shimoga palike | ಶಿವಮೊಗ್ಗ ಪಾಲಿಕೆಯಲ್ಲಿನ ‘ಸಂಜೆ ಗುಪ್ತ ವ್ಯವಹಾರ’ಗಳಿಗೆ ಬ್ರೇಕ್ ಹಾಕಿದ ಆಯುಕ್ತರು!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ನವೆಂಬರ್ 13: ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಗೆ ಸಂಜೆ 6 ಗಂಟೆ ನಂತರ, ಅನದಿಕೃತ ಪ್ರವೇಶ ನಿರ್ಬಂಧಿಸಿ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ. ಈ ಸಂಬಂಧ ಪಾಲಿಕೆ ಹೊರಭಾಗದಲ್ಲಿ ಫ್ಲೆಕ್ಸ್ ಕೂಡ ಹಾಕಲಾಗಿದ್ದು, ಇದು ಸಾಕಷ್ಟು ಗಮನ ಸೆಳೆಯುತ್ತಿದೆ!
ಪಾಲಿಕೆ ಕಚೇರಿ ಆವರಣದಲ್ಲಿ ನಡೆಯುವ ‘ಸಂಜೆ ಗುಪ್ತ ವ್ಯವಹಾರ’ಗಳಿಗೆ ಇತಿಹಾಸವೇ ಇದೆ. ಹಗಲು ವೇಳೆ ಜನರ ಕೈಗೆ ಸಿಗದ ಕೆಲ ವಿಭಾಗದ ಅಧಿಕಾರಿ – ಸಿಬ್ಬಂದಿಗಳು, ‘ಸಂಜೆ’ ವೇಳೆ ಮಾತ್ರ ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಿರುತ್ತಿದ್ದರು. ಇದರಿಂದ ಕೆಲ ವಿಭಾಗಗಳಲ್ಲಿ ಜನ ಸಂದಣಿ ಕಂಡುಬರುತ್ತಿತ್ತು.
ಹಗಲು ವೇಳೆ ನಡೆಯದ ಎಲ್ಲ ‘ವ್ಯವಹಾರ’ಗಳು ಸಂಜೆ ಸಮಯದಲ್ಲಿ ನಡೆಯುತ್ತಿದ್ದವು. ಈ ಕಾರಣದಿಂದ ಪಾಲಿಕೆಯ ಸಂಜೆ ಗುಪ್ತ ವ್ಯವಹಾರಗಳಿಗೆ ಸಾಕಷ್ಟು ಮಹತ್ವವಿತ್ತು. ಈ ಕುರಿತಂತೆ ಹಲವು ಆರೋಪಗಳು, ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದವು.
ಆದರೆ ‘ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು..?’ ಎಂಬಂತಾಗಿತ್ತು. ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯಿದ್ದರೂ ಯಾವುದೇ ಕ್ರಮಕೈಗೊಂಡಿರಲಿಲ್ಲ. ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಕಣ್ಮುಚ್ಚಿ ಕುಳಿತುಕೊಂಡಿದ್ದರು.
ಹದ್ದಿನ ಕಣ್ಣು : ಪಾಲಿಕೆ ಕಚೇರಿಯ ವಿವಿಧ ವಿಭಾಗಗಳಲ್ಲಿ ಸಂಜೆ ವ್ಯವಹಾರದ ಮಾಹಿತಿ ಹೊಂದಿದ್ದ ಆಯುಕ್ತ ಮಾಯಣ್ಣ ಗೌಡರವರು, ಇದೀಗ ಇದಕ್ಕೆ ಕಡಿವಾಣ ಹಾಕಲು ಕ್ರಮಕೈಗೊಂಡಿದ್ದಾರೆ. ಈ ಕಾರಣದಿಂದ ಕಚೇರಿ ಅವಧಿ ಪೂರ್ಣಗೊಂಡ ನಂತರ ಪಾಲಿಕೆ ಆವರಣಕ್ಕೆ ಅನದಿಕೃತ ಪ್ರವೇಶ ನಿರ್ಬಂಧದ ಆದೇಶ ಹೊರಡಿಸಿದ್ದಾರೆ.
‘ಸಂಜೆ 6 ಗಂಟೆ ನಂತರ ಪಾಲಿಕೆ ಕಚೇರಿ ಆವರಣಕ್ಕೆ ಅನಧಿಕೃತ ಪ್ರವೇಶ ನಿರ್ಬಂಧಿಸಲಾಗಿದೆ’ ಎಂಬ ಸಂದೇಶವುಳ್ಳ ಫ್ಲೆಕ್ಸ್ ಗಳನ್ನು ಪಾಲಿಕೆ ಕಚೇರಿ ಹೊರಭಾಗದಲ್ಲಿ ಹಾಕಿಸಿದ್ದಾರೆ. ಇದು ಆಡಳಿತ ವಲಯದಲ್ಲಿ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಮತ್ತೊಂದೆಡೆ, ಸಂಜೆ ವ್ಯವಹಾರಗಳತ್ತ ಆಯುಕ್ತರು ಹದ್ದಿನ ಕಣ್ಣಿಟ್ಟಿರುವ ಕಾರಣದಿಂದ ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಸಂಜೆ ವೇಳೆ ಕಂಡುಬರುತ್ತಿದ್ದ ಚಟುವಟಿಕೆಗಳಿಗೆ ಬ್ರೇಕ್ ಕೂಡ ಬಿದ್ದಿರುವ ಮಾಹಿತಿಗಳು ಕೇಳಿಬರುತ್ತಿವೆ.
ಪಾಲಿಕೆ ಸಹಾಯವಾಣಿಯತ್ತ ಗಮನಹರಿಸಲಿ…!
*** ಆನ್’ಲೈನ್ ಆಧಾರಿತವಾಗಿ ನಾಗರೀಕರು ಮೂಲಸೌಕರ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಹವಾಲು ತೋಡಿಕೊಳ್ಳುವ ವ್ಯವಸ್ಥೆಯನ್ನು, ಈ ಹಿಂದಿನ ವರ್ಷಗಳಲ್ಲಿ ಮಹಾನಗರ ಪಾಲಿಕೆ ಆಡಳಿತ ಮಾಡಿತ್ತು. ವ್ಯಾಟ್ಸಾಪ್, ಫೇಸ್ ಬುಕ್, ಟ್ವಿಟರ್ ಮತ್ತೀತರ ಸಾಮಾಜಿಕ ಜಾಲತಾಣಗಳ ಮೂಲಕ ನಾಗರೀಕರು ವ್ಯಕ್ತಪಡಿಸುತ್ತಿದ್ದ ಅಹವಾಲುಗಳನ್ನು ಪಾಲಿಕೆ ಆಡಳಿತ ಪರಿಹರಿಸುತ್ತಿತ್ತು. ಆದರೆ ಸದ್ಯ ಈ ಎಲ್ಲ ವ್ಯವಸ್ಥೆಗಳು ಮೂಲೆಗುಂಪಾಗಿವೆ. ಪಾಲಿಕೆ ಸಹಾಯವಾಣಿ ವ್ಯವಸ್ಥೆಯನ್ನು ಮತ್ತಷ್ಟು ಜನೋಪಯೋಗಿಯಾಗಿ ಮಾಡುವ ನಿಟ್ಟಿನಲ್ಲಿ ಆಯುಕ್ತ ಮಾಯಣ್ಣಗೌಡರವರು ಕ್ರಮಕೈಗೊಳ್ಳಬೇಕಾಗಿದೆ ಎಂಬ ಸಲಹೆ ನಾಗರೀಕರದ್ದಾಗಿದೆ.
Shivamogga, November 13: The Municipal Commissioner has ordered to restrict unauthorized entry to the Shivamogga Municipal Corporation office after 6 pm. A flex has also been put up outside the corporation in this regard, which is attracting a lot of attention!
