆ ಕಿಂಚಿತ್ತೂ ಆಸಕ್ತಿಯಿಲ್ಲದಿರುವುದು ನಿಜಕ್ಕೂ ಸಖೇದಾಶ್ಚರ್ಯ ಸಂಗತಿಯಾಗಿದೆ! ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ, ಶಿವಮೊಗ್ಗ – ಭದ್ರಾವತಿ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪನೆ, ಶಿವಮೊಗ್ಗ ಗ್ರಾಮಾಂತರ – ನಗರ, ಆನವಟ್ಟಿ, ಹೊಳೆಹೊನ್ನೂರು, ಶಿರಾಳಕೊಪ್ಪ ತಾಲೂಕು ಕೇಂದ್ರಗಳ ರಚನೆ, ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭದ್ರಾವತಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಸ್ಥಾಪನೆ, ಸರ್ಕಾರಿ ಸಿಟಿ ಬಸ್ ಸೇವೆ ಸೇರಿದಂತೆ ಹಲವು ಪ್ರಮುಖ ಆಡಳಿತಾತ್ಮಕ ವಿಷಯಗಳು ಮೂಲೆಗುಂಪಾಗಿವೆ. ಇನ್ನಾದರೂ ಜಿಲ್ಲೆಯ ಜನಪ್ರತಿನಿಧಿಗಳು ಇತ್ತ ಚಿತ್ತ ಹರಿಸಬೇಕಾಗಿದೆ.
shivamogga, november 05: Nation – Shivamogga, one of the fastest developing Tier 2 cities in the state, a communally sensitive area and one of the cities with the highest reported crime rates, has a police force that is not proportionate to its population..! There are reports of severe staff shortages in some major police stations in the city, making effective policing impossible. This is putting increased workload pressure on the existing staff.
