shimoga news | ಶಿವಮೊಗ್ಗ : ರಾಜಕಾಲುವೆ ಕೊಳಚೆ ನೀರಲ್ಲಿ ಕುಡಿಯುವ ನೀರು ಪೈಪ್ ಗಳು – ಎಚ್ಚೆತ್ತುಕೊಳ್ಳುವುದೆ ಜಲ ಮಂಡಳಿ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ನವೆಂಬರ್ 10: ಕಲುಷಿತ ಕುಡಿಯುವ ನೀರು ಸೇವನೆಯು, ನಾಗರೀಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಕಾರಣದಿಂದ ಕುಡಿಯುವ ನೀರು ಪೂರೈಕೆಯ ಪೈಪ್ ಲೈನ್ ಗಳು, ಚರಂಡಿ – ರಾಜ ಕಾಲುವೆ ಮೂಲಕ ಹಾದು ಹೋದ ವೇಳೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಕಾಲಕಾಲಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡುತ್ತದೆ.
ಆದರೆ ಶಿವಮೊಗ್ಗ ನಗರದ ದೇವರಾಜ ಅರಸ್ ಬಡಾವಣೆ ಬಳಿಯಿರುವ ಓವರ್ ಹೆಡ್ ಟ್ಯಾಂಕ್ ಮೂಲಕ, ವಿವಿಧ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆಯಾಗುವ ಪೈಪ್ ಲೈನ್ ಗಳು ರಾಜಕಾಲುವೆ ಕೊಳಚೆ ನೀರಲ್ಲಿಯೇ ಹಾದು ಹೋಗಿವೆ..! ಕನಿಷ್ಠ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಮಾಡಿಲ್ಲವಾಗಿದೆ ಎಂದು ಸ್ಥಳೀಯ ಸಾರ್ವಜನಿಕರು ದೂರುತ್ತಾರೆ.
ನೀರು ಪೂರೈಕೆ : ದೇವರಾಜ ಅರಸು ಬಡಾವಣೆ ಓವರ್ ಹೆಡ್ ಟ್ಯಾಂಕ್ ನಿಂದ ಶಾರದಮ್ಮ ಲೇಔಟ್, ಮೈತ್ರಿ ಅಪಾರ್ಟ್ ಮೆಂಟ್, ದೇವರಾಜ ಅರಸು ಬಡಾವಣೆ, ಸೂರ್ಯ ಲೇಔಟ್, ಪಿ ಅಂಡ್ ಟಿ ಲೇಔಟ್, ಸಹ್ಯಾದ್ರಿ ನಗರ, ಜೆ ಹೆಚ್ ಪಟೇಲ್ ಬಡಾವಣೆ, ಸೋಮಿನಕೊಪ್ಪ ಸುತ್ತಮುತ್ತಲಿನ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ.
ಓವರ್ ಹೆಡ್ ಟ್ಯಾಂಕ್ ಹೊರ ಭಾಗದಲ್ಲಿಯೇ ಕಾಶೀಪುರ ಕಡೆಯಿಂದ ಬರುವ ರಾಜ ಕಾಲುವೆ ಹಾದು ಹೋಗಿದೆ. ಸದರಿ ಕಾಲುವೆ ಕೊಳಚೆ ನೀರಲ್ಲಿಯೇ ನೀರು ಪೂರೈಕೆಯ ಪೈಪ್ ಗಳು ಹಾದು ಹೋಗಿವೆ. ಕಾಲುವೆ ಮೂಲಕ ಪೈಪ್ ಹಾಕುವ ವೇಳೆ, ಕನಿಷ್ಠ ಕಡ್ಡಾಯ ಸುರಕ್ಷತಾ ಕ್ರಮಗಳ ಪಾಲನೆ ಮಾಡಿಲ್ಲವೆಂಬುವುದು ನಾಗರೀಕರ ಆರೋಪವಾಗಿದೆ.
‘ರಾಜಕಾಲುವೆ ಮೇಲ್ಭಾಗದಿಂದ, ಕೊಳಚೆ ನೀರಿನ ಸಂಪರ್ಕಕ್ಕೆ ಆಸ್ಪದವಾಗದಂತೆ ಪೈಪ್ ಗಳನ್ನು ಕೊಂಡೊಯ್ಯಬೇಕಾಗಿತ್ತು. ಆದರೆ ಇವ್ಯಾವ ಕಾರ್ಯಗಳು ಆಗಿಲ್ಲ. ಕೊಳಚೆ ನೀರಲ್ಲಿಯೇ ಪೈಪ್ ಗಳನ್ನು ಹಾಕಲಾಗಿದೆ. ಪೈಪ್ ಗಳು ಏನಾದರೂ ದುರಸ್ತಿಯಾದರೆ, ನೇರವಾಗಿ ಕೊಳಚೆ ನೀರು ಪೈಪ್ ಗಳಲ್ಲಿ ಸೇರ್ಪಡೆಯಾಗುತ್ತದೆ.
ಹಾಗೆಯೇ ಪೈಪ್ ಗಳ ಬಳಿ ಕಸಕಡ್ಡಿ, ಪ್ಲಾಸ್ಟಿಕ್ ಮತ್ತೀತರ ವಸ್ತುಗಳು ಸಿಲುಕಿ ಸರಾಗವಾಗಿ ನೀರು ಹರಿದು ಹೋಗಲು ಸಮಸ್ಯೆಯಾಗುತ್ತಿದೆ. ಮಳೆಗಾಲದ ವೇಳೆ ರಾಜಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿದು ಹೋಗಲು ಅಡಚಣೆಯಾಗುತ್ತಿದೆ. ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದ್ದಾರೆ’ ಎಂದು ಸ್ಥಳೀಯ ಕೆಲ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಎಚ್ಚೆತ್ತುಕೊಳ್ಳಲಿ : ತಕ್ಷಣವೇ ಜಲ ಮಂಡಳಿ ಆಡಳಿತ ಇತ್ತ ಗಮನಹರಿಸಬೇಕಾಗಿದೆ. ದೇವರಾಜ ಅರಸು ಬಡಾವಣೆ ಓವರ್ ಹೆಡ್ ಟ್ಯಾಂಕ್ ಬಳಿಯ ರಾಜಕಾಲುವೆ ಬಳಿ ಹಾದು ಹೋಗಿರುವ ಪೈಪ್ ಗಳ ಬಳಿ, ಅಗತ್ಯ ಸುರಕ್ಷತಾ ಕ್ರಮಗಳ ಪಾಲನೆ ಮಾಡಬೇಕಾಗಿದೆ ಎಂಬುವುದು ನಾಗರೀಕರ ಆಗ್ರಹವಾಗಿದೆ.
ಓವರ್ ಹೆಡ್ ಟ್ಯಾಂಕ್ ನಿಂದ ನೀರು ಸೋರಿಕೆ..!
*** ದೇವರಾಜ ಅರಸು ಓವರ್ ಹೆಡ್ ಟ್ಯಾಂಕ್ ನ ಹೊರಭಾಗದಿಂದ ನೀರು ಸೋರಿಕೆಯಾಗುತ್ತಿದೆ. ಕ್ರಮೇಣ ನೀರು ಸೋರಿಕೆಯ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಹಾಗೆಯೇ ಟ್ಯಾಂಕ್ ಪ್ರವೇಶ ದ್ವಾರದ ಬಳಿಯೇ ಪೈಪ್ ಒಡೆದು ಅಪಾರ ಪ್ರಮಾಣದ ಕುಡಿಯುವ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಹಲವು ದಿನಗಳಿಂದ ಅವ್ಯವಸ್ಥೆಯಿದ್ದರೂ ಇಲ್ಲಿಯವರೆಗೂ ದುರಸ್ತಿಗೆ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ಟ್ಯಾಂಕ್ ಆವರಣದಲ್ಲಿರುವ ಉದ್ಯಾನವನ ಸಂಪೂರ್ಣ ಕೊಳಚೆಮಯವಾಗಿದೆ. ತಕ್ಷಣವೇ ಜಲ ಮಂಡಳಿ ಇತ್ತ ಗಮನಹರಿಸಿ, ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕಾಗಿದೆ ಎಂದು ನಾಗರೀಕರು ಒತ್ತಾಯಿಸುತ್ತಾರೆ.
shivamogga, november 10: The pipelines that supply drinking water to various settlements through the overhead tank near Devaraja Urs Layout in Shivamogga City have passed through the sewage water of Rajakaluve..! Minimum precautionary measures have not been followed.
