shimoga news | ಶಿವಮೊಗ್ಗ ಜಿಲ್ಲೆಯ ಅತೀ ದೊಡ್ಡ ಗ್ರಾಪಂ ಅಬ್ಬಲಗೆರೆಗೆ ‘ಭಾರ’ವಾದ ಬಡಾವಣೆಗಳು : ಗಮನಹರಿಸುವುದೆ ರಾಜ್ಯ ಸರ್ಕಾರ ?!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಡಿಸೆಂಬರ್ 24: ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆ, ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ ಅಬ್ಬಲಗೆರೆ ಗ್ರಾಪಂನದ್ದಾಗಿದೆ. ಸಾಕಷ್ಟು ವಿಶಾಲ – ವ್ಯಾಪ್ತಿ ಹೊಂದಿದೆ. ಮಹಾನಗರ ಪಾಲಿಕೆಯ ಎರಡ್ಮೂರು ವಾರ್ಡ್ ಗಳ ವಿಸ್ತೀರ್ಣವಿದೆ!
ಸದರಿ ಗ್ರಾಪಂ ಆಡಳಿತಕ್ಕೆ 7 ಹಳ್ಳಿಗಳು ಹಾಗೂ ಸರಿಸುಮಾರು 30 ಕ್ಕೂ ಹೆಚ್ಚು ಲೇಔಟ್ ಗಳು ಸೇರ್ಪಡೆಯಾಗುತ್ತವೆ. ನಗರಕ್ಕೆ ಹೊಂದಿಕೊಂಡಂತಿರುವ ಹಲವು ಬಡಾವಣೆಗಳು ಗ್ರಾಪಂ ವ್ಯಾಪ್ತಿಯಲ್ಲಿವೆ. ಬಡಾವಣೆಗಳಲ್ಲಿ ಸಾವಿರಾರು ಜನರು ವಾಸಿಸುತ್ತಿದ್ದಾರೆ.
ಆದರೆ ವಿಶಾಲ ಗ್ರಾಪಂನಲ್ಲಿ ಅಗತ್ಯ ಸೌಲಭ್ಯಗಳಿಲ್ಲವಾಗಿದೆ. ಇದರಿಂದ ನಾಗರೀಕರು ತೀವ್ರ ತೊಂದರೆ ಪಡುವಂತಾಗಿದೆ. ಮೂಲಸೌಕರ್ಯ ಪಡೆಯಲು ಪರದಾಡುವಂತಾಗಿದೆ. ಅನುದಾನದ ಕೊರತೆ ಮತ್ತೀತರ ಕಾರಣಗಳಿಂದ ತೊಂದರೆಗೆ ಸಿಲುಕುವಂತಾಗಿದೆ.
ಪರದಾಟ : ಗ್ರಾಪಂ ಅಧೀನದಲ್ಲಿರುವ ಬಡಾವಣೆಗಳಲ್ಲಿ ಸ್ವಚ್ಛತೆ, ರಸ್ತೆ ದುರಸ್ತಿ, ಕುಡಿಯುವ ನೀರು ಪೂರೈಕೆ, ಅಭಿವೃದ್ದಿ ಕಾರ್ಯಗಳು ಮರೀಚಿಕೆಯಾಗಿವೆ. ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಹಳ್ಳಿಗಳ ಅಭಿವೃದ್ದಿ ಕಾರ್ಯಗಳಿಗೆ ಸಾಕಾಗದಂತಹ ಸ್ಥಿತಿಯಿದೆ!
ಪ್ರಸ್ತುತ ಪ್ರತಿಯೊಂದು ಬಡಾವಣೆಗಳಲ್ಲಿಯೂ ಯುಜಿಡಿ (ಒಳ ಚರಂಡಿ) ವ್ಯವಸ್ಥೆಯಿದೆ. ಆದರೆ ಗ್ರಾಪಂನಲ್ಲಿ ಯುಜಿಡಿ ದುರಸ್ತಿಯ ಪ್ರತ್ಯೇಕ ವಾಹನ – ಸಿಬ್ಬಂದಿಗಳಿಲ್ಲ. ಇದರಿಂದ ಬಡಾವಣೆಗಳಲ್ಲಿ ಯುಜಿಡಿ ಅವ್ಯವಸ್ಥೆ ಉಂಟಾದ ವೇಳೆ, ಪಾಲಿಕೆ ಆಡಳಿತದ ಮೂಲಕವೇ ನಾಗರೀಕರು ದುರಸ್ತಿಗೊಳಿಸುವಂತಾಗಿದೆ ಎಂದು ಕೆಲ ಬಡಾವಣೆಗಳ ನಾಗರೀಕರು ಹೇಳುತ್ತಾರೆ.
ಉಳಿದಂತೆ ಚರಂಡಿಗಳ ಸ್ವಚ್ಛತೆ, ಕಸ ಸಂಗ್ರಹಣೆ ವ್ಯವಸ್ಥೆಯೂ ನಿಯಮಿತವಾಗಿ ನಡೆಯುವುದಿಲ್ಲ. ತಿಂಗಳುಗಳೇ ಉರುಳಿದರೂ ಚರಂಡಿಗಳು ಸ್ವಚ್ಛವಾಗುವುದಿಲ್ಲ. ಮನೆ ಮನೆಗೆ ಕಸ ಸಂಗ್ರಹಣೆಯ ವಾಹನ ದಿನನಿತ್ಯ ಆಗಮಿಸುವುದಿಲ್ಲ. ಕೆಲವೆಡೆ ವಾರಕ್ಕೆ ಎರಡು ದಿನ ಮಾತ್ರ ಬರುತ್ತದೆ ಎಂದು ನಾಗರೀಕರು ಅಳಲು ತೋಡಿಕೊಳ್ಳುತ್ತಾರೆ.
ಪಾಲಿಕೆಗೆ ಸೇರ್ಪಡೆಗೊಳಿಸಲಿ : ಅಬ್ಬಲಗೆರೆ ಗ್ರಾಪಂ ಅಧೀನದಲ್ಲಿ ಸುಮಾರು 30 ವಸತಿ ಬಡಾವಣೆಗಳಿವೆ. ಇದರಲ್ಲಿ ಬಹುತೇಕ ಬಡಾವಣೆಗಳು ಪಾಲಿಕೆ ವ್ಯಾಪ್ತಿಗೆ ಹೊಂದಿಕೊಂಡಂತೆ ಇವೆ. ಇಂತಹ ಬಡಾವಣೆಗಳನ್ನು ಪಾಲಿಕೆ ಆಡಳಿತ ವ್ಯಾಪ್ತಿಗೆ ಸೇರ್ಪಡೆಗೊಳಿಸಿದರೆ ನಾಗರೀಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಬಡಾವಣೆಗಳ ನಿವಾಸಿಗಳು ಆಗ್ರಹಿಸುತ್ತಾರೆ.
ಹುದ್ದೆ ಖಾಲಿ : ಅಬ್ಬಲಗೆರೆ ಗ್ರಾಪಂನಲ್ಲಿ ಕಾರ್ಯಭಾರದ ಒತ್ತಡ ಹೆಚ್ಚಿದೆ. ಆದರೆ ಕಳೆದ ಹಲವು ತಿಂಗಳುಗಳಿಂದ ಗ್ರೇಡ್ – 1 ಕಾರ್ಯದರ್ಶಿ ಹುದ್ದೆ ಖಾಲಿ ಬಿದ್ದಿದೆ. ಈ ಹಿಂದೆ ಸದರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಾನಾಯ್ಕ್ ಎಂಬುವರನ್ನು ವರ್ಗಾವಣೆಗೊಳಿಸಿದ ನಂತರ, ಮತ್ತೋಬ್ಬರನ್ನು ನಿಯೋಜಿಸಲಾಗಿತ್ತು. ಆದರೆ ಅನಾರೋಗ್ಯ ಹಿನ್ನೆಲೆಯಲ್ಲಿ, ಸದರಿ ಅಧಿಕಾರಿಯು ಕೂಡ ಕೆಲ ದಿನಗಳಲ್ಲಿಯೇ ಬೇರೆಡೆಗೆ ವರ್ಗಾವಣೆಯಾಗಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಗ್ರೇಡ್ – 1 ಕಾರ್ಯದರ್ಶಿ ಹುದ್ದೆಯೂ ಹಲವು ತಿಂಗಳುಗಳಿಂದ ಖಾಲಿ ಬೀಳುವಂತಾಗಿದೆ.
ಇನ್ನಾದರೂ ರಾಜ್ಯ ಸರ್ಕಾರ ಬಡಾವಣೆಗಳ ಭಾರದಿಂದ ಬಳಲುತ್ತಿರುವ ಅಬ್ಬಲಗೆರೆ ಗ್ರಾಪಂ ಆಡಳಿತಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಈ ಮೂಲಕ ನಾಗರೀಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಲಿದೆಯೇ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಬೇಡಿಕೆಗಳ ಈಡೇರಿಕೆಗೆ ಗಮನಹರಿಸುವರೆ ಅಧಿಕಾರಿಗಳು?

- ಪ್ರತ್ಯೇಕ ಯುಜಿಡಿ ವಾಹನ, ಸಿಬ್ಬಂದಿಗಳ ವ್ಯವಸ್ಥೆ
- ಮನೆ ಮನೆ ಕಸ ಸಂಗ್ರಹಣೆಗೆ ಮತ್ತೊಂದು ವಾಹನ
- ಗ್ರಾಪಂನಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ
- ಪ್ರತ್ಯೇಕ ಪೌರ ಕಾರ್ಮಿಕರ ನೇಮಕ
- ಬಡಾವಣೆಗಳಿಗೆ ಜಲ ಮಂಡಳಿಯಿಂದ ಕುಡಿಯುವ ನೀರು ಪೂರೈಕೆ
- ರಸ್ತೆ ನಿರ್ಮಾಣ, ದುರಸ್ತಿಗೆ ಪ್ರತ್ಯೇಕ ಅನುದಾನ
- ಪಾಲಿಕೆ ವ್ಯಾಪ್ತಿಗೆ ಬಡಾವಣೆಗಳ ಸೇರ್ಪಡೆಗೆ ಕ್ರಮ
shimoga : The pride of being the largest Gram Panchayat in Shivamogga district belongs to Abbalagere Gram Panchayat, which is adjacent to Shivamogga city. It has a very wide scope. It covers an area of two or three wards of the Mahanagara Palike. The said Gram Panchayat administration includes 7 villages and approximately 30 layouts. Many layouts that are adjacent to the city are within the Grampan jurisdiction. Thousands of people live in the layouts.
